SSLC Exam: ಕೋವಿಡ್ ಸುರಕ್ಷಾತಾ ಕ್ರಮಗಳೊಂದಿಗೆ ಚಾಮರಾಜನಗರದಲ್ಲಿ SSLC ಮಾಕ್ ಟೆಸ್ಟ್

ಕೊರೋನಾ ವೈರಸ್ ಸೋಂಕು ಹರಡದಂತೆ ಅಗತ್ಯ ಇರುವ ಎಲ್ಲಾ ಸುರಕ್ಷಾ ಕ್ರಮಗಳನ್ನ ಪ್ರಾಯೋಗಿಕವಾಗಿ ಅಳವಡಿಸಿ ಚಾಮರಾಜನಗರದಲ್ಲಿ ಎಸ್ಸೆಸ್ಸೆಲ್ಸಿ ಅಣಕು ಪರೀಕ್ಷೆ ಮಾಡಲಾಗಿದೆ.

ಶಾಲಾ ಕಟ್ಟಡಕ್ಕೆ ಸ್ಯಾನಿಟೈಸ್ ಮಾಡುತ್ತಿರುವುದು

ಶಾಲಾ ಕಟ್ಟಡಕ್ಕೆ ಸ್ಯಾನಿಟೈಸ್ ಮಾಡುತ್ತಿರುವುದು

  • Share this:
ಚಾಮರಾಜನಗರ(ಜೂ.24): ಕೊರೋನಾ ಆತಂಕದ ನಡುವೆ ನಾಳೆಯಿಂದ  ಪ್ರಾರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾರೀ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದ್ದು ಯಾವುದೇ ಸಂದರ್ಭದಲ್ಲೂ ಲೋಪದೋಷ ಉಂಟಾಗಬಾರದೆಂದು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಇಂದು ಕೆಲವು ಅಣುಕು ಪರೀಕ್ಷೆ ಸಹ ನಡೆಸಲಾಯಿತು.

ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಎಲ್ಲಾ 54 ಪರೀಕ್ಷಾ ಕೇಂದ್ರಗಳಲ್ಲೂ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಪರೀಕ್ಷಾ ಕೆಲಸ ನಿರ್ವಹಿಸುವ ಸಿಬ್ಬಂದಿ ಅಣುಕು ಪರೀಕ್ಷೆ ನಡೆಸಿದರು. ಕೋವಿಡ್ ಸುರಕ್ಷತಾ ಕ್ರಮಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗಬಾರದು ಎಂಬ ದೃಷ್ಟಿಯಿಂದ ಈ ಮಾಕ್ ಟೆಸ್ಟ್ ನಡೆಸಲಾಯಿತು.

ಸರಿಸುಮಾರು ಮೂರು ತಿಂಗಳ ಕಾಲ ಹಸಿರು ವಲಯದಲ್ಲಿ ಮುಂದುವರಿದು ದಾಖಲೆ ನಿರ್ಮಿಸಿದ್ದ ಜಿಲ್ಲೆಯಲ್ಲಿ ಕೊರೊನಾ ನಿಧಾನವಾಗಿ ಹೆಜ್ಜೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ಅತಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಿದ್ದಗೊಂಡಿದೆ.

ಇದನ್ನೂ ಓದಿ: ಬೆಂಗಳೂರಿಗೆ ಮತ್ತೆ ಲಾಕ್​ಡೌನ್: ಎಲ್ಲಾ ಪಕ್ಷಗಳ ಶಾಸಕರ ಒಮ್ಮತದ ಅಭಿಪ್ರಾಯ?

ಈಗಾಗಲೇ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಜಿಲ್ಲೆಯಲ್ಲಿ 54 ಪರೀಕ್ಷಾ ಕೇಂದ್ರಗಳ 592 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು ಎಲ್ಲಾ ಕೊಠಡಿಗಳಿಗು ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳುವಂತೆ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೂ ತಲಾ ಇಬ್ಬರಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೆ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಓ ಹರ್ಷಲ್ ಬೋಯರ್ ನೇತೃತ್ವದ ಕಣ್ಗಾವಲು ಸಮಿತಿ ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒಬ್ಬರಂತೆ ಎನ್​ಫೋರ್ಸ್ಮೆಂಟ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣಾ ಕೌಂಟರ್ ತೆರೆಯಲಾಗುತ್ತಿದ್ದು ತಲಾ ಇಬ್ಬರು ಅರೆವೈದ್ಯಕೀಯ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ 11,839 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇವರಿಗೆಲ್ಲಾ  ಭಾರತ್ ಸ್ಕೌಟ್ ಮತ್ತು ಗೈಡ್ಸ್, ಮಲೆಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ, ಮೈಸೂರಿನ ಲಯನ್ಸ್ ಕ್ಲಬ್ ವತಿಯಿಂದ ತಲಾ ಎರಡು ಮಾಸ್ಕ್ ಒದಗಿಸಲಾಗುತ್ತಿದೆ. ಮಾಸ್ಕ್ ವಿತರಣೆಗಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಬೆಳಿಗ್ಗೆ 10:15ಕ್ಕೆ ಪರೀಕ್ಷೆ ಆರಂಭವಾಗಲಿದ್ದರೂ ವಿದ್ಯಾರ್ಥಿಗಳು ಬೆಳಗ್ಗೆ 8.30 ಕ್ಕೆ ಪರೀಕ್ಷಾ ಕೇಂದ್ರಗಳಿಗೆ ಬರಲು ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ನೀಡಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಕೋವಿಡ್ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಮಾಮೂಲಿ ಜ್ವರ, ಕೆಮ್ಮು ನೆಗಡಿ ಇರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗವುದು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.

ಇದನ್ನೂ ಓದಿ: ಸರಗಳ್ಳನತನ ಆರೋಪಿಗೂ ಕೊರೋನಾ ಪಾಸಿಟಿವ್ ; ಎರಡು ದಿನವಾದರೂ ಠಾಣೆಯನ್ನು ಸೀಲ್ ಡೌನ್ ಮಾಡದ ಬಿಬಿಎಂಪಿ

ಪರೀಕ್ಷಾ ಕೇಂದ್ರಗಳಿಗೆ ಕಾಲ್ನಡಿಗೆಯಲ್ಲಿ 1458 ವಿದ್ಯಾರ್ಥಿಗಳು, ಸೈಕಲ್​ನಲ್ಲಿ 1041, ಪೋಷಕರೊಂದಿಗೆ 4018, ವಸತಿನಿಲಯದಿಂದ 316,  ಕೆ.ಎಸ್.ಆರ್.ಟಿ.ಸಿ. ಬಸ್ ಮಾರ್ಗಗಳಲ್ಲಿ 3231 ಬರಲಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 1775 ವಿದ್ಯಾರ್ಥಿಗಳಿಗೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ  ಪ್ರತಿ ಜಿಲ್ಲೆಯ ಐದು ತಾಲೋಕು ಕೇಂದ್ರಗಳಲ್ಲಿ ತಲಾ ಎರಡರಂತೆ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್ಮೆಂಟ್ ಝೋನ್​ಗೆ ಒಳಪಟ್ಟರೆ ಆಗ ಆ ಪರೀಕ್ಷಾ ಕೇಂದ್ರವನ್ನು ಈಗಾಗಲೇ ಕಾಯ್ದಿರಿಸಿರುವ ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರಿಸಲು ಸಹ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​​-19 ಎಫೆಕ್ಟ್​: ಬೆಂಗಳೂರಿನಲ್ಲಿ ಮತ್ತೆ 60 ಫೀವರ್​​ ಕ್ಲಿನಿಕ್​​ ಆರಂಭ

ಇನ್ನೊಂದೆಡೆ ಗುಂಡ್ಲುಪೇಟೆ ಕಂಟೈನ್ಮೆಂಟ್ ಝೋನ್​ನಲ್ಲಿ 5 ವಿದ್ಯಾರ್ಥಿಗಳಿದ್ದು, ಬಫರ್ ಝೋನ್​ನಲ್ಲಿ 3 ವಿದ್ಯಾರ್ಥಿಗಳಿದ್ದಾರೆ. ಇವರನ್ಮು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು ಎಂದು ಡಿಡಿಪಿಐ ಜವರೇಗೌಡ ತಿಳಿಸಿದ್ದಾರೆ.

ಒಟ್ಟಾರೆ, ವಿದ್ಯಾರ್ಥಿಗಳ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ.

ವರದಿ: ಎಸ್.ಎಂ. ನಂದೀಶ್
First published: