ತುಮಕೂರಿನ ಸಿದ್ದಗಂಗಾ ಮಠದ ಮಕ್ಕಳಿಗೆ ಸ್ಪಿರುಲಿನಾ ಔಷಧಿ ವಿತರಣೆ

ಸ್ಪಿರುಲಿನ ಚಿಕ್ಕಿಯು ಪೌಷ್ಠಿಕ ಆಹಾರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಕೇವಲ ಸ್ಪಿರುಲಿನ ಪಾಚಿಯನ್ನು ಮಾತ್ರ ಸೇವನೆ ಮಾಡಲು ನೀಡಿದರೆ ಅವರು ತಿನ್ನುವುದಿಲ್ಲವಾದ್ದರಿಂದ ಬೆಲ್ಲ ಮತ್ತು ಕಡಲೆಬೀಜವನ್ನು ಬಳಸಿ ಚಿಕ್ಕಿ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ.

ಸಿದ್ದಗಂಗಾ ಮಠ

ಸಿದ್ದಗಂಗಾ ಮಠ

  • Share this:
ತುಮಕೂರು: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮಠದ ಮಕ್ಕಳಿಗೆ ಇಂದು ಸ್ಪಿರುಲಿನ ಚಿಕ್ಕಿ ವಿತರಣೆ ಮಾಡಿದರು. ಮಠದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಪಿರುಲಿನ ಫೌಂಡೇಶನ್ ವತಿಯಿಂದ ಮಠದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಚಿಕ್ಕಿ ವಿತರಣೆ ಮಾಡಿದ ನಂತರ ಮಾತನಾಡಿದ ಅವರು, ಕೋವಿಡ್ -19 ಸಂದರ್ಭದಲ್ಲಿ ಈ ಸ್ಪಿರುಲಿನ ಚಿಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಹಲವಾರು ಸಮಸ್ಯೆಗಳಲ್ಲಿ ಅಪೌಷ್ಠಿಕತೆಯು ಸಹ ಒಂದು. ಅದರಲ್ಲಿಯೂ ಮಕ್ಕಳು, ಗರ್ಭಿಣಿ, ಬಾಣಂತಿ, ವಯೋವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸ್ಪಿರುಲಿನ ಚಿಕ್ಕಿಯು ಪೌಷ್ಠಿಕ ಆಹಾರವಾಗಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪಿರುಲಿನ ಇದೊಂದು ಪಾಚಿ ಜಾತಿಗೆ ಸೇರಿದ ಸಸ್ಯವಾಗಿದ್ದು, ಜನರಿಗೆ ಇನ್ನೂ ಚಿರಪರಿಚಿತವಾಗಿಲ್ಲ. ಶ್ರೀ ಸಿದ್ದಗಂಗಾ ಮಠಕ್ಕೆ ಪ್ರತಿದಿನ ಗಣ್ಯಾತಿಗಣ್ಯರು, ವಿದೇಶೀಯರು, ಸಾರ್ವಜನಿಕರು ಭೇಟಿ ನೀಡುವುದರಿಂದ ಸ್ಪಿರುಲಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಠದ ಆವರಣದಲ್ಲಿಯೇ ಸ್ಪಿರುಲಿನ ಬೆಳೆಯ ಪ್ರಾತ್ಯಕ್ಷಿಕಾ ಘಟಕ ಸ್ಥಾಪಿಸಲು ಹಾಗೂ ಮಠದ ಮಕ್ಕಳಿಗೆ ಪ್ರತಿದಿನ ಸ್ಪಿರುಲಿನ ಚಿಕ್ಕಿ ಮಾತ್ರೆಗಳ ಪೂರೈಕೆಗಾಗಿ ಸ್ಪಿರುಲಿನ ಬೆಳೆಯಲು ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.

ಇದನ್ನೂ ಓದಿ: ಇಲ್ಲಿ ಕೃಷಿ ಭೂಮಿ ಖರೀದಿ ಸುಲಭವಲ್ಲ; ಜಮೀನು ಮಾರಾಟಕ್ಕೆ ಬೇಕು ಜಿಲ್ಲಾಧಿಕಾರಿ ಅನುಮತಿ

ಮಕ್ಕಳಿಗೆ ಕೇವಲ ಸ್ಪಿರುಲಿನ ಪಾಚಿಯನ್ನು ಮಾತ್ರ ಸೇವನೆ ಮಾಡಲು ನೀಡಿದರೆ ಅವರು ತಿನ್ನುವುದಿಲ್ಲವಾದ್ದರಿಂದ ಬೆಲ್ಲ ಮತ್ತು ಕಡಲೆಬೀಜವನ್ನು ಬಳಸಿ ಚಿಕ್ಕಿ ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಬೆಲ್ಲದ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಳವಾಗುವುದರೊಂದಿಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ. ಕಳೆದ ವಾರವಷ್ಟೇ ಜಿಲ್ಲೆಯ ಅತಿ ಹಿಂದುಳಿದ ಪ್ರದೇಶವಾದ ಪಾವಗಡ ತಾಲ್ಲೂಕಿನ 1 ಸಾವಿರ ಅಪೌಷ್ಟಿಕ ಮಕ್ಕಳಿಗೆ 1 ವರ್ಷ ಕಾಲ ಸ್ಪಿರುಲಿನ ಚಿಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದರು.ಸ್ಪಿರುಲಿನ ಚಿಕ್ಕಿಯು ಆಹಾರವೂ ಹೌದು, ಔಷಧಿಯೂ ಹೌದು. ದೇಹದಲ್ಲಿರುವ ಕೊರತೆಯನ್ನು ಸರಿದೂಗಿಸುವ ಶಕ್ತಿ ಸ್ಪಿರುಲಿನಾಕ್ಕಿದೆ. ಮಕ್ಕಳಷ್ಟೇ ಅಲ್ಲದೆ ಯುವಕರು, ಮಹಿಳೆಯರು, ವಯೋವೃದ್ಧರು ಈ ಚಿಕ್ಕಿಯನ್ನು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರು.

ಸ್ಪಿರುಲಿನ ಫೌಂಡೇಷನ್ ಅಧ್ಯಕ್ಷ ಆರ್.ವಿ. ಮಹೇಶ್ ಮಾತನಾಡಿ, ಮಠದ ಆವರಣದಲ್ಲಿ ಸ್ಪಿರುಲಿನ ಬೆಳೆಯಲು ಸ್ಥಳಾವಕಾಶ ಮಾಡಿಕೊಡುತ್ತಿರುವ ಮಠದ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದರು.
Published by:Vijayasarthy SN
First published: