news18-kannada Updated:January 17, 2021, 1:08 PM IST
ಕೊರೋನಾ ಲಸಿಕೆ.
ಬೆಂಗಳೂರು(ಜ. 17): ದೇಶಾದ್ಯಂತ ನಿನ್ನೆ ಪ್ರಾರಂಭವಾದ ಲಸಿಕೆ ಅಭಿಯಾನ ಇಂದು ಎರಡನೇ ದಿನವೂ ಉತ್ಸಾಹದಿಂದ ಮುಂದುವರಿದಿದೆ. ಅನೇಕ ಮಂದಿ ಫ್ರಂಟ್ಲೈನ್ ವೈದ್ಯಕೀಯ ಸಿಬ್ಬಂದಿ ಇಂದು ಲಸಿಕೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು 42 ಕೇಂದ್ರಗಳಲ್ಲಿ ವ್ಯಾಕ್ಸಿನೇಶನ್ ನಡೆಯುತ್ತಿದ್ದು 4052 ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಲು ನಿಗದಿಯಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ಇವತ್ತಿನ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಇಂದು ಕೊರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿ 80 ವರ್ಷದ ಡಾ. ಸುಬ್ಬಲಕ್ಷ್ಮೀ ಅವರಾಗಿದ್ಧಾರೆ. ಕಳೆದ ಹಲವು ವರ್ಷಗಳಿಂದ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿರುವ ಡಾ. ಸುಬ್ಬಲಕ್ಷ್ಮೀ ಅವರು ಈ ವ್ಯಾಕ್ಸಿನ್ ಬಗ್ಗೆ ಯಾರಿಗೂ ಭಯ ಬೇಡ. ನಿರಾತಂಕವಾಗಿ ಹಾಕಿಸಿಕೊಳ್ಳಬಹುದು ಎಂದು ಧೈರ್ಯ ಹೇಳಿದ್ದಾರೆ.
ಸೇಂಟ್ ಫಿಲೋಮಿನಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಶಂಕರ್ ಪ್ರಸಾದ್ ಅವರೇ ಖುದ್ದಾಗಿ ಲಸಿಕೆ ಹಾಕಿಸಿಕೊಂಡು ತಮ್ಮ ಆಸ್ಪತ್ರೆ ಸಿಬ್ಬಂದಿಗೆ ಪ್ರೇರೇಪಿಸುವ ಕೆಲಸ ಮಾಡಿದ್ದಾರೆ. ಬಿಬಿಎಂಪಿ ಮಾರ್ಗಸೂಚಿ ಅನ್ವಯ ಸೇಂಟ್ ಫಿಲೋಮಿನಾ ಆಸ್ಪತ್ರೆಯ 400 ಸಿಬ್ಬಂದಿಗೆ ಲಸಿಕೆ ಹಾಕಲು ನಾಲ್ಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಅವರೇ ಸ್ವತಹ ಲಸಿಕೆ ಹಾಕಿಸಿಕೊಂಡು ಉಳಿದವರಿಗೂ ಉತ್ಸಾಹ ತುಂಬಿದ್ದಾರೆ.
ಇನ್ನೊಂದೆಡೆ, ನಿನ್ನೆ ಮೊದಲ ದಿನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಮಣಿಪಾಲ ಆಸ್ಪತ್ರೆ ಛೇರ್ಮನ್ ಡಾ. ಸುದರ್ಶನ್ ಬಲ್ಲಾಳ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ತಮಗೆ ಯಾವ ರೀತಿಯ ಅಡ್ಡ ಪರಿಣಾಮ ಆಗಿಲ್ಲವೆಂದು ಹೇಳಿದ್ದಾರೆ. ವ್ಯಾಕ್ಸಿನ್ ತೆಗೆದುಕೊಂಡು ಒಂದು ದಿನವಾಗಿದೆ. ಏನೇನೂ ಸೈಡ್ ಎಫೆಕ್ಟ್ ಆಗಿಲ್ಲ. ಹೀಗಾಗಿ, ವ್ಯಾಕ್ಸಿನ್ ಬಹಳ ಸೇಫ್ ಎನಿಸುತ್ತಿದೆ. ಇಂಗ್ಲೆಂಡ್ನಲ್ಲೆಲ್ಲಾ ಈ ವ್ಯಾಕ್ಸಿನ್ (ಕೋವಿಶೀಲ್ಡ್) ತೆಗೆದುಕೊಳ್ಳುತ್ತಿದ್ದಾರೆ. ಯಾರೂ ಭಯಪಡದೇ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ಧಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಶೇ.62 ಲಸಿಕೆ ವಿತರಣೆ; ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು, ದಕ್ಷಿಣ ಕನ್ನಡ ಕೊನೆ; ಸಚಿವ ಸುಧಾಕರ್
ನಮ್ಮ ಮಣಿಪಾಲ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು 4,200 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ದೇಶದಲ್ಲೇ ನಮ್ಮದು ಅತಿಹೆಚ್ಚು ಅಂದುಕೊಂಡಿದ್ದೇನೆ. ಬಹಳ ಶಿಸ್ತಾಗಿ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಲಸಿಕೆ ಪಡೆದ ಮೇಲೂ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಇತ್ಯಾದಿ ನಿಯಮಗಳನ್ನ ಮುಂದುವರಿಸಬೇಕು. ಯಾರೂ ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬೇಕು. ಇದರಿಂದ ತುಂಬಾ ಜನರ ಜೀವ ಉಳಿಯುತ್ತದೆ ಎಂದು ಡಾ. ಸುದರ್ಶನ್ ಬಲ್ಲಾಳ್ ಅಭಿಪ್ರಾಯಪಟ್ಟಿದ್ಧಾರೆ.
ಲಸಿಕೆ ಪಡೆದವರು ಆಲ್ಕೋಹಾಲ್ ಸೇವಿಸುವುದು ಒಳ್ಳೆಯದಲ್ಲ. ಆರೋಗ್ಯಯುತ ಜೀವನಶೈಲಿ ನಮ್ಮದಾಗಿರಬೇಕು. ರಷ್ಯಾದಲ್ಲಿ ಲಸಿಕೆ ಪಡೆದವರು ಆಲ್ಕೋಹಾಲ್ ಸೇವನೆ ಮಾಡಬಾರದು ಎಂದು ಸೂಚಿಸಲಾಗಿದೆ. ಮದ್ಯ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಜ್ವರ, ನೋವು ಬಂದರೆ ರೆಸ್ಟ್ ತೆಗೆದುಕೊಳ್ಳಬೇಕು ಎಂದು ಮಣಿಪಾಲ ಆಸ್ಪತ್ರೆ ನಿರ್ದೇಶಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿಯನ್ನು ಕೂಡಲೇ ಬಂಧಿಸಬೇಕು: ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಮಣಿಪಾಲ ಆಸ್ಪತ್ರೆಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ನಿನ್ನೆ ಮೊದಲ ದಿನ ರಾಜ್ಯದಲ್ಲಿ ನಿಗದಿಯಾದವರ ಪೈಕಿ ಶೇ. 62ಕ್ಕಿಂತ ಹೆಚ್ಚು ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ. ಮೊದಲ ಡೋಸ್ ತೆಗೆದುಕೊಂಡು 2ನೇ ಡೋಸ್ ತೆಗೆದುಕೊಳ್ಳುವವರೆಗೂ ನಡುವಳಿಗೆ ಬದಲಾಯಿಸಬಾರದು. ರೋಗ ನಿರೋಧಕ ಶಕ್ತಿ ಬರಲು 45 ದಿನ ಬೇಕಾಗುತ್ತದೆ. ಅಲ್ಲಿಯವರೆಗೆ ನಡುವಳಿಗೆ ಬದಲಾಗಬಾರದು ಎಂದು ತಿಳಿಹೇಳಿದ್ದಾರೆ
ಮದ್ಯಸೇವನೆಯಿಂದ ಲಸಿಕೆ ಶಕ್ತಿ ಕುಂದುವ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಅಧ್ಯಯನ ಮಾಡುತ್ತೇವೆ. ತಜ್ಞರ ಸಮಿತಿ ಅಭಿಪ್ರಾಯ ಗಮನಕ್ಕೆ ಬಂದಿದೆ. ಅಧಿಕೃತವಾಗಿ ವರದಿ ತರಿಸಿಕೊಂಡು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಭೇಟಿಯನ್ನು ಪ್ರಸ್ತಾಪಿಸಿದ ಅವರು, ರಾಜ್ಯದ ಲಸಿಕಾ ಕಾರ್ಯಕ್ರಮದ ಬಗ್ಗೆ ಅವರು ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ವರದಿ: ಮುನಿರಾಜು / ಶರಣು ಹಂಪಿ
Published by:
Vijayasarthy SN
First published:
January 17, 2021, 1:07 PM IST