ಬಸವ ನಾಡಿನಲ್ಲಿ ತರಗತಿಗಳು ಆರಂಭ : ಪಿಯುಗಿಂತ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳ

ಕಾಲೇಜಿಗೆ ಬೆಳಿಗ್ಗೆ ಚಳಿಯ ಮಧ್ಯೆಯೂ 7.30ರೊಳಗೆ ಆಗಮಿಸಿದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ತಮ್ಮ ಪೋಷಕರ ಒಪ್ಪಿಗೆ ಪತ್ರ ತೋರಿಸಿ, ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು ತರಗತಿಗಳಿಗೆ ಹಾಜರಾದರು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಜಯಪುರ(ಜನವರಿ. 01): ಬಸವ ನಾಡಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಕಾಲೇಜಗಳು ಆರಂಭವಾಗಿದ್ದು, ಮೊದಲ ದಿನ ವಿದ್ಯಾರ್ಥಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಳಿಗ್ಗೆಯಿಂದಲೇ ನಾನಾ ಶಾಲಾ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಗಮಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ತಿಂಗಳಿಂದ ಮುಚ್ಚಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಕಾಲೇಜುಗಳು ಇಂದು ಆರಂಭವಾಗಿವೆ. ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಶಾಲೆ ಮತ್ತು ಕಾಲೇಜುಗಳ ಆಡಳಿತ ಮಂಡಳಿಗಳು ನಿನ್ನೆಯಿಂದಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದವು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಸರಕಾರ ಸೂಚಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲು ಶಾಲಾ ಆಡಳಿತ ಮಂಡಳಿಗಳು ಪಾಲಿಸಿದ್ದವು. 

ವಿಜಯಪುರ ಪಿಯು ಇಲಾಖೆ ಉಪ ನಿರ್ದೇಶಕ ದಡ್ಡಿ ಅವರ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 221 ಪದವಿ ಪೂರ್ವ ಕಾಲೇಜುಗಳಿದ್ದು, ದ್ವಿತೀಯ ವರ್ಷಕ್ಕೆ ಈ ಬಾರಿ 22560 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.  ಈವರೆಗೆ ಆನಲೈನ್ ಮೂಲಕ ಪಾಠ ಮಾಡುತ್ತಿದ್ದುದರಿಂದ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರೂ ಅಂತರ್ಜಾಲದ ಮೂಲಕ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳ ಆರಂಭದ ಬಗ್ಗೆ ಮೊದಲೇ ಮಾಹಿತಿ ಇದ್ದುದರಿಂದ ವಿದ್ಯಾರ್ಥಿಗಳೂ ಕೂಡ ಮೊದಲ ದಿನ ಕಾಲೇಜು ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟು 22560 ವಿದ್ಯಾರ್ಥಿಗಳಲ್ಲಿ 5958 ಜನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದು, ಶೇ. 26.40 ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು.  ಸಾಮಾನ್ಯವಾಗಿ ಕಾಲೇಜು ಆರಂಭದ ಮೊದಲ ದಿನ ಸಿಗುವಷ್ಟೇ ಪ್ರತಿಕ್ರಿಯೆ ಈ ಬಾರಿಯೂ ಸಿಕ್ಕಿರುವುದು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ತೋರುತ್ತಿರುವ ಉತ್ಸಾಹಕ್ಕೆ ಸಾಕ್ಷಿಯಾಗಿದೆ.ವಿಜಯಪುರ ನಗರದ ಸರಕಾರಿ ಬಾಲಕಿಯರ ಮತ್ತು ಬಾಲಕರ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆಗಮನಕ್ಕೆ ಉಪನ್ಯಾಸಕರು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದು, ಸುಣ್ಣದಿಂದ ಬಾಕ್ಸ್ ಹಾಕಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುಕೂಲ ಮಾಡಿದ್ದರು.  ಅಲ್ಲದೇ, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲೇಜಿಗೆ ಬೆಳಿಗ್ಗೆ ಚಳಿಯ ಮಧ್ಯೆಯೂ 7.30ರೊಳಗೆ ಆಗಮಿಸಿದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ತಮ್ಮ ಪೋಷಕರ ಒಪ್ಪಿಗೆ ಪತ್ರ ತೋರಿಸಿ, ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು ತರಗತಿಗಳಿಗೆ ಹಾಜರಾದರು.

ಶಾಲೆ ಆರಂಭದ ಬಗ್ಗೆ ಸ್ವಾತಿ ಉಂಬಾಸೆ ಸಂತಸ ವ್ಯಕ್ತಪಡಿಸಿದ್ದು, ನೆಟ್​​ವರ್ಕ್ ಸಮಸ್ಯೆಯಿಂದಾಗಿ ಆನ್ ಲೈನ್ ತರಗತಿಗಳಿಗೆ ತೊಂದರೆಯಾಗುತ್ತಿತ್ತು. ಪಿಯು ಸೈನ್ಸ್ ಓದುತ್ತಿರುವುದರಿಂದ ಸಮಸ್ಯೆಯಾಗಿತ್ತು. ಈಗ ಭೌತಕ ತರಗತಿಗಳು ಆರಂಭವಾಗಿರುವುದರಿಂದ ಸ್ನೇಹಿತೆಯರೊಂದಿಗೆ ಚರ್ಚಿಸಲು ಮತ್ತು ಶಿಕ್ಷಕರೊಂದಿಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳ ಆಗಮನದ ಹಿನ್ನೆಲೆಯಲ್ಲಿ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯ ಸಾವಳಸಂಗ ಮತ್ತು ಬಾಲಕರ ಪಿಯು ಕಾಲೇಜಿನ ಪ್ರಾಚಾರ್ಯ ಉಂಬರ್ಜೆ ಕಾಲೇಜಿನ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿಸಿ ಕೊರೋನಾ ಮಾರ್ಗಸೂಚಿ ಪಾಲನೆ ಮಾಡಿದ್ದರು.

ಇನ್ನು ಎಸ್ ಎಸ್ ಎಲ್ ಸಿ ತರಗತಿಗಳೂ ಕೂಡ ಆರಂಭವಾಗಿದ್ದು, ವಿಜಯಪುರ ಜಿಲ್ಲೆಯಲ್ಲಿರುವ 624 ಶಾಲೆಗಳಲ್ಲಿ ಈ ಬಾರಿ 39824 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಂದು ಮೊದಲ ದಿನ 14795 ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಶೇ. 37.15 ರಷ್ಟು ಮಕ್ಕಳ ಹಾಜರಾತಿ ದಾಖಲಾಗಿದೆ ಎಂದು ವಿಜಯಪುರ ಡಿಡಿಪಿಐ ಎನ್. ವಿ. ಹೊಸೂರ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಸರಸ್ವತಿ ಪೂಜೆಯೊಂದಿಗೆ ತರಗತಿ ಆರಂಭ :

ವಿಜಯಪುರ ನಗರದ ಶತಮಾನದ ಶಾಲೆ ಪಿಡಿಜೆ ಹೈಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ತರಗತಿ ಆರಂಭಕ್ಕೂ ಮುನ್ನ ವಿದ್ಯಾ ದೇವತೆ ಸರಸ್ವತಿಯ ಪೂಜೆ ನಡೆಸಲಾಯಿತು. ಪಿಡಿಜೆ ಹೈಸ್ಕೂಲ್ ಎ ವಿಭಾಗದ ಮುಖ್ಯ ಶಿಕ್ಷಕ ಎಂ. ಎ. ಆಲೂರ ಮತ್ತು ಪಿಡಿಜೆ ಬಿ ಹೈಸ್ಕೂಲ್ ಮುಖ್ಯ ಶಿಕ್ಷಕಿ ಕೆ. ಎಂ. ಸೀತಿಮನಿ ಉಪಸ್ಥಿತರಿದ್ದು ಮಕ್ಕಳನ್ನು ಬರಮಾಡಿಕೊಂಡರು.

ಇದನ್ನೂ ಓದಿ : ನಾಲ್ಕು ತಿಂಗಳ ನಂತರ ಕಾರಜೋಳ ಕಲಬುರ್ಗಿಗೆ : ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ದ ಗರಂ

ಈ ಎರಡೂ ಹೈಸ್ಕೂಲುಗಳಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪೋಷಕರಿಂದ ಮೊದಲೇ ಒಪ್ಪಿಗೆ ಪತ್ರ ಸಂಗ್ರಹಿಸಲಾಗಿತ್ತು. ಅಲ್ಲದೇ, ಭೌತಿಕ ತರಗತಿಗಳಿಗೆ ಆಗಮಿಸಿದ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರವೇಶ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಮಂಜುಳಾ ಹಿರೇಮಠ ಮತ್ತು ಆಯುಷ ನೀಲಣ್ಣವರ ಶಾಲೆಗಳು ಆರಂಭವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಕೊರೋನಾ ಹಿನ್ನೆಲೆಯಲ್ಲಿ ಸ್ನೇಹಿತರಿಂದ ದೂರವಾಗಿದ್ದ ಇವರಿಗೆ ಶಾಲಾರಂಭ ಶಿಕ್ಷಕರೊಂದಿಗೆ ನೇರ ಸಂಪರ್ಕ ಹೊಂದಲು ಮತ್ತು ಸಹಪಾಠಿಗಳೊಂದಿಗೆ ಬೆರೆತು ವಿದ್ಯಾಭ್ಯಾಸ ಮಾಡಲು ಅನುಕೂಲವಾಗಿದೆ ಎಂದು ನ್ಯೂಸ್ 18 ಕನ್ನಡದ ಜೊತೆ ಸಂತಸ ಹಂಚಿಕೊಂಡರು.
Published by:G Hareeshkumar
First published: