ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಕೆ.ಗೋಪಾಲಯ್ಯ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಗಟು ಗೋದಾಮುಗಳಿಗೆ ಸಾಗಿಸಿರುವ ಆಹಾರ ಧಾನ್ಯಗಳಲ್ಲಿ ಕಳಪೆ ಮಟ್ಟದ ಬೇಳೆ ಕಾಳುಗಳು ಸರಬರಾಜಾಗಿರುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಸಚಿವ ಕೆ. ಗೋಪಾಲಯ್ಯ.

ಸಚಿವ ಕೆ. ಗೋಪಾಲಯ್ಯ.

  • Share this:
ಬೆಂಗಳೂರು (ಜೂನ್ 12); ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಪಡಿತರ ವಿತರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಟಿಎಪಿಸಿಎಂಎಸ್ ಆಹಾರ ಧಾನ್ಯ ಸಗಟು ಗೋದಾಮಿಗೆ ಇಂದು ದಿಢೀರ್ ಭೇಟಿ ನೀಡಿ ಅಕ್ಕಿ, ಗೋಧಿ, ತೊಗರಿಬೇಳೆ ಮತ್ತು ಕಡಲೆಕಾಳುಗಳನ್ನು ಮೂಟೆಗಳನ್ನು ಬಿಚ್ಚಿ ಖುದ್ದು ಪರಿಶೀಲನೆ ನಡೆಸಿದ ಸಚಿವ ಗೋಪಾಲಯ್ಯ, ಗ್ರಾಹಕರಿಗೆ ವಿತರಿಸಲು ದಾಸ್ತಾನು ಮಾಡಿದ್ದ ಕಡಲೆಕಾಳಿನ ಮೂಟೆಯಲ್ಲಿ ಕಸಕಡ್ಡಿ ಕಂಡುಬಂದಿದ್ದರಿಂದ,

ಗುಣಮಟ್ಟವಿಲ್ಲದ ಕಾಳುಗಳ ವಿತರಣೆಯನ್ನು ತಕ್ಷಣ  ಸ್ಥಗಿತಗೊಳಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆ ಉಪನಿರ್ದೇಶಕ ಆರ್.ಡಿ. ಸುಬ್ರಹ್ಮಣ್ಯಗೆ ಆದೇಶಿಸಿದರು. ಅಲ್ಲದೆ, ಪಡಿತರ ವಿತರಣೆಗೂ ಮುನ್ನ ಪರಿಶೀಲಿಸಬೇಕು ಹಾಗೂ ಕಡಲೆ ಕಾಳಿನಲ್ಲಿನ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಬೇಕು. ಸ್ವಚ್ಚತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಗಟು ಗೋದಾಮುಗಳಿಗೆ ಸಾಗಿಸಿರುವ ಆಹಾರ ಧಾನ್ಯಗಳಲ್ಲಿ ಕಳಪೆ ಮಟ್ಟದ ಬೇಳೆ ಕಾಳುಗಳು ಸರಬರಾಜಾಗಿರುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ. ಕಳಪೆ ಪಡಿತರ ಸರಬರಾಜು ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಹಾಗೆಯೇ ಗುಣಮಟ್ಟವಿಲ್ಲದ ಕಾಳುಗಳನ್ನು ಹಿಂಪಡೆದು ಗುಣಮಟ್ಟದ ಬೇಳೆ ಕಾಳು ಪೂರೈಸುವಂತೆ ಆದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ : ಕೊನೆಗೂ ಸಂಸತ್‌ ಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ; ಮೋದಿಗೆ ಕೊಡ್ತಾರಾ ಮಾಸ್ಟರ್‌ ಸ್ಟ್ರೋಕ್?

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಮುಂಗಡ ಪಡಿತರ ವಿತರಣೆಯಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡುದಾರರ ಜತೆಗೆ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಆಧಾರ್ ಕಾರ್ಡ್ ಮಾನದಂಡದಲ್ಲಿ ಪಡಿತರ ವಿತರಣೆಯಾಗುತ್ತಿದೆ.  ಎಲ್ಲಿಯೂ ಪಡಿತರ ವಿತರಣೆಯಲ್ಲಿ ಲೋಪವಾಗಬಾರದು ಎಂಬ ಕಾರಣಕ್ಕೆ ಖುದ್ದು ಪರಿಶೀಲನೆ ನಡೆಸುತ್ತಿರುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.
First published: