ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಶಾಕ್; ರೋಗ ಲಕ್ಷಣವುಳ್ಳವರ ಪರೀಕ್ಷೆಗೆ ಸಚಿವೆ ಜೊಲ್ಲೆ ಸೂಚನೆ

ಕಂಟೈನ್ಮೆಂಟ್ ವಲಯ ಸೇರಿದಂತೆ ಇತರ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಬೇಕು. ಐಎಲ್​ಐ ಮತ್ತು ಎಸ್​ಎಆರ್​ಐ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಇಂಥ ಲಕ್ಷಣವುಳ್ಳವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಜಿಲ್ಲಾಸ್ಪತ್ರಗಳ ವೈದ್ಯರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

ವಿಜಯಪುರ ಜಿಲ್ಲಾಡಳಿತದೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ಇಂದು ಸಭೆ ನಡೆಸಿದರು.

ವಿಜಯಪುರ ಜಿಲ್ಲಾಡಳಿತದೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ಇಂದು ಸಭೆ ನಡೆಸಿದರು.

  • Share this:
ವಿಜಯಪುರ (ಜೂ. 23); ಕೊರೋನಾ ಕಾಟದ ಮಧ್ಯೆ ಪರೀಕ್ಷೆಗೆ ತಯಾರಿ ನಡೆಸಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಗೆ ಕೊರೋನಾ ಶಾಕ್ ನೀಡಿದೆ. ಪರೀಕ್ಷೆ ಆರಂಭವಾಗುವ ಎರಡು ದಿನ ಮೊದಲು ಎಸ್​ಎಸ್​ಎಲ್​ಸಿ ಓದುತ್ತಿದ್ದ 16 ವರ್ಷದ ಬಾಲಕಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬಾಲಕಿ ಅಷ್ಟೇ ಅಲ್ಲ, ಆಕೆಯ ಕುಟುಂಬಸ್ಥರಿಗೂ ಆಘಾತ ನೀಡಿದೆ.

ವಿಜಯಪುರದ ಖ್ವಾಜಾ ನಗರದ ನಿವಾಸಿ 16 ವರ್ಷದ ವಿದ್ಯಾರ್ಥಿನಿ ಕೊರೋನಾ ಕಾಟದ ಮಧ್ಯೆಯೂ ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತಯಾರಿ ನಡೆಸಿದ್ದಳು. ವಿಜಯಪುರ ನಗರದ ಅಂಜುಮನ್ ಶಾಲೆಯಲ್ಲಿ ಓದುತ್ತಿದ್ದ P- 9708 16 ವರ್ಷದ ವಿದ್ಯಾರ್ಥಿನಿಗೆ P-8972 59 ವರ್ಷದ ಪುರುಷನಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗ ಈ ವಿದ್ಯಾರ್ಥಿನಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಾರಿ ಈ ವಿದ್ಯಾರ್ಥಿನಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.  ಹೀಗಾಗಿ ಮುಂದಿನ ಬಾರಿ ಈಕೆ ಬರೆಯುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಪ್ರಥಮ ಪರೀಕ್ಷೆ ಎಂದು ಪರಿಗಣಿಸಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ್ದಾರೆ. ಅಲ್ಲದೇ, ಇಂದಿನಿಂದ ವಿಜಯಪುರ ನಗರದಲ್ಲಿ ಸಚಿವರ ಕಚೇರಿ ಆರಂಭಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶಶಿಕಲಾ ಜೊಲ್ಲೆ, ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಲಕ್ಷಣವುಳ್ಳವರನ್ನು ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಅದರಲ್ಲಿಯೂ ಐಎಲ್​ಐ ಮತ್ತು ಎಸ್​ಎಆರ್​ಐ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಅಧಿಕಾರಿಗಳು ಕೂಡ ಇಂಥ ಲಕ್ಷಣವುಳ್ಳವರನ್ನು ಗುರುತಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕಂಟೈನ್ಮೆಂಟ್ ವಲಯ ಸೇರಿದಂತೆ ಇತರ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಬೇಕು. ಐಎಲ್​ಐ ಮತ್ತು ಎಸ್​ಎಆರ್​ಐ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಇಂಥ ಲಕ್ಷಣವುಳ್ಳವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಜಿಲ್ಲಾಸ್ಪತ್ರಗಳ ವೈದ್ಯರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯ ನಿರ್ವಹಿಸಬೇಕು. ಕೊರೋನಾದಿಂದ ಸಂಭವನೀಯ ಸಾವಿನ ಪ್ರಮಾಣವನ್ನು ಕೂಡ ಕಡಿಮೆಯಾಗುವಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿರುವ ಕೊರೋನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.  ಈವರೆಗೆ ಜಿಲ್ಲೆಯಲ್ಲಿ 26,612 ಜನರ ಗಂಟಲು ದ್ರವ ಮಾದರಿ ನೆಗೆಟಿವ್ ಬಂದಿದ್ದು, 26,989 ಲಕ್ಷಣವುಳ್ಳ ಜನರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಸಂಗ್ರಹಿಸಲಾಗಿದೆ. 12,808 ಜನರು 28 ದಿನಗಳ ಐಸೊಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 21,097 ಜನರು 1 ರಿಂದ 28 ದಿನಗಳ ರಿಪೊರ್ಟಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 220 ಗುಣಮುಖರಾದ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 7 ಜನರು ಕೊರೋನಾ ಪಾಸಿಟಿವ್ ರೋಗಿಗಳು ಮೃತಪಟ್ಟಿದ್ದಾರೆ. ಈಗ 34,132 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಈ ಹಿಂದೆ ಒಟ್ಟು 76 ಕಂಟೈನ್ಮೆಂಟ್ ಝೋನ್​ಗಳನ್ನು ಮಾಡಲಾಗಿತ್ತು. ಈಗ ಒಟ್ಟು 34 ಕಂಟೈನ್ಮೆಂಟ್ ವಲಯಗಳು ಚಾಲ್ತಿಯಲ್ಲಿದ್ದು, 42 ವಲಯಗಳನ್ನು ಡಿನೋಟಿಫಿಕೆಶನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ: 5 ತಿಂಗಳ ಮಗು ಸೇರಿ ಮಾವನ ಮನೆಯ ನಾಲ್ವರಿಗೆ ಕೊರೋನಾ ಹಬ್ಬಿಸಿದ ಪೊಲೀಸಪ್ಪ; ಗ್ರಾಮದಲ್ಲಿ ಹೆಚ್ಚಿದ ಆತಂಕ

ಜಿಲ್ಲೆಯಲ್ಲಿ ಒಟ್ಟು 596 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ 32,340 ಜನರ ಪೈಕಿ 30,785 ಜನರನ್ನು ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ 66 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳು ಚಾಲ್ತಿಯಲ್ಲಿದ್ದು, 1,567 ಜನರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ. ಈವರೆಗೆ 23,826 ಮಹಾರಾಷ್ಟ್ರ ರಾಜ್ಯದಿಂದ ಹಾಗೂ 2,982 ಗೋವಾ ರಾಜ್ಯದಿಂದ ಮತ್ತು 8,514 ಜನರು ಬೇರೆ ರಾಜ್ಯಗಳಿಂದ ಆಗಮಿಸಿದ್ದಾರೆ. ಅದರಂತೆ ವೈದ್ಯರು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವಳಿ ಮಕ್ಕಳಿಗೆ ಹೆರಿಗೆ ನೀಡಿದ ಮಹಿಳೆಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ವೈ. ಎಸ್. ಪಾಟೀಲ ತಿಳಿಸಿದರು.

ಎಸ್​ಪಿ ಅನುಪಮ್ ಅಗರವಾಲ ಮಾತನಾಡಿ, ಹೋಮ್ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ 22 ಜನರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಅಲ್ಲದೇ, ಜಿಲ್ಲೆಯ ಗಡಿಭಾಗ ಕಂಟೈನ್ಮೆಂಟ್ ವಲಯ ಮತ್ತು ಇತರೆ ಪ್ರದೇಶಗಳಲ್ಲಿ ಕಾನೂನಿನ ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಎಂ.ಸಿ ಮನಗೂಳಿ, ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
First published: