• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಯುಗಾದಿ ಅಂಗವಾಗಿ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಯ್ಯ ಜಾತ್ರೆ; ಯಾತ್ರಾರ್ಥಿಗಳಿಗೆ ಕೊರೋನಾ ಬಗ್ಗೆ ಕಟ್ಟುನಿಟ್ಟಿನ ಸೂಚನೆ

ಯುಗಾದಿ ಅಂಗವಾಗಿ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಯ್ಯ ಜಾತ್ರೆ; ಯಾತ್ರಾರ್ಥಿಗಳಿಗೆ ಕೊರೋನಾ ಬಗ್ಗೆ ಕಟ್ಟುನಿಟ್ಟಿನ ಸೂಚನೆ

ಶ್ರೀಶೈಲ ಜಾತ್ರೆಯ ನಿಮಿತ್ತ ವಿಜಯಪುರದಲ್ಲಿ ನಡೆದ ಮುನ್ನೆಚ್ಚರಿಕೆ ಸಭೆ.

ಶ್ರೀಶೈಲ ಜಾತ್ರೆಯ ನಿಮಿತ್ತ ವಿಜಯಪುರದಲ್ಲಿ ನಡೆದ ಮುನ್ನೆಚ್ಚರಿಕೆ ಸಭೆ.

ಮುನ್ನೆಚ್ಚರಿಕೆಯಾಗಿ ವಿಜಯಪುರ ಜಿಲ್ಲೆಯಿಂದ ಶ್ರೀಶೈಲಕ್ಕೆ ಹೋಗುವ ಪಾದಯಾತ್ರಾರ್ಥಿಗಳು ಮತ್ತು ಭಕ್ತರು ತಪ್ಪದೇ ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ, ಕೋವಿಡ್-19 ಲಸಿಕಾ ಪ್ರಮಾಣ ಪತ್ರ (45 ವರ್ಷದಿಂದ 60 ವರ್ಷದವರು) ತಮ್ಮೊಂದಿಗೆ ಇಟ್ಟುಕೊಂಡಿರಬೇಕು. 60 ವರ್ಷ ಪೂರ್ಣಗೊಳಿಸಿದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಶ್ರೀಶೈಲ ಯಾತ್ರೆಯಿಂದ ದೂರ ಉಳಿಯುವುದು ಸೂಕ್ತ ಎಂದು ತಿಳಿಸಲಾಗಿದೆ.

ಮುಂದೆ ಓದಿ ...
  • Share this:

ವಿಜಯಪುರ (ಮಾ. 23) ಏಪ್ರಿಲ್​ನಲ್ಲಿ ಯುಗಾದಿ ಅಂಗವಾಗಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ನಡೆಯಲಿರುವ ಜಾತ್ರೆಗೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಶ್ರೀಶೈಲದಿಂದ ಜಗದ್ಗುರುಗಳು ಮತ್ತು ಆಂಧ್ರಪ್ರದೇಶದ ಅಧಿಕಾರಿಗಳು ಬಸವನಾಡು ವಿಜಯಪುರಕ್ಕೆ ಆಗಮಿಸಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ಶ್ರೀಶೈಲಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೊರೋನಾ ಬಗ್ಗೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಮತ್ತು ನಿಯಮಗಳ ಪಾಲನೆ ಕುರಿತು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ಧರಾಮ ಶಿವಾಚಾರ್ಯರು, ಆಂಧ್ರಪ್ರದೇಶದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಮತ್ತು ಕಾರ್ಯ ನಿರ್ವಹಣಾಧಿಕಾರಿ ಕೆ. ಎಸ್. ರಾಮಾರಾವ್ ಅವರು ವಿಜಯಪುರದಲ್ಲಿ ಭಕ್ತಾದಿಗಳು ಪಾದಯಾತ್ರಿಗಳ ನಾನಾ ಸಂಘಟನೆಗಳು ಮತ್ತು ವ್ಯಾಪಾರಿಗಳೊಂದಿಗೆ ಸಭೆ ನಡೆಸಿದರು.


ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರುಗಳು, ಯುಗಾದಿ ಅಂಗವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲಕ್ಕೆ ಆಗಮಿಸುತ್ತಾರೆ.  ಆದರೆ, ಈಗ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಶೈಲಕ್ಕೆ ಬರುವ ಭಕ್ತರು ಮುಂಜಾಗ್ರತಾ ಕ್ರಮವಾಗಿ ಕೊರೋನಾ ನೆಗೆಟಿವ್ ವರದಿ ತರಬೇಕು ಎಂದು ಮನವಿ ಮಾಡಿದರು. ಪ್ರತಿವರ್ಷದಂತೆ ಶಿವರಾತ್ರಿಯಂದು ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನಡೆಯುತ್ತವೆ. ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿದೆ. ಕೊರೋನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು. ಯಾವುದೇ ರೀತಿಯ ಅಪಪ್ರಚಾರದ ಬಗ್ಗೆ ಕಿವಿಗೊಡದಂತೆ ತಿಳಿಸಿದ ಅವರು ಸುರಕ್ಷಿತ, ಗೌರವ ನಡೆಯ ಮೂಲಕ ದೇವರ ದರ್ಶನ ಪಡೆಯಬೇಕು. ನಿಗದಿತ ಕೋವಿಡ್-19 ತಪಾಸಣೆಗೆ ಸಂಬಂಧಪಟ್ಟ ಎಲ್ಲ ಪ್ರಮಾಣ ಪತ್ರಗಳನ್ನು ತಗೆದುಕೊಂಡು ಹೋಗಬೇಕು. ಭಕ್ತಿಭಾವದಿಂದ ಅವಶ್ಯಕ ಮುನ್ನೆಚ್ಚರಿಕೆಗಳೊಂದಿಗೆ ಈ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.


ಈ ವರ್ಷವೂ ರೂಪಾಂತರ ಕೊರೋನಾ ಭಯದಲ್ಲಿಯೂ ಶ್ರೀಶೈಲ ಜಾತ್ರೆ ನಡೆಯಲಿದ್ದು, ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಪಾದಯಾತ್ರೆ ಮುಖಾಂತರ ದರ್ಶನಕ್ಕೆ ಹೋಗಬಹುದು. ರಾಜ್ಯದ ಅನೇಕ ಜಿಲ್ಲೆಗಳಿಂದ ಸೇರಿದಂತೆ ಲಕ್ಷಾಂತರ ಭಕ್ತರ ಪಾದಯಾತ್ರೆ ಮಾಡುತ್ತಾರೆ. ಸುಮಾರು 20 ದಿನಗಳವರೆಗೆ ಪಾದಯಾತ್ರೆ ಮಾಡಿ ಶ್ರೀಶೈಲ ತಲುಪಿ ಯುಗಾದಿ ಪುಣ್ಯದಿನದಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆಯಲಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಯುಗಾದಿ ದಿನದಂದು ನಡೆಯುವ ಶ್ರೀಶೈಲ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಸಲು ದೇವಸ್ಥಾನ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಕೊರೋನಾ ಸಂದರ್ಭದಲ್ಲಿ ನಿರ್ಬಂಧಿಸಲಾದ ಸ್ಪರ್ಶ ದರ್ಶನವನ್ನು ಈ ವರ್ಷವೂ ಕೂಡ ನಿರ್ಬಂಧಿಸಲಾಗಿದೆ. ಹಾಗೂ ಪಾತಾಳ ಗಂಗೆಯಲ್ಲಿ ಸ್ನಾನ  ಮಾಡಲು ಕೂಡ ಅವಕಾಶವಿಲ್ಲ  ಎಂದು ಅವರು ತಿಳಿಸಿದರು.


ಆಂಧ್ರಪ್ರದೇಶದ ವಿಶೇಷ ಡೆಪ್ಯೂಟಿ ಡೈರೆಕ್ಟರ್ ಕೆ.ಎಸ್. ರಾಮರಾವ್ ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಶ್ರೀಶೈಲ ದೇವಸ್ಥಾನದ ದರ್ಶನ ಪಡೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ "ನೋ ಮಾಸ್ಕ್ ನೋ ಎಂಟ್ರಿ" ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಭಕ್ತಾದಿಗಳು ಮತ್ತು ಪಾದಯಾತ್ರಾರ್ಥಿಗಳು ತಪ್ಪದೇ ಮಾಸ್ಕ್ ಧರಿಸಿಕೊಂಡು ದರ್ಶನ ಪಡೆಯುವಂತೆ ಸೂಚಿಸಿದರು. ಕಳೆದ ವರ್ಷ ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ನಡೆಯುವ ಜಾತ್ರೆಯನ್ನು ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿತ್ತು. ದೇಶಾದ್ಯಂತ ಪಾದಯಾತ್ರೆ ಮೂಲಕ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಬಂದಿದ್ದ ಭಕ್ತರು ಸಂಕಷ್ಟ ಎದುರಿಸುವಂತಾಗಿತ್ತು. ಈ ಬಾರಿ ದರ್ಶನ ಪಡೆಯಲು ಯಾವುದೇ ನಿರ್ಬಂಧ ಇಲ್ಲದಿದ್ದರೂ ಕೂಡ ಕೇಂದ್ರ ಸರಕಾರದ ಕೊರೋನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.


ಮುನ್ನೆಚ್ಚರಿಕೆಯಾಗಿ ವಿಜಯಪುರ ಜಿಲ್ಲೆಯಿಂದ ಶ್ರೀಶೈಲಕ್ಕೆ ಹೋಗುವ ಪಾದಯಾತ್ರಾರ್ಥಿಗಳು ಮತ್ತು ಭಕ್ತರು ತಪ್ಪದೇ ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ, ಕೋವಿಡ್-19 ಲಸಿಕಾ ಪ್ರಮಾಣ ಪತ್ರ (45 ವರ್ಷದಿಂದ 60 ವರ್ಷದವರು) ತಮ್ಮೊಂದಿಗೆ ಇಟ್ಟುಕೊಂಡಿರಬೇಕು. 60 ವರ್ಷ ಪೂರ್ಣಗೊಳಿಸಿದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಶ್ರೀಶೈಲ ಯಾತ್ರೆಯಿಂದ ದೂರ ಉಳಿಯುವುದು ಸೂಕ್ತ ಎಂದು ತಿಳಿಸಿದ ಅವರು, ಶ್ರೀಶೈಲಕ್ಕೆ ಭೇಟಿ ನೀಡಿ ದೇವಸ್ಥಾನದ ದರ್ಶನ ಪಡೆದ ತಕ್ಷಣ ಮರಳಿ ತಮ್ಮ ಊರುಗಳಿಗೆ ತೆರಳುವಂತೆ ಅವರು ಮನವಿ ಮಾಡಿದರು.


ಇದನ್ನು ಓದಿ: ಸಂಚಾರಿ ಪೊಲೀಸರ ತಪಾಸಣೆ ವೇಳೆ ಬಿದ್ದು ಬೈಕ್ ಸವಾರ ಸಾವು: ರೊಚ್ಚಿಗೆದ್ದ ಜನರಿಂದ ಪೊಲೀಸರಿಗೆ ಹಿಗ್ಗಾಮುಗ್ಗ ಥಳಿತ!


ಯಾತ್ರಾರ್ಥಿಗಳು ಸ್ಯಾನಿಟೈಸರ್ ಬಳಸುವ ಮೂಲಕ ಸಾಮಾಜಿಕ ಅಂತರ  ಕಾಪಾಡಿಕೊಳ್ಳಬೇಕು. ಪಾದಯಾತ್ರೆ ಸಾಗುವ ಮಾರ್ಗಮಧ್ಯೆ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಭಕ್ತಿ ಸೇವೆ ಸಲ್ಲಿಸಲು ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದಿದ್ದರೂ ಕೂಡ ಕೋವಿಡ್ ನಿಯಮಗಳನ್ನು ಭಕ್ತರು ತಪ್ಪದೇ ಪಾಲಿಸುವಂತೆ ಅವರು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಜೈನಾಪುರದ ರೇಣುಕಾಚಾರ್ಯ ಸ್ವಾಮೀಜಿ, ಕರಬಂಟನಾಳದ ಶಿವಕುಮಾರ ಮಹಾಸ್ವಾಮಿಗಳು, ರವೀಂದ್ರ ಬಿಜ್ಜರಗಿ ಮುಂತಾದವರು ಉಪಸ್ಥಿತರಿದ್ದರು.  ಶ್ರೀ ನೀಲಕಂಠೇಶ್ವರ ಪಾದಯಾತ್ರಾ ಸಮಿತಿ ಮತ್ತು ಸಿದ್ಧರಾಮೇಶ್ವರ ಪಾದಯಾತ್ರಾ ಕಮಿಟಿ ಹಾಗೂ ಮರ್ಚಂಟ್ಸ್ ಅಸೋಶಿಯೇಶನ್ ಅವರ ಸಂಯುಕ್ತಾಶ್ರಯದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು