Sringeri Rape Case - ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣ: ಪೋಕ್ಸೋ ಕೋರ್ಟ್​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆ

ಶೃಂಗೇರಿಯಲ್ಲಿ ನಾಲ್ಕೈದು ತಿಂಗಳ ಕಾಲ 37ಕ್ಕೂ ಹೆಚ್ಚು ಜನರು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಸಂಬಂಧ, ಚಿಕ್ಕಮಗಳೂರು ಪೊಲೀಸರು ಪೋಕ್ಸೋ ವಿಶೇಷ ಕೋರ್ಟ್​ನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಚಿಕ್ಕಮಗಳೂರಿನ ನ್ಯಾಯಾಲಯ

ಚಿಕ್ಕಮಗಳೂರಿನ ನ್ಯಾಯಾಲಯ

  • Share this:
ಚಿಕ್ಕಮಗಳೂರು: ಶೃಂಗೇರಿ ಅಪ್ರಾಪ್ತೆ ಬಾಲಕಿ ಮೇಲೆ ಕಾಮಾಂಧರ ಕ್ರೌರ್ಯ ಪ್ರಕರಣ ಸಂಬಂಧಿಸಿದಂತೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು ಪೊಲೀಸರು ಚಿಕ್ಕಮಗಳೂರಿನ ವಿಶೇಷ ಪೊಕ್ಸೋ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ಗ್ರಾಮವೊಂದರಲ್ಲಿ ನಡೆದ ಈ ನೀಚಕೃತ್ಯ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಎಂಬುವರಿಗೆ ಗೊತ್ತಾದ ಮೇಲೆ ಶೃಂಗೇರಿ ಠಾಣೆಯಲ್ಲಿ 2021, ಜನವರಿ ಅಂತ್ಯದಲ್ಲಿ ಪ್ರಕರಣ ದಾಖಲಾಯಿತು. ಕೇಸ್ ದಾಖಲಾದ ಕೂಡಲೇ ರಾಜಕೀಯ ಒತ್ತಡದಿಂದ ಮೊದಮೊದಲು ಆರೋಪಿಗಳನ್ನ ರಕ್ಷಿಸುವ ಹುನ್ನಾರ ನಡೆಯಿತು. ಹೀಗಾಗಿ ಆ ವೇಳೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಿಪಿಐ ಸಸ್ಪೆಂಡ್ ಆಗಬೇಕಾಯಿತು. ಆ ಬಳಿಕ ಪ್ರಕರಣ ಎಎಸ್​ಪಿ ಶೃತಿ ಹೆಗಲೇರಿ ಸುದೀರ್ಘ ಮೂರು ತಿಂಗಳ ತನಿಖೆ ನಡೆದು ಇದೀಗ ಕೋರ್ಟ್​ಗೆ ಮೊದಲ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ.

ಅಂದಾಗೆ ಬಾಲಕಿ ಮೇಲೆ ಎರಗಿದ್ದು ಒಬ್ಬಿಬ್ಬರಲ್ಲ. ಬರೋಬ್ಬರಿ 37ಕ್ಕೂ ಹೆಚ್ಚು ಜನರು ಮುಗ್ಧ ಬಾಲಕಿಯನ್ನ ನಿರಂತರವಾಗಿ ಬಳಸಿಕೊಂಡು ಕಾಮದಾಹವನ್ನ ತೀರಿಸಿಕೊಂಡಿದ್ದರೆಂಬ ಆರೋಪ ಇದೆ. ಅಷ್ಟಕ್ಕೂ ಈ ಪರಿ ಬಾಲಕಿ ಮೇಲೆ ದೌರ್ಜನ್ಯವೆಸಗಲು ಮುಖ್ಯವಾಗಿ ಕಾರಣಿಕರ್ತೆ ಬಾಲಕಿಯ ಚಿಕ್ಕಮ್ಮ ಅನ್ನೋದು ಇಡೀ ಸಮಾಜವೇ ತಲೆತಗ್ಗಿಸುವಂತಹ ವಿಚಾರ. ಹಣದಾಸೆಗೆ ತನ್ನ ಅಕ್ಕನ ಮಗಳನ್ನೇ ಪಾಪಿಗಳ ಕೈಗೊಪ್ಪಿಸಿದ ನೀಚ ಹೆಂಗಸು ಈಕೆ. ಸದ್ಯ ತಾಯಿ ಸೇರಿದಂತೆ 37 ಜನರನ್ನ ಬಂಧಿಸಿರುವ ಪೊಲೀಸರು ಮೊದಲ ಚಾರ್ಜ್ ಶೀಟ್ ಸಲ್ಲಿಸಿ ತನಿಖೆ ಮುಂದುವರೆಸಿದ್ದೇವೆ ಎಂದು ಚಿಕ್ಕಮಗಳೂರು ಎಸ್​ಪಿ ಅಕ್ಷಯ್ ಹೇಳಿದ್ದಾರೆ.

ಇದನ್ನೂ ಓದಿ: ತಾಯಿ ಅಗಲಿಕೆ ನೋವು, ಅಮ್ಮನ ವಾತ್ಸಲ್ಯವನ್ನು ಬರಹದ ಮೂಲಕ ವ್ಯಕ್ತಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ!

ಇನ್ನು ಪ್ರಕರಣದ ಇಂಚಿಂಚು ಮಾಹಿತಿ ಕಲೆ ಹಾಕಿದ ಪೊಲೀಸರು, ಅತ್ಯಾಚಾರ ಆಗಿರೋ ಸ್ಥಳ, ಆರೋಪಿಗಳ ಬಗ್ಗೆ ಸಂಪೂರ್ಣ ಸಾಕ್ಷ್ಯ ಸಂಗ್ರಹಿಸಿ ಕೋರ್ಟ್​ಗೆ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಎಲ್ಲಿಂದ ಆರಂಭವಾಯ್ತು, ಯಾರ್ಯಾರು ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ, ವೀಡಿಯೋ ಸಂಗ್ರಹಿಸಿದ ವ್ಯಕ್ತಿ ಯಾರು, ಈ ಬಾಲಕಿಯನ್ನ ಹೇಗೆಲ್ಲಾ ಮಿಸ್ ಯೂಸ್ ಮಾಡಿಕೊಂಡಿದ್ದಾರೆಂಬುದನ್ನ ಕೂಡ ಸಂಗ್ರಹಿಸಿದ್ದಾರೆ. ಪ್ರಕರಣದ ಸಂಪೂರ್ಣ ಡೀಟೇಲ್ಸ್ ಕಲೆ ಹಾಕಿ ಚಿಕ್ಕಮಗಳೂರಿನ ಪೋಕ್ಸೋ ಕೋರ್ಟ್​ಗೆ ಮೊದಲ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಅದೆಲ್ಲೋ ಉತ್ತರ ಪ್ರದೇಶದಲ್ಲೋ, ಬಿಹಾರದಲ್ಲೋ ಕೇಳುತ್ತಿದ್ದ ಪ್ರಕರಣ ನಮ್ಮ ನೆಲದಲ್ಲಿ ನಡೆದಿದ್ದನ್ನ ಕೇಳಿ ಒಮ್ಮೆ ಜನರು ಕಂಗಲಾಗಿದ್ದರು. 2020 ಸೆಪ್ಟೆಂಬರ್​ನಲ್ಲಿ ಪ್ರಕರಣ ಬೆಳಕಿಗೆ ಬಂದರೂ ಆರೋಪಿಗಳನ್ನ ಬಂಧಿಸಲು ಮೀನ ಮೇಷ ಎಣಿಸುತ್ತಿದ್ದಾಗ ಶೃಂಗೇರಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಯಿತು. ಆ ವೇಳೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಮಹಿಳೆಯರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿ, ಆರೋಪಿಗಳನ್ನ ಬಂಧಿಸುವಂತೆ ಒತ್ತಡ ಹೇರಿದರು. ಸ್ವತಃ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಧ್ಯಪ್ರವೇಶಿಸಿ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುವಂತೆ ಸೂಚಿಸಿದರು. ಈ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಿದ ಪಶ್ಚಿಮ ವಲಯ ಐಜಿಪಿ ಜ್ಯೋತಿ ರೇ ಅವರು ಸಿಪಿಐರನ್ನ ಸಸ್ಪೆಂಡ್ ಮಾಡಿದ್ರು. ಸದ್ಯ ಎಎಸ್ಪಿ ನೇತೃತ್ವದಲ್ಲಿ ಐವರು ಇನ್ಸ್​ಪೆಕ್ಟರ್​ಗಳ ತಂಡ ತನಿಖೆ ನಡೆಸಿ ಬರೋಬ್ಬರಿ 37 ಮಂದಿಯನ್ನ ಬಂಧಿಸಿ ಮೊದಲ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನೂ ಕೂಡ ಹಲವು ಆರೋಪಿಗಳು ಪ್ರಕರಣದಲ್ಲಿ ಇರೋ ಮಾಹಿತಿ ಲಭ್ಯವಾಗಿದ್ದು, ಉಳಿದವರಿಗಾಗಿ ಖಾಕಿ ಪಡೆ ತಲಾಶ್ ಮುಂದುವರಿಸಿದೆ.

ವರದಿ: ವೀರೇಶ್ ಹೆಚ್ ಜಿ
Published by:Vijayasarthy SN
First published: