HOME » NEWS » District » SOWING WORK IS ON GOING AT DHARAWAD AFTER MONSOON RAIN LG

ಧಾರವಾಡ ಜಿಲ್ಲೆಯಲ್ಲಿ ಬಿರುಸಿನಿಂದ ಸಾಗಿದ ಬಿತ್ತನೆ ಕಾರ್ಯ; ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ

ಸೂಕ್ತ ಮುಂದಾಲೋಚನೆಯಿಂದ ಬೀಜ ಸಂಗ್ರಹಿಸಿದ್ದಕ್ಕೆ ಉತ್ತಮ ಪ್ರತಿಫಲ ಪಡೆಯುತ್ತಿದ್ದಾರೆ. ಬೀಜ ಸಂಗ್ರಹಿಸಿ ಇಟ್ಟುಕೊಳ್ಳದೆ ಮಾರುಕಟ್ಟೆಯ ಮೇಲೆ ಅವಲಂಬನೆ ಆದವರ ಜೇಬಿಗೆ ಕತ್ತರಿ ಬೀಳುತ್ತಿದೆ.  ಕಳೆದ ವರ್ಷ ಹೆಸರು ಮತ್ತು ಶೇಂಗಾ ಚೆನ್ನಾಗಿ ಬೆಳೆದಿರಲಿಲ್ಲ. ಅತಿಯಾದ ಮಳೆಯಿಂದ ಉಳ್ಳಾಗಡ್ಡಿ ಬೀಜ ಸಂಗ್ರಹಣೆ ಮಾಡಲು ಕಷ್ಟವಾಗಿತ್ತು.

news18-kannada
Updated:June 9, 2020, 7:59 AM IST
ಧಾರವಾಡ ಜಿಲ್ಲೆಯಲ್ಲಿ ಬಿರುಸಿನಿಂದ ಸಾಗಿದ ಬಿತ್ತನೆ ಕಾರ್ಯ; ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ
ಸಾಂದರ್ಭಿಕ ಚಿತ್ರ
  • Share this:
ಧಾರವಾಡ(ಜೂ.09): ಧಾರವಾಡ ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ಹುಬ್ಬಳ್ಳಿ, ಧಾರವಾಡ, ನವಲಗುಂದ, ಕುಂದಗೋಳ, ಅಳ್ನಾವರ, ಅಣ್ಣಿಗೇರಿ ತಾಲೂಕಿನಲ್ಲಿ ಹೆಸರು, ಈರುಳ್ಳಿ ಮತ್ತು ಶೇಂಗಾ ಬಿತ್ತನೆಗೆ ಉತ್ತಮ ವಾತಾವರಣವಿದೆ. ಹೀಗಾಗಿ ಹೆಸರು ಬೀಜಕ್ಕೆ ಭಾರೀ ಬೇಡಿಕೆ ಬಂದಿದೆ.

ಕಳೆದ ಎರಡು ತಿಂಗಳ ಹಿಂದಷ್ಟೇ ಕ್ವಿಂಟಾಲ್‌ಗೆ 5600 ರೂಪಾಯಿ ಇದ್ದ ಹೆಸರು ಬೀಜದ ಬೆಲೆ ಇದೀಗ 17 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ದೇಶಿ ಬೀಜಗಳು ಕಂಪನಿ ಬೀಜಗಳ ಬೆಲೆಗಿಂತ ದುಪ್ಪಟ್ಟು ದರದಲ್ಲಿ ಮಾರಾಟವಾಗುತ್ತಿವೆ. ಮುಂಗಾರು ಪೂರ್ವ ಮಳೆ ಇಳೆಯನ್ನು ತಂಪಾಗಿಸಿದೆ. ನಿಸರ್ಗ ಚಂಡ ಮಾರುತದ ಪರಿಣಾ‌ಮ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಹೊಲವನ್ನು ಹದಗೊಳಿಸಿದ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಬಿತ್ತನೆ ಕೆಲಸ ಜೋರಾಗಿ ನಡೆಯುತ್ತಿದ್ದು, ಬಿತ್ತನೆ ಬೀಜಗಳಿಗೆ ಭಾರೀ ಬೇಡಿಕೆ ಬಂದಿದೆ. ಬಿತ್ತನೆ ಬೀಜಗಳಿಗೆ ಮಾರುಕಟ್ಟೆಯನ್ನು ಅವಲಂಬಿಸಿರುವ ರೈತರು ಬೀಜದ ಲಭ್ಯತೆಯ ಕೊರತೆಯಿಂದ ಕಂಗಾಲಾಗಿದ್ದಾರೆ.

ಸದ್ಯಕ್ಕೆ ಬಿತ್ತನೆ ಬೀಜದಲ್ಲಿ ಈರುಳ್ಳಿ ಬೀಜಕ್ಕೆ ಅತೀ ಹೆಚ್ಚು ಬೇಡಿಕೆಯಿದೆ. ಸಹಜವಾಗಿ ಬೇಡಿಕೆ ಹೆಚ್ಚಾದಂತೆ ಈರುಳ್ಳಿ ಬೀಜದ ಬೆಲೆಯೂ ಗಗನಕ್ಕೇರಿದೆ. ಹೆಚ್ಚಿನ ದರಕ್ಕೆ ಈರುಳ್ಳಿ ಬೀಜಗಳು ಮಾರಾಟವಾಗುತ್ತಿವೆ. ಕಳೆದ ವರ್ಷ ವಿಪರೀತ ಮಳೆಯಿಂದಾಗಿ ಈರುಳ್ಳಿ ಬೆಳೆ ಸಮರ್ಪಕವಾಗಿ ಬಂದಿಲ್ಲ. ಈರುಳ್ಳಿಯ ಇಳುವರಿ ತೀವ್ರವಾಗಿ ಕುಸಿದಿತ್ತು. ಹೀಗಾಗಿ ಬೀಜ ಸಂಗ್ರಹಣೆ ಸಾಕಷ್ಟು ಪ್ರಮಾಣದಲ್ಲಿ ಮಾಡಲು ರೈತರಿಗೆ ಸಾಧ್ಯವಾಗಿಲ್ಲ. ಬೀಜ ಕೊರತೆಯಿಂದ ಈರುಳ್ಳಿ ಬಿತ್ತುವ ರೈತರಿಗೆ ಸಂಕಷ್ಟ ಎದುರಾಗಿದೆ. ಕ್ವಿಂಟಾಲ್‌ ಬೀಜ ಸಂಗ್ರಹಿಸುತ್ತಿದ್ದ ರೈತನಿಗೆ 30 ಕೆಜಿ ಸಂಗ್ರಹಿಸಲೂ ಸಾಧ್ಯವಾಗಿಲ್ಲ. ಶೇಕಡಾ 30 ರಷ್ಟು ಈರುಳ್ಳಿ ಬೀಜ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದ್ದು, ಕೊರತೆಯ ಪ್ರಮಾಣ ಶೇಕಡಾ 70 ರಷ್ಟಾಗಿದೆ. ಇದೇ ಕಾರಣಕ್ಕೆ ಈರುಳ್ಳಿ ಬೀಜದ ಬೆಲೆ ವಿಪರೀತ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಒಂದು ಕೆಜಿ ಗುಣಮಟ್ಟದ ಈರುಳ್ಳಿ ಬೀಜಕ್ಕೆ 2200 ರೂಪಾಯಿ ಬೆಲೆ ಆಗಿದೆ. ಕೆಲವು ಕಂಪನಿಗಳು ಕಡಿಮೆ ದರದಲ್ಲಿ ಬೀಜ ಮಾರಾಟ ಮಾಡುತ್ತಿವೆ. ಕೆಲವೆಡೆ ಈರುಳ್ಳಿ ಬೀಜದ ಬೆಲೆ 1400 ರೂಪಾಯಿ ಇದೆ‌. ಆದರೆ ಕಳಪೆ ಬೀಜದ ಆತಂಕದಿಂದ ಇವುಗಳನ್ನು ಬಿತ್ತಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ದೇವಾಲಯದ ಬಾಗಿಲು ತೆರೆದರೂ ಭಕ್ತರಿಲ್ಲದೆ ಭಣಗುಡುತ್ತಿವೆ ಮಂಡ್ಯದ ದೇಗುಲಗಳು!

ಧಾರವಾಡ ಜಿಲ್ಲೆಯಲ್ಲಿ ಹೆಸರು ಬೀಜವನ್ನು ಸುಮಾರು 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತಲಾಗಿದೆ. ಇನ್ನೂ ಹೆಸರು ಬಿತ್ತನೆ ಮುಂದುವರಿದಿದೆ. ಐದು ಕೆಜಿ ಹೆಸರು ಬೀಜದ ಚೀಲಕ್ಕೆ 363 ರೂಪಾಯಿ ಇದೆ. ರೈತರು ಸಂಗ್ರಹಿಸಿ ಮಾರುತ್ತಿರುವ ಹೆಸರು ಬೀಜ 10 ಕೆಜಿ ಚೀಲಕ್ಕೆ 1200 ರೂಪಾಯಿ ಇದೆ. ಇನ್ನು ಗೋವಿನ ಜೋಳಕ್ಕೆ ಸರ್ಕಾರಿ ಬೆಲೆ 5 ಕೆಜಿ ಪ್ಯಾಕೆಟ್‌ಗೆ 650 ರೂಪಾಯಿ ಇದ್ದು ಖಾಸಗಿ ಕಂಪನಿಗಳಲ್ಲಿ 1200 ರೂಪಾಯಿ ವರೆಗೆ ಲಭ್ಯವಿದೆ. ಗ್ರಾಮೀಣ ಜನರು ಸಂಗ್ರಹಿಸಿರುವ ಬೀಜವನ್ನು ಹತ್ತು ಕೆಜಿಗೆ 1500 ರೂಪಾಯಿಗೆ ಮಾರಲಾಗುತ್ತಿದೆ.

ಧಾರವಾಡ, ಕಲಘಟಗಿ, ಅಳ್ನಾವರದಲ್ಲಿ ದೇಶಿ ಭತ್ತ ಬಿತ್ತನೆ ಮಾಡಲಾಗಿದೆ. ಈಗಾಗಲೇ ಭತ್ತ ಚೆನ್ನಾಗಿ ಹುಟ್ಟಿದೆ. ವರುಣನ ಕೃಪೆಯಿಂದ ಭೂಮಿ ತೇವಾಂಶದಿಂದ ಕೂಡಿದೆ. ರೈತರು ಸೋಯಾ, ಅವರೆ ಬಿತ್ತನೆಗೆ ಒತ್ತು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ಅಂದಾಜು 25 ಸಾವಿರ ಹೆಕ್ಟೇರ್‌ ಸೋಯಾ ಬಿತ್ತನೆಯಾಗುವ ನಿರೀಕ್ಷೆ ಇದೆ. ಬರಗಾಲವಿದ್ದಾಗ ಸಂಪೂರ್ಣ ಸೋಯಾ, ಅವರೆಯತ್ತ ವಾಲಿದ್ದ ಅರೆಮಲೆನಾಡಿನ ಕೃಷಿಕರು ಮಳೆಯ ಭರವಸೆಯಿಂದ ಭತ್ತ ಬಿತ್ತನೆಗೆ ಒತ್ತು ನೀಡುತ್ತಿದ್ದಾರೆ‌. ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದ ರೈತ ಕುಟುಂಬಗಳು ಇಂದಿಗೂ ಬೀಜ ಸಂಗ್ರಹಣೆಯನ್ನು ಮಾಡುತ್ತಿವೆ. ಸ್ವಂತ ಜಮೀನಿನಲ್ಲೇ ಬೀಜ ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿವೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಿಸಲು ಕೂಡ ಸಂಪ್ರದಾಯಿಕ ರೈತರಿಗೆ ಸಹಕಾರಿ ಆಗುತ್ತಿದೆ.ಜಿಲ್ಲೆಯಲ್ಲಿ ಅಂದಾಜು 55 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದೇಶಿ ಮತ್ತು ಸಾವಯವ ಬೀಜಗಳು ಬಿತ್ತನೆಯಾಗುವ ನಿರೀಕ್ಷೆ ಇದೆ. ಯಾವೆಲ್ಲಾ ರೈತರು ಬೀಜ ಸಂಗ್ರಹಿಸಿದ್ದಾರೋ ಅಂತಹ ರೈತರಿಗೆ ಈ ವರ್ಷ ಲಾಟರಿ ಹೊಡೆದಂತೆ ಆಗಿದೆ. ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,41,589 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಆಗುತ್ತಿದೆ. ಭತ್ತ, ಹೆಸರು, ಹತ್ತಿ, ಮೆಕ್ಕೆಜೋಳ, ಸೋಯಾ ಸೇರಿದಂತೆ ಒಟ್ಟು 1300 ಕ್ವಿಂಟಲ್‌ನಷ್ಟು ವಿವಿಧ ಬೀಜಗಳು ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ವಿತರಣೆಯಾಗಿವೆ. ಕೆಲವು ರೈತರು ಕಷ್ಟಪಟ್ಟು ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಅವರೀಗ ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ.

ಸೂಕ್ತ ಮುಂದಾಲೋಚನೆಯಿಂದ ಬೀಜ ಸಂಗ್ರಹಿಸಿದ್ದಕ್ಕೆ ಉತ್ತಮ ಪ್ರತಿಫಲ ಪಡೆಯುತ್ತಿದ್ದಾರೆ. ಬೀಜ ಸಂಗ್ರಹಿಸಿ ಇಟ್ಟುಕೊಳ್ಳದೆ ಮಾರುಕಟ್ಟೆಯ ಮೇಲೆ ಅವಲಂಬನೆ ಆದವರ ಜೇಬಿಗೆ ಕತ್ತರಿ ಬೀಳುತ್ತಿದೆ.  ಕಳೆದ ವರ್ಷ ಹೆಸರು ಮತ್ತು ಶೇಂಗಾ ಚೆನ್ನಾಗಿ ಬೆಳೆದಿರಲಿಲ್ಲ. ಅತಿಯಾದ ಮಳೆಯಿಂದ ಉಳ್ಳಾಗಡ್ಡಿ ಬೀಜ ಸಂಗ್ರಹಣೆ ಮಾಡಲು ಕಷ್ಟವಾಗಿತ್ತು. ಹೀಗಾಗಿ ಬಿತ್ತನೆ ಬೀಜಗಳ ತೀವ್ರ ಅಭಾವ ಕಂಡುಬರುತ್ತಿದೆ. ಬಹುತೇಕ ರೈತರು ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕಿದೆ. ಹೀಗಾಗಿ ಬಿತ್ತನೆ ಬೀಜಗಳ ಬೆಲೆ ಗಗನಕ್ಕೇರಿದೆ. ರೈತರು ಮುಂಜಾಗ್ರತೆ ವಹಿಸಬೇಕು. ಗುಣಮಟ್ಟದ ಬೀಜಗಳನ್ನು ಸಂಗ್ರಹಿಸಬೇಕು. ಅಂದಾಗ ಮಾತ್ರ ಕೃಷಿ ಲಾಭದಾಯಕ ಆಗಬಲ್ಲದು ಅಂತಾರೆ ಬಲ್ಲವರು.
Youtube Video
First published: June 9, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories