ಬಾಗಲಕೋಟೆ (ಡಿ. 24): ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಮತ್ತೆ ಬಾದಾಮಿಯಿಂದಲ್ಲೋ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆ ಬಾದಾಮಿ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದರೆ, ಪಕ್ಷ ಅಧಿಕಾರಕ್ಕೆ ಬರುತ್ತೇ. ನಾನೀಗ ಬಾದಾಮಿ ಶಾಸಕನಿದ್ದೇನೆ. ಮತ್ತೆ ನನ್ನ ಕೈ ಹಿಡಿಯಬೇಕು ಎನ್ನುವ ಮಾತು ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಬಾದಾಮಿಯಲ್ಲೇ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು, ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಸ್ಪರ್ಧಿಸಿ, ಕೇವಲ 1863 ಮತಗಳಿಂದ ಪರಾಭವಗೊಂಡಿದ್ದರು. ಇದೀಗ ಮತ್ತೆ ಬಾದಾಮಿ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆಂದು ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ನಾನು ಮತ್ತೆ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪಾರ್ಟಿ ತೀರ್ಮಾನ ತೆಗೆದುಕೊಳ್ಳಬೇಕು. ಕಳೆದ ಸಲ ನಾನು ಸ್ವಲ್ಪ ಮತಗಳ ಅಂತರದಲ್ಲಿ ಸೋತಿದ್ದೇನೆ. ಇವತ್ತು ಸರ್ಕಾರ ನಮ್ಮದಿದೆ. ನಾನು ಸರ್ಕಾರದಲ್ಲಿ ಮಂತ್ರಿ ಆಗಿದ್ದೇನೆ. ಪಾರ್ಟಿ ತೀರ್ಮಾನ ತೆಗೆದುಕೊಳ್ಳುತ್ತೆ. ಇನ್ನು ಸಿದ್ದರಾಮಯ್ಯ ಟೂರಿಸ್ಟ್ ಗಳಿದ್ದಂತೆ. ಸಿದ್ದರಾಮಯ್ಯ ಒಂದೇ ಕ್ಷೇತ್ರ ಗುರುತಿಸಿ ನಿಂತುಕೊಳ್ಳುವಂತಹವರಲ್ಲ. ಅವರು ಸಿಎಂ ಇದ್ದಾಗಲೇ ಅಸ್ತಿತ್ವ ಉಳಿಸಿಕೊಳ್ಳಲಿಲ್ಲ. ಚಾಮುಂಡೇಶ್ವರಿ, ಬಾದಾಮಿ ಆಯಿತು. ಈಗ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಚಾಮುಂಡೇಶ್ವರಿಯಂತೆ ಈ ಸಲ ಬಾದಾಮಿಯಲ್ಲಿ ಜನ ಅವರನ್ನು ಸೋಲಿಸುತ್ತಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲಲು ಅವರ ಪಕ್ಷದ ಕೆಲವರು ಕಾರಣ ಅಂತಿದ್ದಾರೆ. ಹಾಗಿದ್ದರೆ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಹೊರಬರಬೇಕಿತ್ತು. ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಏರು ಪೇರು ಕಂಡವರು. ಬೆಳೆದ ಪಕ್ಷವನ್ನೇ ಬೈದುಕೊಂಡೇ ದೊಡ್ಡ ಮನುಷ್ಯ ಆದವರು. ಜೆಡಿಎಸ್ ನಲ್ಲಿ ಇದ್ದು, ಉಪ ಮುಖ್ಯಮಂತ್ರಿ ಆದಾಗಲೂ ಅವರನ್ನೆ ಬೈದುಕೊಂಡು ದೊಡ್ಡವರಾದ್ರು. ಈಗ ಕಾಂಗ್ರೆಸ್ ನಲ್ಲಿ ಅದೇ ಮಾಡ್ತಿದ್ದಾರೆ. ಈಗ ಡಿ.ಕೆ.ಶಿವಕುಮಾರ ಸರದಿ ಪ್ರಾರಂಭವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಜ.15ಕ್ಕೆ ಎರಡು ದಿನಗಳ ಕಾಲ ಅಮಿತ್ ಶಾ ರಾಜ್ಯ ಪ್ರವಾಸ; ಭೇಟಿ ವೇಳೆ ಸಂಪುಟ ಪುನಾರಚನೆ ಚರ್ಚೆ
ಈಗ ವೈರಸ್ ಹೊಸ ಹೊಸ ರೂಪದಲ್ಲಿ ಬರುತ್ತಿದೆ. ಡಿಸೆಂಬರ್ 31 ಅಂದರೆ ಮಕ್ಕಳು ಸೇರಿ ಸಾಕಷ್ಟು ಜನ ಮನೆಯಿಂದ ಹೊರಗೆ ಬರ್ತಾರೆ. ಎಲ್ಲಾ ಕಡೆ ಬಹಳಷ್ಟು ಜನಸಂದಣಿ ಆಗುತ್ತೆ. ಲಂಡನ್ ನಲ್ಲಿ ಪಬ್, ಡ್ಯಾನ್ಸ್ ಕ್ಲಬ್ ಗಳಲ್ಲಿ ಸಾಕಷ್ಟು ಜನರು ಸೇರಿದ್ರಿಂದ ವೈರಸ್ ಸ್ಪ್ರೆಡ್ ಆಯಿತು. ಅದಕ್ಕೆ ನಮ್ಮ ಉದ್ದೇಶ ಇಷ್ಟೇ. ಈಗ ಡಿಸೆಂಬರ್ 31 ಹೆಚ್ಚು ಜನರು ಸೇರಬಾರದು ಅಂತ ನೈಟ್ ಕರ್ಫ್ಯೂ ಜಾರಿಯ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಕ್ನಿಕಲ್ ಆಗಿ ಹೇಗೆ ಸರಿಪಡಿಸಬೇಕು ಅದನ್ನು ಮಾಡ್ತೇವಿ ಎನ್ನುವ ಮೂಲಕ ಪರೋಕ್ಷವಾಗಿ ಹೊಸ ವರ್ಷಕ್ಕೆ ಬ್ರೇಕ್ ಹಾಕಲು ನೈಟ್ ಕರ್ಫ್ಯೂ ಜಾರಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ