ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಪೂಜೆ; ನಟ ದೊಡ್ಡಣ್ಣ ಸೇರಿ ಹಲವು ಗಣ್ಯರು ಭಾಗಿ

50ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶ್ರೀ ಕ್ಷೇತ್ರದಲ್ಲಿ ಹೊಯ್ಸಳ ಶಿಲ್ಪಕಲೆಯ ಮೂರು ಪ್ರಾಕಾರಗಳ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಿ 158ಅಡಿ ಎತ್ತರದ ಬೃಹತ್ ರಾಜಗೋಪುರವನ್ನು ನಿರ್ಮಿಸಲು ಸಿದ್ಧತೆಯನ್ನು ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠವು ಪೂರ್ವತಯಾರಿಯಲ್ಲಿ ತೊಡಗಿದೆ.

ಭೂ ವರಹನಾಥ ಸ್ವಾಮಿ ವಿಶೇಷ ಪೂಜೆಯಲ್ಲಿ ಭಾಗಿಯಾದ ನಟ ದೊಡ್ಡಣ್ಣ.

ಭೂ ವರಹನಾಥ ಸ್ವಾಮಿ ವಿಶೇಷ ಪೂಜೆಯಲ್ಲಿ ಭಾಗಿಯಾದ ನಟ ದೊಡ್ಡಣ್ಣ.

 • Share this:
  ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಭೂವರಹನಾಥ ಕಲ್ಲಹಳ್ಳಿ ಗ್ರಾಮದಲ್ಲಿ ಹೇಮಾವತಿ ನದಿಯ ದಂಡೆಯ ಮೇಲೆ ನೆಲೆಸಿರುವ ಭೂವರಹನಾಥಸ್ವಾಮಿಗೆ ರೇವತಿನಕ್ಷತ್ರದ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು, ಬಗೆ ಬಗೆಯ ಅಭಿಷೇಕ ಹಾಗೂ ಪುಷ್ಪಾಭಿಷೇಕಗಳು ಸಡಗರ ಸಂಭ್ರಮಗಳಿಂದ ನಡೆದವು.

  ರೇವತಿ ನಕ್ಷತ್ರದ ಪವಿತ್ರ ದಿನವಾದ ಇಂದು ಭೂದೇವಿಯನ್ನು ಹಿಂಸಿಸುತ್ತಿದ್ದ ಹಿರಣ್ಯಾಕ್ಷ ಹಾಗೂ ಲೋಕಕಂಟಕನಾದ ಹಿರಣ್ಯಕಶ್ಯಪನನ್ನು ಸಂಹರಿಸಲು ಭಗವಂತನಾದ ಶ್ರೀ ಹರಿಯು ವರಾಹ ರೂಪದ ಮುಖವನ್ನು ಧರಿಸಿ ಜನ್ಮತಾಳಿದ ದಿನವಾದ್ದರಿಂದ ಇಂದು ಭೂವರಹನಾಥ ದೇವಾಲಯದಲ್ಲಿ ಹಬ್ಬದ ಸಂಭ್ರಮವು ನೆಲೆಸಿತ್ತು. ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟಿದ್ದ ಜನರು ಭೂವರಹಾಸ್ವಾಮಿಯ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ  ಸ್ವಾಮಿಯ ಕೃಪೆಗೆ ಪಾತ್ರರಾದರು.

  17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯಲ್ಲಿ ಅತ್ಯಂತ ಸುಂದರವಾಗಿ ಕೆತ್ತಿರುವ ಬೃಹದಾಕಾರದ ಶ್ರೀಲಕ್ಷಿ ಸಮೇತನಾಗಿ ನೆಲೆಸಿರುವ ಭೂವರಹನಾಥಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನಹಾಲು, ಪವಿತ್ರ ಗಂಗಾಜಲ, ಹಸುವಿನ ತುಪ್ಪ, ಜೇನುತುಪ್ಪ, ಶ್ರೀಗಂಧ, ಅರಿಶಿನದಲ್ಲಿ ವಿಶೇಷವಾಗಿ ಅಭಿಷೇಕಮಾಡಿ, ೫೮ ಬಗೆಯ ಅಪರೂಪದ ವಿವಿಧ ಹೂವುಗಳಾದ ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು, ಮರುಗ, ಸೂಜಿಮಲ್ಲಿಗೆ, ಜಾಜಿ, ಮಲ್ಲಿಗೆ, ಕನಕಾಂಬರ, ಸ್ಪಟಿಕ, ಪಾರಿಜಾತ,  ಗುಲಾಬಿ ಹೂವುಗಳು, ಜವನ, ತಾವರೆ ಸೇರಿದಂತೆ ವಿವಿಧ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು.

  ಉಘೇ..ಗೋವಿಂದ, ಉಘೇ..ವೆಂಕಟರಮಣ, ಜೈಭೂವರಾಹ, ಗೋವಿಂದ-ಗೋವಿಂದ ಎಂಬ ಜಯಘೊಷಗಳು ಮುಗಿಲು ಮುಟ್ಟಿದ್ದವು. ಕೋವಿಡ್ 2ನೇ ಅಲೆಯ ತೀವ್ರತೆಯು ಕಡಿಮೆಯಾಗುತ್ತಿದ್ದು ಮಹಾಮಾರಿಯ ೩ನೇ ಅಲೆಯು ಬಾರದೇ ಇರಲಿ, ಬಂದರೂ ತೀವ್ರತೆ ಕಡಿಮೆ ಇರಲಿ ಸಾವು-ನೋವು ಉಂಟಾಗದೇ ಇರಲಿ ಎಂದು ವಿಶೇಷವಾಗಿ ಭೂವರಹನಾಥ ಸ್ವಾಮಿಯನ್ನು ಪ್ರಾರ್ಥಿಸಲಾಯಿತು.

  ದೇವಾಲಯದ ಮುಂಭಾಗದಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಿರುವ ಶ್ರೀ ವೆಂಕಟರಮಣಸ್ವಾಮಿ, ಶ್ರೀಲಕ್ಷಿ ಭೂದೇವಿ ಅಮ್ಮನವರ ಉತ್ಸವ ಮೂರ್ತಿಗಳಿಗೂ ಹಾಲು, ಜೇನುತುಪ್ಪ, ಕಬ್ಬಿನಹಾಲು, ಎಳನೀರು ಸೇರಿದಂತೆ ವಿವಿಧ ಬಗೆಯ ಪುಷ್ಪಗಳಿಂದ ಅಭಿಷೇಕ ನಡೆಸಲಾಯಿತು. ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ ಭೂವರಹನಾಥಕ್ಷೇತ್ರವು ರಾಜ್ಯದಲ್ಲಿಯೇ ಅತ್ಯಂತ ಸುಪ್ರಸಿದ್ಧವಾದ ಯಾತ್ರಾಸ್ಥಳವಾಗಿ ಎರಡನೇ ಭೂವೈಕುಂಠವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೇಮಾವತಿ ನದಿಯ ದಂಡೆಯಲ್ಲಿರುವ ಈ ದೇವಾಲಯದಲ್ಲಿರುವ ಭೂವರಹನಾಥ ಸ್ವಾಮಿಯನ್ನು ಕಣ್ತುಂಬಿಕೊಳ್ಳುವುದೇ ಮಹದಾನಂದವಾಗಿದೆ. ಇಡೀ ದೇಶದಲ್ಲಿಯೇ ಇಲ್ಲಿರುವ ಭವ್ಯವಾದ ಬೃಹತ್ ಎತ್ತರದ ಸ್ವಾಮಿಯನ್ನು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ. 50ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶ್ರೀ ಕ್ಷೇತ್ರದಲ್ಲಿ ಹೊಯ್ಸಳ ಶಿಲ್ಪಕಲೆಯ ಮೂರು ಪ್ರಾಕಾರಗಳ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಿ 158ಅಡಿ ಎತ್ತರದ ಬೃಹತ್ ರಾಜಗೋಪುರವನ್ನು ನಿರ್ಮಿಸಲು ಸಿದ್ಧತೆಯನ್ನು ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠವು ಪೂರ್ವತಯಾರಿಯಲ್ಲಿ ತೊಡಗಿದ್ದು ಈಗಾಗಲೇ 500 ಲೋಡ್‌ಗೂ ಹೆಚ್ಚಿನ ಗ್ರಾನೈಟ್ ಶಿಲೆಯು ಚಿಕ್ಕಬಳ್ಳಾಪುರದ ಕಲ್ಲಿನ ಗಣಿಯಿಂದ ಭೂವರಹನಾಥ ಕ್ಷೇತ್ರಕ್ಕೆ ಬಂದು ತಲುಪುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ಅತ್ಯಂತ ಸುಂದರವಾದ ಭವ್ಯ ದೇವಾಲಯವು ನಿರ್ಮಾಣವಾಗಲಿದ್ದು ಪವಿತ್ರ ಯಾತ್ರಾಸ್ಥಳವಾಗಿ ಈ ಕ್ಷೇತ್ರವು ನಾಡಿನಾಧ್ಯಂತ ಖ್ಯಾತಿಹೊಂದಲಿದೆ ಎಂದು ದೊಡ್ಡಣ್ಣ ಹೇಳಿದರು.

  ಇದನ್ನು ಓದಿ: Delta Plus| ಕೊರೋನಾ ಒಂದು ಡೋಸ್ ಲಸಿಕೆ ಪಡೆದವರು ಡೆಲ್ಟಾ ಪ್ಲಸ್ ವೈರಸ್​ನಿಂದ ಸುರಕ್ಷಿತ; ಐಸಿಎಂಆರ್

  ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ.ಹಯಗ್ರೀವವಾಗೀಶತೀರ್ಥಶ್ರೀಗಳು ರೇವತಿ ನಕ್ಷತ್ರದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಸ್ವಾಮಿಯ ಸುತ್ತಲೂ 7ಸುತ್ತು ಪ್ರದಕ್ಷಿಣಿ ಹಾಕಿ ಆಶೀರ್ವಚನ ನೀಡಿ ಮಾತನಾಡಿ ಕೆ.ಆರ್.ಪೇಟೆ ತಾಲೂಕಿನ ಭೂವರಹನಾಥಕ್ಷೇತ್ರವನ್ನು ತಿರುಮಲ-ತಿರುಪತಿಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಭೂ ವರಹನಾಥಸ್ವಾಮಿಯ ಸಂಕಲ್ಪವಾಗಿದೆ. ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸುತ್ತಿದ್ದು ೫೦ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳ ಒಳಗೆ ದೇವಾಲಯವನ್ನು ಅಭಿವೃದ್ಧಿಪಡಿಸಿ ಭಕ್ತರ ನೆರವಿನಿಂದ ನಿರ್ಮಿಸಿ ಲೋಕಾರ್ಪಣೆಗೊಳಿಸಲು ಭರದ ಸಿದ್ಧತೆಯು ನಡೆಯುತ್ತಿದೆ. ಸರ್ಕಾರವು ಜಮೀನು ನೀಡಿದರೆ ಬೃಹತ್ ಗೋಶಾಲೆ ಮತ್ತು ಗ್ರಾಮೀಣ ಬಡಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾದ ಅಂತರಾಷ್ಟ್ರೀಯ ಗುಣಮಟ್ಟದ ಪಬ್ಲಿಕ್ ಶಾಲೆಯನ್ನು ನಿರ್ಮಿಸುವ ಆಲೋಚನೆ ಹೊಂದಲಾಗಿದೆ. ಕೊರೋನಾ ಮಹಾಮಾರಿಯ ಸಂಕಷ್ಠವು ದೂರಾಗಲಿ, ಆರೋಗ್ಯವಂತ ಸಮಾಜವು ನಿರ್ಮಾಣವಾಗಲಿ ಎಂದು ದುಷ್ಠಸಂಹಾರಕ, ಪೀಡನಾಶಕನಾದ ಭಗವಂತ ಭೂವರಹನಾಥಸ್ವಾಮಿಗೆ ಸಂಕಲ್ಪಮಾಡಿ ಪ್ರಾರ್ಥಿಸಲಾಗಿದೆ.

  ದಿನವಹಿ ಲಕ್ಷಾಂತರ ಭಕ್ತರು ಬಂದು-ಹೋಗುವ ಪವಿತ್ರ ತೀರ್ಥಕ್ಷೇತ್ರವನ್ನಾಗಿ ಭೂವರಹನಾಥ ಕ್ಷೇತ್ರ ರನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಪರಕಾಲ ಶ್ರೀಗಳು ಹೇಳಿದರು.ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸರಾಘವನ್, ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಗಂಜಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಅಶ್ವಿನಿಕೃಷ್ಣ, ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾಬೋರೇಗೌಡ, ಉದ್ಯಮಿ ಬೂಕಹಳ್ಳಿ ಮಂಜು, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಶ್ರೀರಂಗಪಟ್ಟಣ ಸಂತೋಷ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಾ.ಅಂಚಿ.ಸಣ್ಣಸ್ವಾಮಿಗೌಡ, ಸಾಂಸ್ಕೃತಿಕ ಸಂಘಟಕ, ವೇದಬ್ರಹ್ಮ ಶ್ರೀ.ಗೋಪಾಲಕೃಷ್ಣ ಅವಧಾನಿ, ಪಿಡಿಓ ರವಿಕುಮಾರ್,  ಸೇರಿದಂತೆ ಹಲವು ಗಣ್ಯರು  ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸರಾಘವನ್ ಅವರು ಮಾತನಾಡಿ ಭೂ ವರಹನಾಥಸ್ವಾಮಿ ಕ್ಷೇತ್ರದಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ದೇವಸ್ಥಾನಕ್ಕೆ ಸೀಮಿತವಾಗಿ ಭಗವಂತ ಭೂವರಹನಾಥಸ್ವಾಮಿಗೆ ಪೂಜೆ-ಪುರಸ್ಕಾರಗಳು ನಡೆಯುತ್ತಿವೆ. ಕಳೆದ ೩ ತಿಂಗಳಿನಿಂದ ರಾಜ್ಯ ಸರ್ಕಾರದ ಆದೇಶದಂತೆ ದೇವಾಲಯದ ಬಾಗಿಲು ಮುಚ್ಚಿದ್ದು ಜುಲೈ-೫ರ ನಂತರ ಸರ್ಕಾರವು ನೀಡುವ ಆದೇಶದಂತೆ ದೇವಾಲಯದ ಬಾಗಿಲು ತೆರೆದು ಎಂದಿನಂತೆ ಪೂಜಾ ವಿಧಿವಿಧಾನಗಳನ್ನು ನಡೆಸಿ ಭಕ್ತರ ದರ್ಶನಕ್ಕೆ ಹಾಗೂ ಉಚಿತ ದಾಸೋಹಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

  ವರದಿ - ಸುನೀಲ್ ಗೌಡ
  Published by:HR Ramesh
  First published: