ರಾಜ್ಯೋತ್ಸವ ಭಾಷಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ತಪ್ಪಾಗಿ ಹೇಳಿದ ಶ್ರೀರಾಮುಲು

ಮದ್ರಾಸ್, ಹೈದರಾಬಾದ್, ಮುಂಬೈ, ಮೈಸೂರು ಪ್ರಾಂತ್ಯ ಹೀಗೆ ನಾಲ್ಕು ವಿಭಾಗಗಳಾಗಿ ಹರಿದು ಹಂಚಿಹೋಗಿದ್ದ ವಿಶಾಲ ಕರುನಾಡನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಎಸ್. ನಿಜಲಿಂಗಪ್ಪ ಅವರ ಪಾತ್ರ ಪ್ರಮುಖವಾದುದು ಎಂದು ಕನ್ನಡ ರಾಜ್ಯೋತ್ಸವದ ದಿನ ಸಚಿವ ಶ್ರೀರಾಮುಲು ಸ್ಮರಿಸಿದರು.

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಚಿತ್ರದುರ್ಗ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ‌ ಭಾಷಣದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ  ಮಾಸ್ತಿ, ಕುವೆಂಪು ಹೆಸರನ್ನು ತಪ್ಪಾಗಿ ಹೇಳಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಯಡವಟ್ಟು ಮಾಡಿದ್ದಾರೆ. ತೆಲುಗು ಮಿಶ್ರಿತ ಕನ್ನಡ ಶೈಲಿಯ ಭಾಷೆ ಮಾತನಾಡುವ ಶ್ರೀರಾಮುಲು, ಮಾಸ್ತಿ ಅವರ ಹೆಸರನ್ನು ಮಸ್ತಿ ಎಂದೂ, ಕುವೆಂಪು ಹೆಸರನ್ನ ಕುಯೆಂಪು ಎಂದು ತಪ್ಪಾಗಿ ಉಚ್ಛರಿಸಿದ್ದು ಗಮನಕ್ಕೆ ಬಂತು. ಚಿತ್ರದುರ್ಗ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.

ಮದ್ರಾಸ್ ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಮೈಸೂರು ಪ್ರಾಂತ್ಯ ಹೀಗೆ ನಾಲ್ಕು ವಿಭಾಗಗಳಾಗಿ ಹರಿದು ಹಂಚಿಹೋಗಿದ್ದ ವಿಶಾಲ ಕರುನಾಡನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಎಸ್. ನಿಜಲಿಂಗಪ್ಪ ಅವರ ಪಾತ್ರ ಪ್ರಮುಖವಾದುದು. ಈ ನಿಟ್ಟಿನಲ್ಲಿ ಮೊದಲು ದನಿಯಾಗಿದ್ದು 1915ರ ಕನ್ನಡ ಸಾಹಿತ್ಯ ಪರಿಷತ್‍ನ ಮೊದಲ ಸಮ್ಮೇಳನ. ಆದರೆ ಇದಕ್ಕೆ ಅಂತಿಮವಾಗಿ ಶಕ್ತಿ ತುಂಬಿ, ಒಂದು ಸ್ವರೂಪ ನೀಡುವಲ್ಲಿ ನಿಜಲಿಂಗಪ್ಪ ಅವರ ಪಾತ್ರ ಮಹತ್ವವಾಗಿದೆ. ಅವರ ಹೋರಾಟದಲ್ಲಿ ಕನ್ನಡ ಪ್ರೀತಿ, ಕರ್ನಾಟಕದ ರಚನೆಗೆ ಕಿಚ್ಚು ಅವರಲ್ಲಿತ್ತು ಎಂದರು.

1946 ರಲ್ಲಿ ಕನ್ನಡದ ಜನ ಒಟ್ಟಾಗಿರಬೇಕೆಂದು ಅಖಿಲ ಕರ್ನಾಟಕ ಏಕೀಕರಣ ಪರಿಷತ್ ಸ್ಥಾಪಿಸಿದ ಅವರು, ಅಂದಿನ ಪ್ರಧಾನಿ ನೆಹರು ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಕೊಡುತ್ತೇನೆ ಎಂದರೂ ಅವರು ಒಪ್ಪಿರಲಿಲ್ಲ. ಕರ್ನಾಟಕ ಏಕೀಕರಣ ಆದ ಮೇಲೆ ಅಧಿಕಾರ ಕೊಡಿ ಎಂದು ನೆಹರೂ ಅವರಿಗೆ ಹೇಳಿದ್ದರು. ನಂತರ ಕರ್ನಾಟಕ ರಚನೆಯಾದ ಮೇಲೆ ಅವರನ್ನು 1956ರಲ್ಲಿ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಆದ್ದರಿಂದ ಈ ದಿನ ರಾಜ್ಯೋತ್ಸವದ ಜೊತೆ ಅವರು ಮುಖ್ಯಮಂತ್ರಿಯಾದ ಸುದಿನವೂ ಹೌದು ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ ಭಾಷೆಯ ಪರಿ ಹಾಗೂ ಸಂಸ್ಕೃತಿಯ ಸಿರಿಯಿಂದ ನಮ್ಮ ನಾಡು ಸಮೃದ್ಧ: ಮಹಾಂತೇಶ್ ಬೀಳಗಿ

ಬೆಳಗಲ್ ರಾಮರಾಯರು, ಹೊನ್ನಾಪುರಮಠ, ಹುಲ್ಲೂರು ಶ್ರೀನಿವಾಸ್ ಜೋಯಿಸ್, ಹೀಗೆ ಇವರನ್ನು ಸೇರಿದಂತೆ ಅನೇಕರ ಸುದೀರ್ಘ ಹೋರಾಟದ ಫಲ ಈ ಸುದಿನವಾಗಿದೆ. ಚೆನ್ನಬಸಪ್ಪ, ಅಲೂರು ವೆಂಕಟರಾಯರು, ಕುವೆಂಪು, ಯು.ರಾಮರಾವ್, ಹರ್ಡೇಕರ್ ಮಂಜಪ್ಪ, ಕಾರ್ನಾಡ್ ಸದಾಶಿವರಾವ್ ಹೀಗೆ ಸಾವಿರಾರು ಮಹನೀಯರ, ಮಹಾನ್ ನಾಯಕರು-ತಾಯಂದಿರ ಹೋರಾಟದ ಫಲ ಈ ರಾಜ್ಯೋತ್ಸವ. “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕೊಟ್ಟ ನಾರಾಯಣರಾಯರನ್ನು ಈ ದಿನ ಸ್ಮರಿಸಬೇಕು ಎಂದು ಹೇಳಿದರು.

ಆರ್.ಹೆಚ್.ದೇಶಪಾಂಡೆಯವರ “ಕರ್ನಾಟಕ ವಿದ್ಯಾವರ್ಧಕ ಸಂಘ, 1912ರಲ್ಲಿ ಆಲೂರ ವೆಂಕಟರಾಯರು ಬರೆದ ‘ಕರ್ನಾಟಕ ಗತವೈಭವ’ ಕರ್ನಾಟಕ ಪರಿಷತ್ತು (ಬೆಂಗಳೂರು), ಕರ್ನಾಟಕ ಸಂಘ (ಶಿವಮೊಗ್ಗ), ಕರ್ನಾಟಕ ಸಮಿತಿ (ಕಾಸರಗೋಡು) ಸೇರಿದಂತೆ ಹುಟ್ಟಿದ ಹಲವು ಸಮಿತಿ, ಸಂಘಟನೆಗಳು, ಮಾಸ್ತಿ, ಕುವೆಂಪು, ಬೇಂದ್ರೆ, ಗೋಕಾಕ್, ಎಸ್.ಬಿ.ಜೋಶಿ, ಬೆಟಗೇರಿ ಕೃಷ್ಣಶರ್ಮಾ, ಶಿವರಾಮ ಕಾರಂತ ಅವರಂತಹ ಹಲವು ಶ್ರೇಷ್ಟ ಕವಿ ಹಾಗೂ ಸಾಹಿತಿಗಳ ಲೇಖನಗಳು, ಜನಸಾಮಾನ್ಯರ ಕೆಚ್ಛೆದೆಯ ಹೋರಾಟಗಳು ಈ ಚಳುವಳಿಯ ಹಿಂದಿರುವ ಪ್ರಮುಖ ಶಕ್ತಿಗಳು ಎಂದು ಸಮಾಜ ಕಲ್ಯಾಣ ಸಚಿವರು ತಿಳಿಸಿದರು.

ನಮ್ಮ ಚಳುವಳಿ ಹಾಗೂ ಗತವೈಭವವನ್ನು ನೆನೆಯುವುದು ಮುಂದಿನ ಪೀಳಿಗೆ ಅಂದರೆ ನಮ್ಮ ಯುವಕರು. ನಮ್ಮ ನಿಮ್ಮೆಲ್ಲರ ಮೇಲೆ ಕನ್ನಡವನ್ನು ಉಳಿಸಿ, ಬೆಳೆಸುವ ಮಹತ್ವದ ಜವಾಬ್ದಾರಿ ಇದೆ. ಕನ್ನಡ ಹಬ್ಬ ಕೇವಲ ಒಂದು ದಿನದ ಆಚರಣೆ ಆಗಬಾರದು. ಕವಿ ನಿಸಾರ್ ಅಹಮದ್ ಅವರು ಹೇಳುವ ಹಾಗೆ ಕನ್ನಡದ ಹಬ್ಬ ನಿತ್ಯೋತ್ಸವ ಆಗಬೇಕು ಎಂದರು.

ಇದನ್ನೂ ಓದಿ: ದುಬೈನಲ್ಲಿ ಜನಪ್ರಿಯವಾಗುತ್ತಿದೆ ಕನ್ನಡ ಶಾಲೆ; ಮಂಡ್ಯ ಸೇರಿ ದುಬೈ ಕನ್ನಡಿಗರ ಶ್ಲಾಘನೀಯ ಕಾರ್ಯ

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಬಿ. ರಾಮುಲುು, ಪ್ರಾಥಮಿಕ ಶಿಕ್ಷಣ, ತಂತ್ರಜ್ಞಾನ ಬಳಕೆ, ಸ್ಪರ್ಧಾತ್ಮಕ ಪರೀಕ್ಷೆಗಳು, ಕನ್ನಡದಲ್ಲಿ ಆಗಬೇಕು ಎನ್ನುವುದು ಸರ್ಕಾರದ ನಿರ್ಧಾರವಾಗಿದೆ. ಕಲಬುರುಗಿಯಲ್ಲಿ ಪ್ರತ್ಯೇಕ ರಾಜ್ಯ ಕುರಿತು ಹೋರಾಟ ನಡೆದಿದೆ. ಅಲ್ಲಿದ್ದಂತ  ಹೋರಾಟಗಾರರನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇವತ್ತು ಹೋರಾಟ ಮಾಡುವ ದಿನ ಅಲ್ಲ. ಬದಲಾಗಿ ಆಚರಣೆ ಮಾಡುವ ದಿನ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ 3 ಸಾವಿರ ಕೋಟಿ ಕೊಟ್ಟಿದೆ. ಅಲ್ಲಿಯ ಸಮಗ್ರ ಅಭಿವೃದ್ದಿಗೆ ಸರ್ಕಾರದಿಂದ ಹೊತ್ತು ನೀಡಲಾಗಿದೆ. ಈಗಾಗಲೇ ಸಿಎಂ ಅವರು ಏಮ್ಸ್, ಜಯದೇವ ಆಸ್ಪತ್ರೆಗೆ ಭೂಮಿ ಪೂಜೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ದವಾಗಿರುತ್ತದೆ ಎಂದರು.

ಕೊರೋನಾ ತಡೆಯುವಲ್ಲಿ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತರು, ಹಲವರು ಹೋರಾಡಿದ್ದಾರೆ. ಈ ಕುರಿತು ಕೇಂದ್ರ SOP ಯಂತೆ ಫ್ರಂಟ್ ಲೈನ್ ವಾರಿಯರ್​ಗಳ ಪಟ್ಟಿ ಕಳುಹಿಸುತ್ತೇವೆ. ವ್ಯಾಕ್ಸಿನ್ ಬಂದ ಕೂಡಲೇ ಫ್ರಂಟ್​ಲೈನ್ ವಾರಿಯರ್ಸ್​ಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಬಿ ಶ್ರೀರಾಮುಲು ತಿಳಿಸಿದರು.

ವರದಿ: ವಿನಾಯಕ ತೊಡರನಾಳ್ 
Published by:Vijayasarthy SN
First published: