ದಕ್ಷಿಣ ಕಾಶ್ಮೀರದಲ್ಲೂ ಮೈ ಸುಡುವ ಬಿಸಿಲು; ಸೂರ್ಯನ ತಾಪಕ್ಕೆ ಬಸವಳಿದ ಕೊಡಗು ಜನ

ಫ್ಯಾನ್, ಎಸಿಯನ್ನೇ ನೋಡಿರದ ಮಡಿಕೇರಿ ಮಂದಿ ಅದಿಲ್ಲದೇ ಬದುಕೋಕಾಗಲ್ಲ ಅನ್ನುವಂತಾಗಿದೆ. ಜನ ಛತ್ರಿ ಇಲ್ಲದೆ ಮನೆಯಿಂದ ಹೊರಗೆ ಬರೋದೇ ಕಷ್ಟ ಎನ್ನುತ್ತಾರೆ ಸ್ಥಳೀಯರಾದ ಬೇಬಿ ಮ್ಯಾಥ್ಯು. ಆದರೆ ಸದ್ಯ ಮುಂದಿನ ಐದು ದಿನಗಳವರೆಗೆ ಜಿಲ್ಲೆಯಲ್ಲಿ ತಂಪಾದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ ಬಿರುಬಿಸಿಲು ಹೇಗಿರುತ್ತದೆ ನೋಡಬೇಕು.

ಕೊಡಗು

ಕೊಡಗು

  • Share this:
ಕೊಡಗು: ಅಪಾರವಾದ ಕಾನನದ ರಾಶಿ, ಬೆಟ್ಟ- ಗುಡ್ಡಗಳಿಂದ ಕೂಡಿರುವ ವಾತಾವರಣ. ಇವೆಲ್ಲವುಗಳಿಂದಲೂ ಸಾಕಷ್ಟು ತಣ್ಣನೆಯ ವಾತಾವರಣ ಹೊಂದಿರುವ ಕೊಡಗು ಜಿಲ್ಲೆಯನ್ನು ದಕ್ಷಿಣದ ಕಾಶ್ಮೀರ, ಕರ್ನಾಟಕದ ಸ್ಕಾಟ್ ಸ್ಯಾಂಡ್ ಎಂದೆಲ್ಲಾ ಕರೆಯುತ್ತಾರೆ. ಬೇಸಿಗೆ ಸಮಯದಲ್ಲಿ ತಣ್ಣನೆಯ ವಾತಾವರಣದ ಕೊಡಗಿನಲ್ಲಿ ಒಮ್ಮೆ ಸುತ್ತಾಡಿ ಬರೋಣ ಎಂದು ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಾರೆ. ಆದರೆ ಈ ಬಾರಿ ಕೊಡಗಿನಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲ ಧಗೆ ಮಿತಿಮೀರಿದೆ. ಬೆಳಿಗ್ಗೆ ಆರೂವರೆ ಗಂಟೆಗೆ ಆರಂಭವಾಗುವ ಬಿಸಿಲು ಮಧ್ಯಾಹ್ನ ಹನ್ನೆರಡು ಗಂಟೆ ಎನ್ನುವಷ್ಟರಲ್ಲಿ ಮರಳುಗಾಡಿನಲ್ಲಿದ್ದೇವಾ ಎನ್ನೋ ಅನುಭವ ನೀಡುವಂತಹ ಬಿಸಿಲು ಹೊಡೆಯುತ್ತಿದೆ.

ಕೆಲವು ಕಡೆ ಬೆಳಿಗ್ಗೆ ಬೆಳಿಗ್ಗೆ ಹಾಗೂ ಸಂಜೆ ಹಿಮ ಸುರಿಯುವ ವಾತಾವರಣವಿದ್ದರೂ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಬಿಸಿಲ ಧಗೆ ಶುರುವಾಗಿ ಬಿಡುತ್ತಿದೆ. ಸಮುದ್ರ ಮಟ್ಟದಿಂದ ತುಂಬಾ ಎತ್ತರದಲ್ಲಿದ್ದು ಸೂರ್ಯ ತನ್ನ ಚುರುಕು ಮುಟ್ಟಿಸಿದ್ದಾನೆ. ಜಿಲ್ಲೆಯ ಎಲ್ಲೆಡೆ ಕಳೆದ ವರ್ಷಕ್ಕಿಂತ ಈ ಬಾರಿ ತಾಪಮಾನ ಅತೀ ಹೆಚ್ಚು ಏರಿಕೆಯಾಗಿದೆ. ಜಾಗತಿಕ ತಾಪಮಾನದಿಂದ ಎಲ್ಲಿಗೆ ಎಷ್ಟು ಪರಿಣಾಮ ಬೀರಿದೆಯೋ ಗೊತ್ತಿಲ್ಲ. ಆದರೆ ಕೊಡಗಿಗೆ ಮಾತ್ರ ಅದರ ಎಫೆಕ್ಟ್ ನೇರವಾಗಿ ಮುಟ್ಟಿದೆ. ನಿತ್ಯ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ನಿಂದ ಗರಿಷ್ಠ ಬರೋಬ್ಬರಿ 34 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾಪನ ದಾಖಲಾಗುತ್ತಿದೆ. ಕೊಡಗು ಜಿಲ್ಲೆಯ ಮಟ್ಟಿಗೆ ಇದು ಅತೀ ಹೆಚ್ಚು ತಾಪಮಾನವೇ ಸರಿ. ಮಧ್ಯಾಹ್ನ ನೆತ್ತಿ ಸುಡುವಂತಹ ಬಿಸಿಲಿನ ಅನುಭವ ಆಗುತ್ತಿದೆ. ಅಲ್ಲದೇ ಮೂರು ವರ್ಷದಿಂದ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಪ್ರಾಕೃತಿಕ ಸಮತೋಲನದಲ್ಲಿ ಏರುಪೇರುಗಳು ಅಗುತ್ತಿದ್ದು. ಈ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ ಇಲ್ಲಿಯ ಸ್ಥಳೀಯರಾದ ಮುನೀರ್ ಅಹ್ಮದ್.

ಇದನ್ನು ಓದಿ: ಜಮೀನಿಗಿಳಿದು‌ ನಾಟಿ ಮಾಡಿದ ತಹಸೀಲ್ದಾರ್; ಆಡಳಿತಕ್ಕೂ ಸೈ, ಕೃಷಿಗೂ ಜೈ ಎಂದ ಶ್ರೀರಂಗಪಟ್ಟಣದ ಮಹಿಳಾ ಅಧಿಕಾರಿ!

ಇನ್ನೂ ಕೆಲವು ದಿನಗಳ ಹಿಂದೆ ತಂಪೆರೆದಿದ್ದ ಮಳೆ ಭೂಮಿ ತಾಯಿಯ ತಾಪಮಾನವನ್ನು ಕೊಂಚಮಟ್ಟಿಗೆ ಕಡಿಮೆ ಮಾಡಿತ್ತು. ಆದರೆ ಅದು ಕಳೆದ ಹದಿನೈದು ದಿನಗಳಿಂದ ಮಳೆ ಇಲ್ಲ. ಬಿಸಿಲಿನ ತಾಪಮಾನ ತಡೆಯಲು ಕೆಲವರು ತಂಪುಪಾನೀಯಗಳ ಮೊರೆಹೋಗಿದ್ದಾರೆ. ಎಳನೀರು, ಕಲ್ಲಂಗಡಿ ಹಣ್ಣುಗಳಿಗೆ ಮೊರೆ ಹೋಗಿದ್ದಾರೆ. ಅಲ್ಲದೇ ಬದಲಾಗುತ್ತಿರುವ ಹವಾಮಾನದಿಂದಾಗಿ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಆಧುನಿಕ ಬದುಕಿನ ಪರಿಣಾಮದಿಂದಾಗಿ ಜಾಗತಿಕ ತಾಪಮಾನ ಏರಿಕೆಯ ಫಲ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಕೆಲವರ್ಷಗಳ ಹಿಂದೆ ಬೇಸಿಗೆಯಲ್ಲಿ ಮಡಿಕೇರಿಯ ತಾಪಮಾನ ಗರಿಷ್ಠ 17 ರಿಂದ 22 ಡಿಗ್ರಿ ಸೆಂಟಿಗ್ರೇಡ್ ರವರೆಗೆ ದಾಖಲಾಗುತ್ತಿತ್ತು. ಆದರೆ ಈಗ ಮಡಿಕೇರಿಯಲ್ಲಿ ಬರೋಬ್ಬರಿ ಕನಿಷ್ಠ 18 ಡಿಗ್ರಿಯಿಂದ ಗರಿಷ್ಠ 33 ಅಥವಾ 34 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ತಮ್ಮೂರಿನ ಬೇಸಿಗೆಯಲ್ಲಿ ಬೆಂದು ಸುಸ್ತಾಗಿ ಮಡಿಕೇರಿಯ ಪ್ರಕೃತಿ ಮಡಿಲಲ್ಲಿ ತಂಪಾಗಿ ವಿಹರಿಸೋಕೆ ಬರೋ ಪ್ರವಾಸಿಗರು ಪೆಚ್ಚು ಮೋರೆ ಹಾಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಫ್ಯಾನ್, ಎಸಿಯನ್ನೇ ನೋಡಿರದ ಮಡಿಕೇರಿ ಮಂದಿ ಅದಿಲ್ಲದೇ ಬದುಕೋಕಾಗಲ್ಲ ಅನ್ನುವಂತಾಗಿದೆ. ಜನ ಛತ್ರಿ ಇಲ್ಲದೆ ಮನೆಯಿಂದ ಹೊರಗೆ ಬರೋದೇ ಕಷ್ಟ ಎನ್ನುತ್ತಾರೆ ಸ್ಥಳೀಯರಾದ ಬೇಬಿ ಮ್ಯಾಥ್ಯು. ಆದರೆ ಸದ್ಯ ಮುಂದಿನ ಐದು ದಿನಗಳವರೆಗೆ ಜಿಲ್ಲೆಯಲ್ಲಿ ತಂಪಾದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ ಬಿರುಬಿಸಿಲು ಹೇಗಿರುತ್ತದೆ ನೋಡಬೇಕು.
Published by:HR Ramesh
First published: