ಬಾಗಲಕೋಟೆ (ಮಾರ್ಚ್ 22) : ಬಾಗಲಕೋಟೆ ಜಿಲ್ಲೆ ಬಾದಾಮಿ ಮತ್ತು ಬೀಳಗಿ ತಾಲ್ಲೂಕಿನ 16 ಸಾವಿರ ಹೆಕ್ಟೇರ್ ನೀರಾವರಿ ವಂಚಿತ ಪ್ರದೇಶಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರು ತುಂಬಿಸಿ ಕೆರೂರು ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಬಾದಾಮಿ ಕ್ಷೇತ್ರದ ಶಾಸಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆರೂರು ಏತನೀರಾವರಿ ಯೋಜನೆಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಸಭೆಯಲ್ಲಿ ಬಾದಾಮಿ ಮತ್ತು ಬೀಳಗಿ ವಿಧಾನಸಭಾ ಕ್ಷೇತ್ರದ ಸುಮಾರು 16 ಕ್ಷೇತ್ರದ ಹೆಕ್ಟೇರ್ ನೀರಾವರಿ ಪ್ರದೇಶಕ್ಕೆ ₹525 ಕೋಟಿ ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಸುಮಾರು 2 ಟಿಎಂಸಿ ನೀರನ್ನು ಬಳಸಿಕೊಂಡು ಕೆರೂರು ಏತನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದು ಬೀಳಗಿ ಕ್ಷೇತ್ರದ ಶಾಸಕ,ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
2019-20ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೆರೂರು ಏತನೀರಾವರಿ ಯೋಜನೆಗೆ ₹300 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದರು. ಇದರಲ್ಲಿ ಮೊದಲ ಹಂತವಾಗಿ ಮುಖ್ಯ ಕಾಮಗಾರಿಗೆ ₹310 ಕೋಟಿ, ಪಶ್ಚಿಮ ಮುಖ್ಯ ಕಾಲುವೆ ನಿರ್ಮಾಣಕ್ಕೆ ₹110 ಕೋಟಿ, ಪಶ್ಚಿಮ ಮುಖ್ಯ ಕಾಲುವೆ ನಿರ್ಮಾಣಕ್ಕೆ ₹105 ಕೋಟಿ ಸೇರಿದಂತೆ ಒಟ್ಟು ₹525 ಕೋಟಿ ಯೋಜನೆ ಇದಾಗಿತ್ತು.
ಈ ಯೋಜನೆಯನ್ನು ಮೂರು ಹಂತದಲ್ಲಿ ಅಂದರೆ ಮೊದಲ ಹಂತದಲ್ಲಿ ₹310 ಕೋಟಿ, 2ನೇ ಹಂತದಲ್ಲಿ ₹110 ಕೋಟಿ, ಮತ್ತು 3ನೇ ಹಂತದಲ್ಲಿ ₹105 ಕೋಟಿ ಕೈಗೆತ್ತಿಕೊಳ್ಳಲಾಗುತ್ತದೆ.
ಕೃಷ್ಣ ಮೇಲ್ದಂಡೆ ಯೋಜನೆ ಹಂತ 3ರಡಿ ಹೆರಕಲ್ ಏತನೀರಾವರಿ ಉಪಯೋಜನೆಯಡಿ ಬೀಳಗಿ ತಾಲ್ಲೂಕಿನ 12,100 ಹೆಕ್ಟೇರ್ ಹಾಗೂ ಮಲಪ್ರಭಾ ಎಡೆದಂಡೆ ಕಾಲುವೆ ಹಾಗೂ ಘಟಪ್ರಭಾ ಬಲದಂಡೆ ಕಾಲುವೆಯ ಮಧ್ಯಭಾಗದಲ್ಲಿರುವ ಎತ್ತರ ಪ್ರದೇಶದಲ್ಲಿರುವ ಬಾದಮಿ ತಾಲ್ಲೂಕಿನ ಅಚ್ಚುಕಟ್ಟು ಕ್ಷೇತ್ರ ಒಳಗೊಂಡಂತೆ 16 ಸಾವಿರ ಹೆಕ್ಟರ್ ಪ್ರದೇಶಕ್ಕೆ ಕೆರೂರು ಏತ ನೀರಾವರಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಕೃಷ್ಣ ಭಾಗ್ಯ ಜಲ ನಿಯಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದೀಗ ಸಚಿವ ಸಂಪುಟ ಸಭೆ ಈ ಯೋಜನೆಗೆ ಹಸಿರು ನಿಶಾನೆ ತೋರಿರುವುದು ಅನೇಕ ವರ್ಷಗಳ ಯೋಜನೆಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ.ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಕೊನೆಗೂ ಸರ್ಕಾರ ಹಸಿರು ನಿಶಾನೆ ತೋರಿರುವುದು ಈ ಭಾಗದ ಜನತೆಯಲ್ಲಿ ಮಂದಹಾಸ ಮೂಡುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ