ಜಾತಿ ರಾಜಕಾರಣ ಮಾಡುವವರಿಗೆ ರಾಜ್ಯ ಉಪಚುನಾವಣೆ ಪಾಠ ಕಲಿಸಿದೆ: ಸಚಿವ ಬಿ.ಸಿ.ಪಾಟೀಲ್ ಟಾಂಗ್
ಈ ಗೆಲುವಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಾಧನೆಗಳೇ ದೊಡ್ಡ ಮಟ್ಟದ ಗೆಲವು ದಾಖಲಿಸಲು ಕಾರಣ ಎಂದು ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡ (ನವೆಂಬರ್ 11); ಶಿರಾ ಮತ್ತು ಆರ್ಆರ್ ನಗರ ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷಕ್ಕೆ ಅಭುತಪೂರ್ವ ಗೆಲುವು ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಜಾತಿ ರಾಜಕಾರಣ ಮಾಡುವವರಿಗೆ ದೊಡ್ಡ ಪಾಠ ಕಲಿಸಿದ್ದಾರೆ ಎಂದು ಹೇಳುವ ಮೂಲಕ ಸಚಿವ ಬಿ.ಸಿ. ಪಾಟೀಲ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಇತ್ತೀಚೆಗೆ ಮೃತಪಟ್ಟಿದ್ದರು. ಅಲ್ಲದೆ, ಆರ್ಆರ್ ನಗರ ಶಾಸಕ ಮುನಿರತ್ನ ಪಕ್ಷಾಂತರ ಮಾಡಿದ್ದ ಕಾರಣಕ್ಕೆ ಈ ಎರಡೂ ಕ್ಷೇತ್ರದಲ್ಲಿ ನವೆಂಬರ್ 07 ರಂದು ಉಪ ಚುನಾವಣೆ ನಡೆಸಲಾಗಿತ್ತು. ಈ ಚುನಾವಣಾ ಫಲಿತಾಶ ನವೆಂಬರ್ 10 ರಂದು ಹೊರ ಬಿದ್ದಿದ್ದು, ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದೆ.
ಈ ಕುರಿತು ಧಾರವಾಡದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ರಾಜಕಾರಣ ಲೆಕ್ಕಕ್ಕೆ ಬರಲ್ಲ. ಮತದಾರರು ಕೆಲಸ ಮಾಡುವ ಸರ್ಕಾರದ ಪರವಾಗಿ ಇರುವರೆಂಬುದಕ್ಕೆ ಶಿರಾ ಹಾಗೂ ಆರ್.ಆರ್. ನಗರವೇ ಸಾಕ್ಷಿ. ಎರಡು ವಿಧಾನಸಭೆ ಉಪಚುನಾವಣೆ ಹಾಗೂ ಮೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರ ಬಿಜೆಪಿ ಪರವಾಗಿ ತೀರ್ಪು ನೀಡಿದ್ದು, ಬಿಜೆಪಿ ಮೇಲೆ ಮತದಾರರು ನಂಬಿಕೆ ಇಟ್ಟು ಗೆಲುವು ತಂದಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಸಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಕ್ಕಲಿಗರ ಮತವನ್ನು ಕಾಂಗ್ರೆಸ್ ಪರ ಸೆಳೆಯಲು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಆದರೆ, ಆ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ. ಇದೇ ಕಾರಣಕ್ಕೆ ನಿನ್ನೆ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಸಚಿವ ಆರ್. ಅಶೋಕ್ ಸಹ ಇದೇ ರೀತಿಯ ಹೇಳಿಕೆ ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿದ್ದರು. ಇಂದು ಬಿ.ಸಿ. ಪಾಟೀಲ್ ಸಹ ಡಿಕೆಶಿ ಜಾತಿ ರಾಜಕಾರಣ ಕರ್ನಾಟಕದಲ್ಲಿ ನಡೆಯೊಲ್ಲ ಎಂದು ಪರೋಕ್ಷವಾಗಿ ಜರಿದಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾತನಾಡಿರುವ ಬಿ.ಸಿ. ಪಾಟೀಲ್, "ಈ ಗೆಲುವಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಾಧನೆಗಳೇ ದೊಡ್ಡ ಮಟ್ಟದ ಗೆಲವು ದಾಖಲಿಸಲು ಕಾರಣ" ಎಂದು ತಿಳಿಸಿದ್ದಾರೆ.
ಇದಲ್ಲದೆ, "ಬೆಳೆವಿಮೆ ಹಾಗೂ ಪರಿಹಾರ ಬಂದಿಲ್ಲ ಎಂಬ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು , ಕೆಲವು ತಾಂತ್ರಿಕ ತೊಂದರೆಗಳಿಂದ ವಿಳಂಬ ಆಗಿತ್ತು. ಆದರೆ, ಈಗ ಎಲ್ಲವನ್ನೂ ಸರಿಪಡಿಸಿದ್ದು, 2015-16, 2016-17, 2017-18, 2018-19, 2019-20 ಐದೂ ವರ್ಷದ ಬೆಳೆವಿಮೆ ಬಿಡುಗಡೆ ಆಗಿದೆ. ಇನ್ನೂ ಧಾರವಾಡ ಕೃಷಿ ವಿವಿಯಲ್ಲಿ ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳ ಭರ್ತಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಶೀಘ್ರವೇ ಕ್ರಮ ಕೈಗೊಳ್ಳುವುದು" ಎಂದು ಅವರು ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ