ಚಿತ್ರದುರ್ಗ: ಖಾತೆ ವಿಚಾರದಲ್ಲಿ ನನಗೆ ಸಮಾಧಾನವೂ ಇಲ್ಲ, ಅಸಮಾಧಾನ ಇಲ್ಲ. ಆ ಖಾತೆ, ಈ ಖಾತೆ ಪ್ರಶ್ನೆ ಇಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನ ಇದೆ. ಸತ್ಯ ಹರಿಶ್ಚಂದ್ರ ಅರಮನೆಯಲ್ಲಿ, ಸ್ಮಶಾನದಲ್ಲಿ ಎರಡರಲ್ಲೂ ಹೇಗೆ ಸೈ ಎನಿಸಿಕೊಂಡಿದ್ದನೋ ಹಾಗೆ, ನಾನು ಸತ್ಯ ಹರಿಶ್ಚಂದ್ರನಂತೆ ಕಾಯಾ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಅಲ್ಲಿಯೂ ಸೈ ಎನಿಸಿಕೊಂಡಿದ್ದೇನೆ. ಇಲ್ಲಿಯೂ ಕೆಲಸ ಮಾಡಿ ಸೈ ಎನಿಸಿಕೊಳ್ಳೊತ್ತೇನೆ ಎಂದು ಚಿತ್ರದುರ್ಗದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಖಾತೆ ಹಂಚಿಕೆ ಕುರಿತು ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಬಿಎಸ್ವೈ ನೇತೃತ್ವದ ಸರ್ಕಾರದಲ್ಲಿ ಶ್ರೀರಾಮುಲು ಅವರು ಆರೋಗ್ಯ ಸಚಿವರು ಬಳಿಕ ಸಮಾಜ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದರು.
ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದ ಶ್ರೀರಾಮುಲು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಂಭವನೀಯ ಕೊರೋನಾ 3ನೇ ಅಲೆ ಹೇಗೆ ನಿಭಾಯಿಸಬೇಕು ಎಂದು ಶಾಸಕರು, ಅಧಿಕಾರಿಗಳ ಜೊತೆ ಸಭೆ ಮಾಡುತ್ತಿದ್ದೇನೆ. ನೆರೆ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳೋ ಕುರಿತು ಸಿಎಂ ಸೂಚನೆ ನೀಡಿದ್ದಾರೆ. ಅವರ ಸೂಚನೆಯಂತೆ ಇಂದು ಜಿಲ್ಲೆಗೆ ಬಂದಿದ್ದೇನೆ. ಜನ ಜಾನುವಾರು ರಕ್ಷಣೆಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಇನ್ನು, ಖಾತೆ ಹಂಚಿಕೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಅಧ್ಯಕ್ಷರಾದ, ಕಟೀಲ್, ಸಿಎಂ ಬೊಮ್ಮಾಯಿ, ಜೆಪಿ ನಡ್ಡಾ ಎಲ್ಲರೂ ಸೇರಿ ಯಾರು ಯಾವ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಿ ಖಾತೆ ನೀಡಿದ್ದಾರೆ. ಖಾತೆ ವಿಚಾರದಲ್ಲಿ ನನಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ. ಕೆಲವೊಮ್ಮೆ ಜನರ ಸೇವೆ ಸಲುವಾಗಿ ನಾವು ಬದುಕಬೇಕಾಗುತ್ತದೆ. ನಾನು 30 ವರ್ಷದಿಂದ ರಾಜಕೀಯ ಜೀವನದಲ್ಲಿ ಜನರ ಸೇವೆಗಾಗಿ ಬದುಕುತ್ತಿದ್ದೇನೆ. ಮುಂಚೆಯಿಂದ ಜನಸೇವೆಗೆ ಇರುವ ನನಗೆ ಆ ಖಾತೆ ಈ ಖಾತೆ ಪ್ರಶ್ನೆ ಇಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನ ಇದೆ. ಸತ್ಯ ಹರಿಶ್ಚಂದ್ರ ಅರಮನೆಯಲ್ಲಿ, ಸ್ಮಶಾನದಲ್ಲಿ ಸೈ ಎನಿಸಿಕೊಂಡಿದ್ದಾನೋ ಹಾಗೆ, ನಾನು ಸತ್ಯ ಹರಿಶ್ಚಂದ್ರ ನಂತೆ ಕಾಯಾ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತಾ ಬಂದಿದ್ದೇವೆ,ಅಲ್ಲಿಯೂ ಸೈ ಎನಿಸಿಕೊಂಡಿದ್ದೇನೆ, ಇಲ್ಲಿ ಸ್ಮಶಾನದಲ್ಲಿ (ಸಾರಿಗೆ ಇಲಾಖೆ) ಕೆಲಸ ಮಾಡುತ್ತೇನೆ ಎಂಬ ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಾವು ಬಿದ್ದಾಗ ಅವ್ರು ಹತ್ರದಲ್ಲೇ ಇದ್ರು: ನಾಯಕ ಅಜಯ್ ರಾವ್ ಹೇಳಿಕೆ ನಿರಾಕರಿಸಿದ ಗಾಯಾಳು ಫೈಟರ್
ಅಲ್ಲದೆ ಸಾರಿಗೆ ಇಲಾಖೆಯಲ್ಲಿ ಕೆಲವೊಂದು ಸವಾಲುಗಳು ಇವೆ. ಸಾರಿಗೆ ಇಲಾಖೆ ತುಂಬಾ ನಷ್ಟದಲ್ಲಿ ಇದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಇಲಾಖೆ ಕುರಿತು ಪರೋಕ್ಷವಾಗಿ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ರಾಜಕೀಯ ಜೀವನದಲ್ಲಿ ಬಹಳ ಸವಾಲುಗಳು ಬಂದಿವೆ. ಇದನ್ನ ಕೂಡಾ ಸವಾಲಾಗಿ ಸ್ವೀಕರಿಸಿ ಮುಂದೆ ಇಲಾಖೆಯನ್ನ ಲಾಭದಾಯಕವಾಗಿ ಮಾಡುತ್ತೇನೆ. ರಾಜಕಾರಣದಲ್ಲಿ ಯಾವುದೇ ಸವಾಲು ಬಂದರೂ ಸ್ವೀಕರಿಸುವೆ. ನಮಗೆ ಪಕ್ಷ ಮುಖ್ಯ. ನಮ್ಮ ನಾಯಕರಾದ ಪ್ರಧಾನಿ ಮೋದಿ ಜೊತೆಗೆ ಕೆಲಸ ಮಾಡುವುದು ಸಮಾಧಾನ ಇದೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ.
ಇನ್ನು, ಬಸ್ ಟಿಕೆಟ್ ದರ ಹೇರಿಕೆ ಕುರಿತು ಪ್ರತಿಕ್ರಿಯಿಸಿ, ಸಾರಿಗೆ ಇಲಾಖೆಯಿಂದ ಜನರಿಗೆ ಯಾವುದೇ ಹೊರೆಯಾಗದಂತೆ ನೋಡುವೆ. ಮಂಗಳವಾರ ಅಧಿಕಾರಿಗಳ ಸಭೆಯನ್ನ ಕರೆದಿದ್ದೇನೆ. ಯಾವುದೇ ರೀತಿಯಲ್ಲಿ ಸಾರಿಗೆ ಇಲಾಖೆಯಿಂದ ಜನರಿಗೆ ತೊಂದರೆ ಮಾಡಲ್ಲ ಎಂದು ಹೇಳಿದ ಅವರು, ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ವಿನಾಯಕ ತೊಡರನಾಳ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ