news18-kannada Updated:May 27, 2020, 10:17 PM IST
ಬಿತ್ತನೆ ಕೂರಿಗೆಗೆ ಮಡಿಲು ತುಂಬುತ್ತಿರುವ ದೃಶ್ಯ
ಬಾಗಲಕೋಟೆ (ಮೇ 27): ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದೆ. ಭೂತಾಯಿ ಒಡಲಿಗೆ ಅನ್ನದಾತರು ಬೀಜ ಹಾಕಲು ಸಜ್ಜಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅನ್ನದಾತರು ಬೀಜವನ್ನು ಭೂರಮೆ ಮಡಿಲು ತುಂಬುವ ಮುನ್ನ ರೈತ ಬಿತ್ತನೆ ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರ ಮಾಡುತ್ತಾರೆ. ಹೌದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಬಳಿಯ ಕೋಟೆಕಲ್ ಅಮರೇಶ್ವರ ಮಠದಲ್ಲಿ ನೀಲಕಂಠಶಾಸ್ತ್ರಿ ಸ್ವಾಮೀಜಿ ನೇತೃತ್ವದಲ್ಲಿ ಬಿತ್ತನೆ ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರ ನಡೆಯಿತು. ಆಧುನಿಕ ಕಾಲದಲ್ಲೂ ರೈತರು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಬಿತ್ತನೆ ಕೂರಿಗೆಗೆ ಏಕೆ ಮಡಿಲು ಶಾಸ್ತ್ರ?ರೈತರು ಮುಂಗಾರು ಹಂಗಾಮು ಆರಂಭವಾಗುವ ಮೊದಲ ಬಾರಿಗೆ ಬಿತ್ತನೆಗೆ ಮುಂದಾಗುವ ಮುನ್ನ ಉತ್ತರ ಕರ್ನಾಟಕದಲ್ಲಿ ಬಿತ್ತನೆ ಕೂರಿಗೆಗೆ ಅನ್ನದಾತರು ಮಡಿಲು ಶಾಸ್ತ್ರ ಮಾಡುತ್ತಾರೆ. ಕೂರಿಗೆ ಎನ್ನುವುದು ಬಿತ್ತನೆ ಪರಿಕರ. ಕಟ್ಟಿಗೆಯಿಂದ ತಯಾರಿಸಲಾಗಿದ್ದು, ಕೂರಿಗೆಗೆ ದಿಂಡು,ಮೂರು ತಾಳು, ಎರಡು ಈಸು ಇರುತ್ತದೆ. ಮೂರು ತಾಳುವಿಗೆ ಹೊಂದಿಕೊಂಡಂತೆ ಬೀಜ ಹಾಕಲು ಶೆಡ್ಡಿ ಬಟ್ಟಲ ಕಟ್ಟಲಾಗಿರುತ್ತೆ. ಬಿತ್ತನೆ ಕೂರಿಗೆಗೆ ಹಸಿರು ಸೀರೆ ತೊಡಿಸಿ, ಹೆಣ್ಣು, ಗಂಡು ಐದು ಮುತ್ತೈದೆಯರು ಹಾಗೂ ರೈತ ಕುಟುಂಬ ಸೇರಿ ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರ ಮಾಡುತ್ತಾರೆ. ಈ ಮಡಿಲು ಶಾಸ್ತ್ರ ಏಕೆ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಸಹಜವಾಗಿ ಪ್ರಶ್ನೆ ಬರುತ್ತದೆ.
ಕೂರಿಗೆಯಿಂದ ಬಿತ್ತಿದ ಬೀಜ ಹುಲುಸಾಗಿ ಬೆಳೆದು ಅನ್ನ ಸಂಪತ್ತು ಹೆಚ್ಚಾಗಲಿ ಎಂದು ಬಿತ್ತನೆ ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರದ ಮೂಲಕ ರೈತರು ಕೋರಿಕೊಳ್ಳುತ್ತಾರೆ. ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರದ ಬಳಿಕ ರೈತರು ಜಮೀನಿನಲ್ಲಿ ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಾರೆ. ಇನ್ನು ರೈತರು ಈ ಪದ್ಧತಿಯನ್ನು ದೇವಿಯ ವಾರ ಮಂಗಳವಾರ, ಶುಕ್ರವಾರದಂದು ಮಾಡುತ್ತಾರೆ. ರೈತ ಕುಟುಂಬದಲ್ಲಿ ಇನ್ನೂ ಇಂತಹ ವಿಶಿಷ್ಟ ಪದ್ಧತಿ ಆಚರಣೆಯಲ್ಲಿವೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಬಹುಪಾಲು ಯಂತ್ರೋಪಕರಣಗಳ ಮೂಲಕ ನಡೆಯುತ್ತದೆ.
ಲಾಕ್ಡೌನ್ ಎಫೆಕ್ಟ್; ಹಳ್ಳಿಗೆ ಬಾರದ ಬಸ್ಸು; ಆಟೋ ಹತ್ತಲು ಬೇಕು 600 ರೂಪಾಯಿ
ಎತ್ತುಗಳ ಸ್ಥಾನದಲ್ಲಿ ಟ್ರ್ಯಾಕ್ಟರ್ ಬಂದು ನಿಂತಿವೆ. ಗ್ರಾಮೀಣ ಭಾಗದಲ್ಲಿ ರೈತರು ಎತ್ತು,ಕಟ್ಟಿಗೆಯ ಪರಿಕರಗಳಿಂದ ಭೂತಾಯಿಗೆ ಭಾರವಾಗದ ರೀತಿಯಲ್ಲಿ ಉಳುಮೆ ಮಾಡುತ್ತಾರೆ. ಗರ್ಭಿಣಿ ಮಹಿಳೆಗೆ ಹೇಗೆ ಮಡಿಲು ತುಂಬುವ ಶಾಸ್ತ್ರ ಮಾಡುತ್ತಾರೋ ಹಾಗೆ ರೈತರು ಬಿತ್ತನೆ ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರ ಮಾಡುತ್ತಾರೆ ಅಂತಾರೆ ನೀಲಕಂಠ ಶಾಸ್ತ್ರೀ ಸ್ವಾಮೀಜಿ.
ರೈತರ ಬದುಕು ವಿಶಿಷ್ಟ ಪದ್ಧತಿಯೊಂದಿಗೆ ಹಾಸು ಹೊಕ್ಕಾಗಿದೆ. ಯಾಕಂದರೆ ಬಿತ್ತನೆ, ಫಸಲು ಕೊಯ್ಲು, ಬಣಮೆ ಮೇವು ಒಟ್ಟಲು ಹೀಗೆ ಹಲವು ಕಾರ್ಯಗಳನ್ನು ವಿಶಿಷ್ಟ ಪದ್ಧತಿ, ಮುಹೂರ್ತಕ್ಕನುಗಣವಾಗಿ ಮಾಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಮುಂಗಾರು ಬಿತ್ತನೆ ಕಾರ್ಯ ಭರದಿಂದ ನಡೆದಿದ್ದು, ರೈತರು ಬಿತ್ತನೆ ಪೂರ್ವ ವಿಶಿಷ್ಟ ಕೂರಿಗೆಗೆ ಮಡಿಲು ತುಂಬುವ ಶಾಸ್ತ್ರ ಮಾಡಿಯೇ ಭೂತಾಯಿಗೆ ಬೀಜ ಹಾಕುತ್ತಾರೆ. ಆಧುನಿಕ ಕಾಲದಲ್ಲಿ ನಶಿಸಿ ಹೋಗುತ್ತಿರುವ ರೈತಾಪಿ ವರ್ಗದ ಸಂಪ್ರದಾಯಗಳು ಇನ್ನೂ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
First published:
May 27, 2020, 10:17 PM IST