ರಾಮನಗರ; ರಾಜ್ಯ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಇದು ಲಜ್ಜೆಗೆಟ್ಟ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ - 19 ಕುರಿತು ಅಧಿಕಾರಿಗಳ ಸಭೆ ನಡೆಸಿದ ಸುರೇಶ್ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಬಗ್ಗೆ ಸರಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ಪಿಂಕ್ ವಾರಿಯರ್ಸ್ ಕೈಯಲ್ಲಿ 24 ಗಂಟೆ ದುಡಿಸಿಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಬಿಸಿಲಿನಲ್ಲಿ ಅವರೆಲ್ಲ ಕೆಲಸ ಮಾಡಿದ್ದಾರೆ. ನಾಲ್ಕು ತಿಂಗಳಿಗೆ ನಾಲ್ಕು ಸಾವಿರ ನೀಡಿದರೆ ಹೇಗೆ ಎಂದರು.
ಇನ್ನು ಕೇಂದ್ರ ಸರಕಾರವೇ ಮಾಡಿದ್ದ ವೇತನ ಕಾಯ್ದೆ ಈಗ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು. ಇನ್ನು ಕನಿಷ್ಠ ಆರು ಇಲ್ಲವೆ ಎಂಟು ಸಾವಿರ ವೇತನವನ್ನ ಹೆಚ್ಚಿಸಬೇಕು. ಆಶಾ ಕಾರ್ಯಕರ್ತೆಯರನ್ನು ನೊಡಿದರೆ ನನಗೆ ಅಯ್ಯೋ ಅನ್ನಿಸುತ್ತದೆ. ಅವರು ಬಿಸಿಲಿನಲ್ಲಿ ನಡೆದುಕೊಂಡು ಓಡಾಡುತ್ತಿದ್ದನ್ನು ಗಮನಿಸಿದ್ದೇನೆ. ನಾನು ಕಾರಿನಲ್ಲಿ ಹೋಗುತ್ತಿದ್ದಾಗ ಅವರನ್ನು ಕರೆದು ಮಾತನಾಡಿಸಿದ್ದೇನೆ. ರಾಮನಗರ, ಮಂಡ್ಯ, ತುಮಕೂರು ಭಾಗದಲ್ಲಿ ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡಿದ್ದನ್ನು ಕಂಡಿದ್ದೇನೆ. ಆದರೆ ನಾವೇನೆ ಹೇಳಿದರೂ ಸರ್ಕಾರ ನಮ್ಮ ಮಾತು ಕೇಳುವುದಿಲ್ಲ. ನಾವೇನು ಹೇಳಿ ಏನು ಸುಖ ಎಂದು ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು. ಇನ್ನುಸದ್ಯಕ್ಕೆ ಏಳು ದಿನ ಲಾಕ್ ಡೌನ್ ಮಾಡಿದ್ದಾರೆ. ಅದೇ ಪುಣ್ಯ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ: ಹಾಸನ ಕೋವಿಡ್ ಆಸ್ಪತ್ರೆಯ ಚಿಕಿತ್ಸೆ, ಉಟೋಪಚಾರದ ವಿಡಿಯೋ ಹಂಚಿಕೊಂಡ ಆಡಳಿತ ಮಂಡಳಿ
ರಾಮನಗರ ಕೊರೋನಾ ಚಿಕಿತ್ಸಾ ಕೇಂದ್ರಕ್ಕೂ ಭೇಟಿ ನೀಡಿದ ಸಂಸದ ಡಿ.ಕೆ.ಸುರೇಶ್ ಅವರು ಸೋಂಕಿತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವಾರ್ಡ್ಗಳಲ್ಲಿ ಇರುವ ಸೋಂಕಿತರ ಜೊತೆ ಕೆಲ ಕಾಲ ಕಳೆದು, ಅವರಿಗೆ ದೈರ್ಯ ತುಂಬಿದರು. ಜೊತೆಗೆ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಊಟ ಉಪಚಾರ ಸೇರಿದಂತೆ ಇತರೆ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ