HOME » NEWS » District » SRI RAMASENE WAS DRIVE DATTAMALE CAMPAIGN IN CHIKKAMAGALURU RH VCTV

ಮತ್ತೆ ಶುರುವಾಯ್ತು ದತ್ತಪೀಠ ಹೋರಾಟ; ದತ್ತಮಾಲಾ ಅಭಿಯಾನಕ್ಕೆ ಚಾಲನೆ

ದಶಕಗಳ ಹಿಂದೆ ಆರಂಭವಾದ ಸಮಸ್ಯೆಯನ್ನು ಎರಡು ಸಮುದಾಯಗಳ ನಡುವೆ ಯಾವುದೇ ಗಲಾಟೆ ಇಲ್ಲದ ಹಾಗೆ ಶಾಂತ ರೀತಿಯಲ್ಲಿ ಸರ್ಕಾರ ಬಗೆಹರಿಸಬೇಕಿದೆ. 

news18
Updated:November 22, 2020, 9:05 PM IST
ಮತ್ತೆ ಶುರುವಾಯ್ತು ದತ್ತಪೀಠ ಹೋರಾಟ; ದತ್ತಮಾಲಾ ಅಭಿಯಾನಕ್ಕೆ ಚಾಲನೆ
ದತ್ತಮಾಲೆ ಧರಿಸುತ್ತಿರುವ ಶ್ರೀರಾಮಸೇನೆ ಕಾರ್ಯಕರ್ತರು.
  • News18
  • Last Updated: November 22, 2020, 9:05 PM IST
  • Share this:
ಚಿಕ್ಕಮಗಳೂರು: ಅದು ರಾಜ್ಯದ, ದೇಶದ ಗಮನ ಸೆಳೆದಿರುವ ವಿವಾದದ ಕೇಂದ್ರ. ಕೇಂದ್ರ ಅನ್ನುವುದಕ್ಕಿಂತಲೂ ರಾಜ್ಯ ಸರ್ಕಾರಕ್ಕೆ ಒಂದು ರೀತಿಯಾಗಿ ಅಗ್ನಿಪರೀಕ್ಷೆಯಾಗಿರೋ ಸ್ಥಳ. ಆ ಭಾವನಾತ್ಮಕ ವಿಚಾರವನ್ನೇ ಇಟ್ಕೊಂಡು ಸ್ಥಳೀಯವಾಗಿ ಚುನಾವಣೆ ಎದುರಿಸಿದ ಬಿಜೆಪಿ, ಸದ್ಯ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಏನೂ ಮಾಡದೇ ತಟಸ್ಥವಾಗಿದೆ. ಜನಪ್ರತಿನಿಧಿಗಳು, ಸಚಿವರು ಅಧಿಕಾರಕ್ಕೆ ಬಂದ ಮೇಲೆ ಮೌನವಾದರೂ ಹೋರಾಟಗಾರರು ಮಾತ್ರ ಆ ವಿಚಾರವಾಗಿ ಪದೇ ಪದೇ ದನಿ ಎತ್ತುತ್ತಲೇ ಬಂದಿದ್ದಾರೆ. ಒಂದು ವೇಳೆ ಕೊರ್ಟ್ ಮಾತನ್ನು ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲು ಸಿದ್ಧರಾಗಿದ್ದಾರೆ.

ನೂರಾರು ವರ್ಷಗಳ ಹಿಂದಿನ ಅಯೋಧ್ಯೆ ವಿವಾದ ಅಂತೂ ಬಗೆಹರಿದಿದೆ. ತುಂಬಾ ಸೂಕ್ಷ್ಮ ವಿಚಾರವಾಗಿದ್ದ ಈ ವಿವಾದವನ್ನು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿ ತೆರೆ ಎಳೆದಿದೆ. ಸದ್ಯ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ದಿನಗಣನೆ ಶುರುವಾಗಿದೆ. ಆದರೆ ರಾಜ್ಯದಲ್ಲಿ ಅದೇ ರೀತಿಯಾಗಿ ಬೂದಿ ಮುಚ್ಚಿದ ಕೆಂಡವಾಗಿ ಉಳಿದುಕೊಂಡಿರೋದು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ಪೀಠದ ವಿಚಾರ.! ಹೌದು, ಕಳೆದ ಹಲವಾರು ವರ್ಷಗಳಿಂದ ಈ ವಿಚಾರ ಎರಡು ಧರ್ಮಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಹಿಂದೂಗಳು ಇದು ಶ್ರೀ ಗುರು ದತ್ತಾತ್ರೇಯ ದತ್ತಪೀಠ ಅಂತಾ ದನಿ ಎತ್ತುತ್ತ ಬರ್ತಿದ್ರೆ, ಮುಸ್ಲಿಂಮರು ಇದು ಬಾಬಾಬುಡನ್ ಸ್ವಾಮಿ ಇದ್ದ ಪವಿತ್ರ ಕೇಂದ್ರ ಅಂತಾ ಹಕ್ಕು ಮಂಡಿಸುತ್ತಿದ್ದಾರೆ. ಶ್ರೀರಾಮಸೇನೆ ಕಾರ್ಯಕರ್ತರಂತೂ ದತ್ತಮಾಲಾ ಅಭಿಯಾನ ಶುರುಮಾಡಿ ದತ್ತಪೀಠ ನಮಗೆ ಸೇರಿದ್ದು ಅಂತಾ ಪ್ರತಿವರ್ಷ ದತ್ತಮಾಲೆ ಧರಿಸಿ 15 ವರ್ಷಗಳಿಂದ ಅಭಿಯಾನ ಮಾಡ್ಕೊಂಡು ಬರ್ತಿದ್ದಾರೆ. ಇಂದು ಕೂಡ ಶ್ರೀರಾಮ ಸೇನೆಯ ಕಾರ್ಯಕರ್ತರು ದತ್ತಮಾಲೆ ಧರಿಸಿ ಅಭಿಯಾನಕ್ಕೆ ಚಾಲನೆ ಕೊಟ್ಟರು. ಐದು ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ರಾಜ್ಯಾದ್ಯಂತ ನೂರಾರು ಕಾರ್ಯಕರ್ತರು ಇಂದು ದತ್ತಮಾಲೆ ಧರಿಸಿ ವ್ರತಾಚರಣೆ ಶುರುಮಾಡಿದ್ದಾರೆ.

ಸದ್ಯ ಎರಡು ಕಡೆವರಿಗೆ ಭಾವನಾತ್ಮಕವಾಗಿರುವ ಈ ವಿಚಾರವನ್ನೇ ಇಟ್ಕೊಂಡು ಸ್ಥಳೀಯವಾಗಿ ಬಿಜೆಪಿ ಹಲವು ಬಾರಿ ಚುನಾವಣೆ ಎದುರಿಸಿದೆ. ಬಿಎಸ್​ವೈ ಕೂಡ ಮುಖ್ಯಮಂತ್ರಿ ಆದ್ರೆ ಮಾಲೆ ಹಾಕಿಕೊಂಡು ಬರ್ತೇನೆ ಅಂತಾ ಮಾತು ಕೊಟ್ಟಿದ್ರಂತೆ. ಆದರೆ ಈಗ ಅಧಿಕಾರಕ್ಕೆ ಬಂದ ಮೇಲೆ ಸೈಲೆಂಟಾಗ್ತಾ ಇರೋದು ಶ್ರೀರಾಮಸೇನೆ ಸೇರಿದಂತೆ ಹಿಂದೂ ಕಾರ್ಯಕರ್ತರನ್ನ ಕೆರಳಿಸಿದೆ. ದತ್ತಾತ್ರೇಯನ ಶಾಪದಿಂದಲೇ ಕಳೆದ ಅವಧಿಯಲ್ಲಿ ಯಡಿಯೂರಪ್ಪ, ಪೂರ್ಣಾವಧಿ ಪೂರೈಸದೇ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡಿರೋದು. ಈ ಬಾರಿಯೂ ಕೂಡ ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳದಿದ್ರೆ, ಅಪಾಯ ಕಟ್ಟಿಟ್ಟ ಬುತ್ತಿ. ದತ್ತಪೀಠವನ್ನ ಹಿಂದೂಗಳಿಗೆ ವಹಿಸಬೇಕು, ಈ ಬಗ್ಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು, ಇಲ್ಲದಿದ್ರೆ ಉಗ್ರ ಹೋರಾಟ ಮಾಡೋದಾಗಿ ಶ್ರೀರಾಮಸೇನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಇದನ್ನು ಓದಿ: ಬೀದರ್ ಕಾರಂಜಾ ಡ್ಯಾಂ ಭರ್ತಿ; 5 ಸಾವಿರ ಎಕರೆ ಹೆಚ್ಚುವರಿ ಕೃಷಿ ಜಮೀನಿಗೆ ನುಗ್ಗಿದ ಹಿನ್ನೀರು, ರೈತರು ಕಂಗಾಲು

ಶ್ರೀರಾಮಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ಇದೇ ನವೆಂಬರ್ 26 ರಂದು ದತ್ತಪೀಠದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ಶೆಡ್ಗಳಲ್ಲಿ ಹೋಮ, ಹವನ ನಡೆಯಲಿದ್ದು, ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಕೊರೊನಾವಿರುವ ಕಾರಣ ಶೋಭಾಯಾತ್ರೆಗೆ ಬ್ರೇಕ್ ಹಾಕಲಾಗಿದ್ದು, ಕಡಿಮೆ ಸಂಖ್ಯೆಯಲ್ಲಿ ದತ್ತಭಕ್ತರು ಭಾಗವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ, ಜಿಲ್ಲಾಡಳಿತ ಸೂಚನೆಯಂತೆ ಕಡಿಮೆ ಸಂಖ್ಯೆಯಲ್ಲಿ ದತ್ತಭಕ್ತರು 26 ರಂದು ದತ್ತಪೀಠಕ್ಕೆ ತೆರೆಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.

ಪ್ರತಿಬಾರಿ ನವೆಂಬರ್, ಡಿಸೆಂಬರ್ ನಲ್ಲಿ ದತ್ತಮಾಲಾ ಆಚರಣೆ ಕಾಫಿನಾಡಿನಲ್ಲಿ ನಡೆದುಕೊಂಡು ಬರುತ್ತಿದ್ದು, ದತ್ತಪೀಠಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದತ್ತಪೀಠ ಹಿಂದೂಗಳಿಗೆ ಬರುತ್ತೆ ಅಂತಾ ಲೆಕ್ಕ ಹಾಕಿದ್ದ ಹೋರಾಟಗಾರರಿಗೆ ನಿರಾಸೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ದತ್ತಪೀಠ ವಿವಾದ ಬಗೆಹರಿಸುವ ಮನಸ್ಸು ಮಾಡಿಲ್ಲ. ಇದೀಗ ಮತ್ತೇ ಶ್ರೀರಾಮ ಸೇನೆ ಹೋರಾಟ ಶುರುಮಾಡಿದ್ದು, ಕಳೆದ ಹಲವು ವರ್ಷಗಳಿಂದ ವಿವಾದಿತ ಸ್ಥಳವಾಗಿರುವ ದತ್ತಪೀಠದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.ದಶಕಗಳ ಹಿಂದೆ ಆರಂಭವಾದ ಸಮಸ್ಯೆಯನ್ನು ಎರಡು ಸಮುದಾಯಗಳ ನಡುವೆ ಯಾವುದೇ ಗಲಾಟೆ ಇಲ್ಲದ ಹಾಗೆ ಶಾಂತ ರೀತಿಯಲ್ಲಿ ಸರ್ಕಾರ ಬಗೆಹರಿಸಬೇಕಿದೆ.
Published by: HR Ramesh
First published: November 22, 2020, 9:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading