ಸ್ಪರ್ಶ್ ಆಸ್ಪತ್ರೆಯಲ್ಲಿ ಹೆಚ್ಚಿನ ಬಿಲ್ ವಸೂಲಿಯ ಆರೋಪ; ರೋಗಿಗಳ ಸಂಬಂಧಿಕರಿಂದ ಪ್ರತಿಭಟನೆ

ಹಾಸನದ ಪ್ರತಿಷ್ಠಿತ ಸ್ಪರ್ಶ್ ಖಾಸಗಿ ಆಸ್ಪತ್ರೆ ಈಗ ವಿವಾದಕ್ಕೆ ಸಿಲುಕಿದೆ. ಹೆಚ್ಚಿನ ಬಿಲ್ ಹಾಕಿ ವಂಚಿಸುತ್ತಿದ್ದಾರೆಂದು ಆರೋಪಿಸಿ ಕೆಲ ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆರೋಗ್ಯಾಧಿಕಾರಿಗಳ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತುಸು ತಿಳಿಯಾಗಿದೆ.

news18-kannada
Updated:July 13, 2020, 6:59 AM IST
ಸ್ಪರ್ಶ್ ಆಸ್ಪತ್ರೆಯಲ್ಲಿ ಹೆಚ್ಚಿನ ಬಿಲ್ ವಸೂಲಿಯ ಆರೋಪ; ರೋಗಿಗಳ ಸಂಬಂಧಿಕರಿಂದ ಪ್ರತಿಭಟನೆ
ಹಾಸನದ ಸ್ಪರ್ಶ್ ಆಸ್ಪತ್ರೆ ಎದುರು ರೋಗಿಗಳ ಸಂಬಂಧಿಕರಿಂದ ಪ್ರತಿಭಟನೆ
  • Share this:
ಹಾಸನ: ಪ್ರತಿ ರೋಗಿಯಿಂದ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಇಲ್ಲಸಲ್ಲದ ಬಿಲ್ ಹಾಕಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ರೋಗಿಯೊಬ್ಬರ ಸಂಬಂಧಿಕರು ಹಾಸನದ ಸ್ಪರ್ಶ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಬೆಳವಣಿಗೆ ಇವತ್ತು ನಡೆಯಿತು.

​ನಗರದ ಸ್ಪರ್ಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಒಂದು ಬಿಲ್ ಹೇಳಿ ನಂತರ ದುಪ್ಪಟು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ವೈದ್ಯರ ಸೇವಾ ಶುಲ್ಕದಲ್ಲೂ ಕೂಡ ವ್ಯತ್ಯಾಸ ಮಾಡಿ ಹೆಚ್ಚಿನ ಬಿಲ್ ಮಾಡಲಾಗಿದೆ. ಏನಾದರೂ ಪ್ರಶ್ನೆ ಮಾಡಲು ಹೋದರೆ ಏಕ ವಚನದಲ್ಲಿ ಮಾತನಾಡಿಸುತ್ತಾರೆ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಅವರ ಗಮನಕ್ಕೆ ತಂದ ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಆಸ್ಪತ್ರೆಯಲ್ಲಿರುವ ರೋಗಿ ಬಗ್ಗೆ ಮತ್ತು ಆಸ್ಪತ್ರೆಯು ನೀಡಿರುವ ಬಿಲ್ ಅನ್ನು ಪರಿಶೀಲಿಸಿ ಆಸ್ಪತ್ರೆಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ನಂತರ ಅಲ್ಲಿನ ವೈದ್ಯರು ಬಿಲ್ ಕಡಿಮೆ ಮಾಡುವ ಬಗ್ಗೆ ಭರವಸೆ ನೀಡಿದ ಹಿನ್ನಲೆಯಲ್ಲಿ ರೋಗಿ ಸಂಬಂಧಿಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ಧಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಕೋವಿಡ್​ಗೆ ಮತ್ತೊಂದು ಬಲಿ; ಕೊರೋನಾ ಗೆದ್ದ 4 ವರ್ಷದ ಬಾಲೆ

ದೊಡ್ಡಗೇಣಿಗೆರೆ ನಿವಾಸಿ ಹಾಗೂ ರೋಗಿಯ ಸಹೋದರ ಯೋಗೇಶ್ ಮಾಧ್ಯಮಕ್ಕೆ ಹೇಳಿದ್ದು ಇಷ್ಟು: “ನಮ್ಮ ಅಣ್ಣ ವೇಣುಕುಮಾರ್ ಎಂಬುವರು ತಲೆನೋವು ಇದೆ ಎಂದು 2020 ಜೂನ್ 14ರಂದು ಸ್ಪರ್ಶ್ ಆಸ್ಪತ್ರೆಗೆ ದಾಖಲಾದರು. ನಂತರದಲ್ಲಿ ಐಸಿಯುಗೆ ಇಡಲಾಯಿತು. ವೈದ್ಯರು ಬಂದು ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸಿದರು. ಸಮಸ್ಯೆಯನ್ನು ಕೇವಲ ಇಂಜೆಕ್ಷನ್ ಮತ್ತು ಮಾತ್ರೆಯಿಂದ ಗುಣಪಡಿಸುವುದಾಗಿ ಹೇಳಲಾಯಿತು. ನಂತರದಲ್ಲಿ ಶಸ್ತ್ರ ಚಿಕಿತ್ಸೆಯನ್ನು ತುರ್ತಾಗಿ ಮಾಡಬೇಕು. ಇಲ್ಲವಾದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೆದರಿಸಲಾಯಿತು. ಬೇರೆ ದಾರಿ ತಿಳಿಯದೇ ಹೆದರಿ ಶಸ್ತ್ರ ಚಕಿತ್ಸೆಗೆ ಒಪ್ಪಲಾಯಿತು. ಚಿಕಿತ್ಸೆಗೆ 85,000 ರೂಗಳನ್ನು ಪಾವತಿ ಮಾಡಲು ಸೂಚಿಸಿದರು. ಗುಣಮುಖರಾದ ಮೇಲೆ 90,000 ರೂ ಪಾವತಿ ಮಾಡಲು ಹಿಂಸೆ ಕೊಡುತ್ತಿದ್ದಾರೆ. ವೈದ್ಯರ ಸೇವೆಗೆ ಮೊದಲು 3 ಸಾವಿರ ರೂಗಳೆಂದು ಹೇಳಿ, ಕೊನೆಗೆ 4 ಸಾವಿರ ರೂಗಳ ಬಿಲ್ ಹಾಕಲಾಗಿದೆ. ಇದು ಮೊದಲ ಹಂತವಾದರೆ, ಉಳಿದ ದಿವಸಕ್ಕೆ ಅಂದಾಜು ವೆಚ್ಚ, ಔಷಧಿ ವೆಚ್ಚ ಸೇರಿ 4-5 ಲಕ್ಷ ರೂಗಳನ್ನ ಕೊಟ್ಟರೆ ರೋಗಿ ಗುಣಮುಖರಾಗುವುದಾಗಿ ಹೇಳಲಾಗಿದೆ. ರೋಗಿಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುವಾಗ 8.50 ಲಕ್ಷ ರೂ ಬಿಲ್ ಹಾಕಿ, ಹಣ ಕೊಡುವಂತೆ ಬೆದರಿಸಿ ಧಮಕಿ ಹಾಕಲಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.​ ​ ​ ​

ಮತ್ತೋರ್ವ ರೋಗಿ ಎಸ್.ಬಿ. ರಮೇಶ್ ಎಂಬುವರ ಮಗಳು ರಶ್ಮಿ ಅವರು ಕೂಡ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ಧಾರೆ. “2020 ಜೂನ್ 13 ರಂದು ನನ್ನ ತಂದೆಯನ್ನು ತುರ್ತು ಚಿಕಿತ್ಸೆಗೆಂದು ಸ್ಪರ್ಶಾ ಆಸ್ಪತ್ರೆಗೆ ಸೇರಿಸಲಾಯಿತು. ಹಣ ಕಟ್ಟಿದರೂ ರೋಗಿಯ ಚೇತರಿಕೆ ಕಂಡು ಬಂದಿಲ್ಲ. ಅವರಿನ್ನೂ ಕೋಮದಲ್ಲಿದ್ದಾರೆ. ಕೇಳಿದರೆ ವಿಮೆ ಇದೆ ಎಂದು ಹೇಳಿ ನಂತರ ವಿಮೆ ಇರುವುದಿಲ್ಲ ಎಂದಿದ್ದಾರೆ. ನಮ್ಮ ಕುಟುಂಬಕ್ಕೆ ಅವರೇ ಆಧಾರ. ನನ್ನ ಅಣ್ಣ ಅಂಗವಿಕಲನಾಗಿದ್ದು, ತಂದೆಗೆ ಏನಾದರೂ ಆದರೇ ಸ್ಪರ್ಶ್ ಆಸ್ಪತ್ರೆಯ ಆಡಳಿತ ಮಂಡಳಿಯವರೇ ಹೊಣೆ. ಮನೆಯಲಿ ಇದ್ದ ಒಡವೆ ಎಲ್ಲಾ ಮಾರಿ ಇಲ್ಲಿವರೆಗೆ ಹಣ ಕಟ್ಟಲಾಗಿದೆ. ರೋಗಿಯನ್ನು ಡಿಸ್ಚಾರ್ಜ್ ಮಾಡಿ ಎಂದರು. ಬಾಕಿ ಹಣ 2.30 ಲಕ್ಷ ರೂ ಕಟ್ಟಲು ಪೀಡಿಸುತ್ತಿದ್ದಾರೆ. ನಮ್ಮ ಬಳಿ ಹಣ ಇಲ್ಲ, ನನ್ನ ತಾಯಿ ಲತಾ ರಮೇಶ್ ಕೂಡ ಏನು ತೋಚದೆ ಪ್ರತಿನಿತ್ಯ ಸಂಕಟ ಪಡುವಂತಾಗಿದೆ” ಎಂದು ರಶ್ಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಸಿಂಧನೂರಿನ ಐವರ ಬರ್ಬರ ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

​ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮಾತನಾಡಿ, “ಹುಷಾರಿಲ್ಲ ಎಂದು ಸ್ಪರ್ಶ್ ಆಸ್ಪತ್ರೆಗೆ ಸೇರಿಸಲಾಗಿದ್ದು ಆಪರೇಷನ್ ಕೂಡ ಮಾಡಲಾಗಿದೆ. ಈ ವೇಳೆ ಬಿಲ್ ಹೆಚ್ಚಿಗೆ ಹಾಕಲಾಗಿದೆ ಎಂದು ನನಗೆ ದೂರು ಬಂದಿದೆ. ಈಗಾಗಲೇ ಇಲ್ಲಿನ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತನಾಡಿದ್ದೇನೆ. ಬಿಲ್ ಹೆಚ್ಚಿಗೆ ಹಾಕಲಾಗಿದೆ ಎಂದು ಇಲ್ಲಿ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಆಡಳಿತ ಮಂಡಳಿಯವರು ಬಿಲ್ ಸರಿಪಡಿಸಿ ರೋಗಿಯನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ರೋಗಿಗಳ ಸಂಬಂಧಿಕರು ದೂರು ಏನು ನೀಡಿದ್ದಾರೆ, ಅದಕ್ಕೆ ನಾವುಗಳು ಕಾನೂನಾತ್ಮಕವಾಗಿ ಮುಂದಿನ ಕ್ರಮಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.

​ವರದಿ: ಡಿಎಂಜಿ ಹಳ್ಳಿ ಅಶೋಕ್
Published by: Vijayasarthy SN
First published: July 13, 2020, 6:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading