HOME » NEWS » District » SRINGERI PEOPLE DEMANDING 100 BED HOSPITAL IN THE CITY SESR

ಅಭಿಯಾನದ ಬಳಿಕವೂ ನನಸಾಗದ ಶೃಂಗೇರಿ ಜನರ ಕನಸು; ಸುಸಜ್ಜಿತ ಆಸ್ಪತ್ರೆಗೆ ಹಲವು ವಿಘ್ನ

ಸುಮಾರು ನಲವತ್ತು ಸಾವಿರ ಜನಸಂಖ್ಯೆ ಹೊಂದಿರುವ, ಪ್ರಮುಖ ಪ್ರವಾಸಿ ತಾಣವಾಗಿರುವ ಈ ಕ್ಷೇತ್ರದ ಜನರು ಆರೋಗ್ಯ ಸೇವೆಗಾಗಿ ಪರದಾಡುವಂತೆ ಆಗಿದೆ. ಅಷ್ಟೇ ಅಲ್ಲದೇ ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ

Seema.R | news18-kannada
Updated:September 23, 2020, 5:18 PM IST
ಅಭಿಯಾನದ ಬಳಿಕವೂ ನನಸಾಗದ ಶೃಂಗೇರಿ ಜನರ ಕನಸು; ಸುಸಜ್ಜಿತ ಆಸ್ಪತ್ರೆಗೆ ಹಲವು ವಿಘ್ನ
ಶೃಂಗೇರಿ ತಾಲೂಕು ಆಸ್ಪತ್ರೆ
  • Share this:
ಚಿಕ್ಕಮಗಳೂರು (ಸೆ.23): ಶಂಕರರ ತಪೋಭೂಮಿ, ಶಾರದಾಂಬೆ ನಾಡು ಶೃಂಗೇರಿಯ ಜನರು ಸುಸಜ್ಜಿತ ಆಸ್ಪತ್ರೆಗಾಗಿ ಪರದಾಡುತ್ತಿದ್ದಾರೆ. ವೈದ್ಯರ ಕೊರತೆ ಜೊತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ರೈತರು, ಕೂಲಿ ವರ್ಗ ಹಾಗೂ ತಾಲೂಕಿನ ಸುತ್ತಮುತ್ತದ ಜನರು ನಿರಂತರ ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರಿಗೆ ಯಾವುದೇ ತುರ್ತು ಆರೋಗ್ಯ ಸಮಸ್ಯೆ ಎದುರಾದರೆ, ಘಾಟಿ ಇಳಿದು ಕಡಿದಾದ ರಸ್ತೆಯಲ್ಲಿ ಉಡುಪಿ ಜಿಲ್ಲೆಯ ಮಣಿಪಾಲಕ್ಕೆ ಹೋಗಬೇಕು. ಇಲ್ಲವಾದಲ್ಲಿ ಶಿವಮೊಗ್ಗ ಜಿಲ್ಲೆಗೆ ಹೋಗಬೇಕು. ಪ್ರಯಾಣ ನೂರು ಕಿ.ಮೀ ದೂರವಿದ್ದು, ಎರಡು ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಅಷ್ಟು ದೂರ ಪಯಣಿಸುವ ಹೊತ್ತಿಗೆ ಅನೇಕರು ಜೀವ ಕಳೆದುಕೊಂಡ ಘಟನೆ ಕೂಡ ಪದೇ ಪದೇ ನಡೆಯುತ್ತಿದೆ. ಹಾಗೆಯೇ ಬಡವರು ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಕೈಚೆಲ್ಲಿ ಕುಳಿತುಕೊಳ್ಳುವ ಹಾಗಾಗಿದೆ. ಅದೇ ಕಾರಣದಿಂದ ಇಲ್ಲಿನ ಈಗಿನ 30 ಬೆಡ್ಗಳ ತಾಲೂಕು ಆರೋಗ್ಯ ಕೇಂದ್ರವನ್ನು ಹದಿಮೂರು ವರ್ಷದ ಹಿಂದೆ(2007) ಮೇಲ್ದೆರ್ಜೆಗೆ ಏರಿಸಿ ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶ ದಾಖಲೆಗಳಲ್ಲಿ ಮಾತ್ರ ಉಳಿದಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿನ ಜನರು ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ.

ಈ ಹಿನ್ನೆಲೆ ತಾಲೂಕಿಗೆ ನುರಿತ ವೈದ್ಯರ ಜೊತೆ ನೂರು ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಇಲ್ಲಿನ ಜನರ ಆಗ್ರಹವಾಗಿದೆ. ಇದೇ ಕಾರಣಕ್ಕೆ ಇಲ್ಲಿನ ನಾಗರಿಕರು ಕೊಡಗು,ಚಿಕ್ಕಮಗಳೂರು ವಿನಲ್ಲಿ ಆಸ್ಪತ್ರೆಗಾಗಿ ನಡೆದ ಅಭಿಯಾನದಂತೆ #weneed100bedhospitalinsringeri #ಶೃಂಗೇರಿಸರ್ಕಾರಿಆಸ್ಪತ್ರೆಯನ್ನುಮೇಲ್ದರ್ಜೆಗೆಏರಿಸಿ ಎಂಬ ಹ್ಯಾಷ್ಟ್ಯಾಗ್ ಅಡಿಯಲ್ಲಿ ಕಳೆದೆರಡು ತಿಂಗಳ ಹಿಂದೆ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದರು.ಅಷ್ಟೇ ಅಲ್ಲದೇ ತಾಲೂಕಿನಾದ್ಯಂತ ಬ್ಯಾನರ್​ ಚಳುವಳಿ ಮಾಡಿ ಎಲ್ಲರ ಗಮನ ಸೆಳೆದಿದ್ದರು.   ಅಲ್ಲದೇ ಫೇಸ್ಬುಕ್​ನಲ್ಲಿ ಇದಕ್ಕಾಗಿ ಪೇಜ್ ಸೃಷ್ಟಿಸಿದ್ದು, ನಿರಂತರ ಅಭಿಯಾನ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.ಸುಮಾರು ನಲವತ್ತು ಸಾವಿರ ಜನಸಂಖ್ಯೆ ಹೊಂದಿರುವ, ಪ್ರಮುಖ ಪ್ರವಾಸಿ ತಾಣವಾಗಿರುವ ಈ ಕ್ಷೇತ್ರದ ಜನರು ಆರೋಗ್ಯ ಸೇವೆಗಾಗಿ ಪರದಾಡುವಂತೆ ಆಗಿದೆ. ಅಷ್ಟೇ ಅಲ್ಲದೇ ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಅಧಿಕಾರಗಳು ಕೇವಲ ಭರವಸೆ ನೀಡಿದರೇ ಯಾವುದೇ ಪ್ರಯೋಜನವಿಲ್ಲ. ಇದು ಕಾರ್ಯರೂಪಕ್ಕೆ ಬರಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ಇದಕ್ಕಾಗಿ ಹೋರಾಡುತ್ತಿರುವ ತಾಲೂಕಿನ ಯುವಕರು.


ಸದ್ಯ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರಲ್ ಸರ್ಜನ್, ಸ್ತ್ರೀರೋಗ ತಜ್ಞರು, ಮೂಳೆ ತಜ್ಞರು ಸೇರಿದಂತೆ ಹಲವಾರು ತಜ್ಞರ ಹುದ್ದೆ ಖಾಲಿ ಇದೆ, ಅಲ್ಲದೇ 16 ಮಂದಿ ಶುಶ್ರೂಷಕರಿರಬೇಕಾದ ಜಾಗದಲ್ಲಿ ಕೇವಲ 4 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಮೂವರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾರ್ಮಾಸಿಸ್ಟ್, ಲ್ಯಾಬ್ ಟೆಕ್ನಿಶಿಷಯನ್ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದೆ. ಈ ಹುದ್ದೆಗಳ ಭರ್ತಿ ಕ್ರಿಯೆ ಕೂಡ ನಡೆದಿಲ್ಲ.

ಅವ್ಯವಸ್ಥೆಯ ಆಗರವಾಗಿರುವ ಆಸ್ಪತ್ರೆ:

ಈಗಿರುವ ಆಸ್ಪತ್ರೆಯ ಕಟ್ಟಡವಂತೂ ಅವ್ಯವಸ್ಥೆಯ ಆಗರವಾಗಿದೆ. ಮಳೆಗಾಲದಲ್ಲಿಯಂತೂ ಕಟ್ಟಡ ಸಂಪೂರ್ಣವಾಗಿ ಸೋರಿಕೆಯಾಗುತ್ತದೆ. ಅಲ್ಲದೇ ಆಸ್ಪತ್ರೆಯ ಶುಚಿತ್ವ ಕಾಪಾಡುವಲ್ಲಿ ಕೂಡ ವಿಫಲವಾಗಿದೆ. ಶೌಚಾಲಯಗಳ ಸ್ವಚ್ಛತೆ ಅಷ್ಟಕ್ಕಷ್ಟೇ. ರೋಗಿಗಳಿಗೆ ಇನ್ನಷ್ಟು ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.

ಆಸ್ಪತ್ರೆಗೆ ಒತ್ತಾಯಿಸಿ ನೀಡಿರುವ ಮನವಿ


ಶಾಸಕ ಟಿ.ಡಿ ರಾಜೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಹಾಗೂ ಸಂಸದೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕುರಿತು ಮನವಿ ನೀಡುವ ಮೂಲಕ ಅವರ ಗಮನ ಸೆಳೆಯಲಾಗಿದೆ. ಇದಕ್ಕೆ ಭರವಸೆ ನೀಡಿರುವ ಸಚಿವರು 100 ಹಾಸಿಗೆಯುಳ್ಳ ಆಸ್ಪತ್ರೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗುವುದು. ನಗರಕ್ಕೆ ಸಮೀಪದಲ್ಲಿ ಆಸ್ಪತ್ರೆಗೆ ಆಗುವಷ್ಟು ಜಾಗವನ್ನು ಕೂಡಲೇ ಗುರುತಿಸಿ, ಸರ್ವೇ ಮಾಡಿ ವ್ಯವಸ್ಥೆ ಮಾಡಬೇಕೆಂದು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು. ಸರ್ಕಾರಕ್ಕೂ ಮನವಿ ಮಾಡಿದ್ದು, 100 ಹಾಸಿಗೆಯುಳ್ಳು ಆಸ್ಪತ್ರೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.

ಆದರೆ, ಎರಡು ತಿಂಗಳು ಕಳೆದರೂ ಕೂಡ ಖಾಲಿ ನಿವೇಶನ ಗುರುತಿಸುವ ಕಾರ್ಯ ಪೂರ್ತಿ ಮುಗಿದಿಲ್ಲ. ಸರ್ವೇ ಮಾಡಿದ್ದರೂ ಸಹ ಅದು ಸೆಕ್ಷನ್ 4(ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಾಗ) ಅಡಿಯಲ್ಲಿ ಬರುತ್ತಿದೆ ಎಂಬ ಕಾರಣಕ್ಕೆ ಇನ್ನೂ ಸಹ ಆಸ್ಪತ್ರೆ ಕಟ್ಟಿಸಲು ಅನುಮತಿ ಸಿಕ್ಕಿಲ್ಲ.

ಆಸ್ಪತ್ರೆ ನಿರ್ಮಾಣಕ್ಕಾಗಿ ಶೃಂಗೇರಿಯ ಯುವಕ ತಂಡ ಜಿಲ್ಲಾ ಉಪವಿಭಾಗಾಧಿಕಾರಿಗಳನ್ನ ಭೇಟಿಯಾಗಿ ಒತ್ತಡ ಹೇರಿತ್ತು, ಹಾಗೇ ಅಧಿಕಾರಿಗಳ ಕಚೇರಿಗೆ ಅಲೆಯುತ್ತಲೇ ಇದೆ. ವಾರದೊಳಗೆ ಈ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಲೇ ಇದ್ದು, ಯಾವಾಗ ನಮ್ಮ ಊರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುವುದು ಎಂಬ ನಿರೀಕ್ಷೆಯಲ್ಲಿದ್ದಾರೆ ಊರಿನ ಜನತೆ.
Published by: Seema R
First published: September 23, 2020, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories