• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Kolar Politics- ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರಾ ಶ್ರೀನಿವಾಸಗೌಡ, ಸಿಆರ್ ಮನೋಹರ್?

Kolar Politics- ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರಾ ಶ್ರೀನಿವಾಸಗೌಡ, ಸಿಆರ್ ಮನೋಹರ್?

ರಮೇಶ್ ಕುಮಾರ್ ಜೊತೆ ವೇದಿಕೆ ಹಂಚಿಕೊಂಡಿದ್ದ ಶ್ರೀನಿವಾಸಗೌಡ

ರಮೇಶ್ ಕುಮಾರ್ ಜೊತೆ ವೇದಿಕೆ ಹಂಚಿಕೊಂಡಿದ್ದ ಶ್ರೀನಿವಾಸಗೌಡ

ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹಾಗೂ ಸಿಆರ್ ಮನೋಹರ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಶ್ರೀನಿವಾಸಗೌಡ ಅವರು ರಮೇಶ್ ಕುಮಾರ್ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಹೊಗಳಿದ್ದರು.

  • Share this:

ಕೋಲಾರ: ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಮುನ್ಸೂಚನೆ ಸಿಕ್ಕಿದೆ. ಇತ್ತ ಎಮ್‍ಎಲ್‍ಸಿ ಸಿಆರ್ ಮನೋಹರ್ ಸಹ ಜೆಡಿಎಸ್‍ನಿಂದ ಅಂತರ ಕಾಯ್ದುಕೊಂಡಿದ್ದು, ವಿಧಾನಸಭೆ ಚುನಾವಣೆಗೂ ಮೊದಲೇ ಕೋಲಾರದಲ್ಲಿ ಜೆಡಿಎಸ್ ಪಕ್ಷಕ್ಕೆ ಆಘಾತ ಎದುರಾಗಿದೆ. ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶ್ರೀನಿವಾಸಗೌಡ ಪುತ್ರ ಮಂಜುನಾಥ್ ಅವರು ಕೋಲಾರ ತಾಲೂಕಿನ ಹೊಳೂರು ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾದ್ಯತೆಯಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಮೊನ್ನೆ ಕೋಲಾರದ ಹೊಳೂರು ಗ್ರಾಮದಲ್ಲಿ ರಮೇಶ್‍ಕುಮಾರ್ ಜೊತೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ರಾಜಕೀಯದಲ್ಲಿ ಇರೋವರೆಗೂ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮುಖಂಡರಿಗೆ ಕರೆ ನೀಡಿರುವ ವಿಡಿಯೋ ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ  ವಿಡಿಯೋದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಮೇಶ್‍ಕುಮಾರ್ ಅವರು ಕೋಲಾರದಲ್ಲಿ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಹಾಗಾದರೆ ರಮೇಶ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ದವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದರಾ ಎನ್ನುವ ಚರ್ಚೆಗಳು ಆರಂಭವಾಗಿವೆ.


ಇನ್ನು ಶ್ರೀನಿವಾಸಗೌಡ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀನಿವಾಸಪುರ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೆಂಕಟಶಿವಾರೆಡ್ಡಿ, ಶ್ರೀನಿವಾಸಗೌಡರ ವಿರುದ್ದ ಪಕ್ಷ ಕ್ರಮ ಕೈಗೊಳ್ಳುತ್ತೆ ಎಂದು ತಿಳಿಸಿದ್ದಾರೆ, ನಾನು ಯಾವುದಕ್ಕು ಅಂಜುವ ಮನುಷ್ಯನಲ್ಲ ಮುಂದೆ ಜನರೇ ನಮ್ಮ‌ ಪರವಾಗಿ ತೀರ್ಪು ನೀಡಿಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಶ್ರೀನಿವಾಸಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಶ್ರೀನಿವಾಸಗೌಡರು ಸಜ್ಜನ ರಾಜಕಾರಣಿಯಾಗಿದ್ದು ಅಂತಹವರು ಪಕ್ಷಕ್ಕೆ ಬಂದರೆ ಸ್ವಾಗತಿಸುವೆ. ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ವರ್ಚಸ್ಸು ಕುಸಿದಿದೆ ಎಂದಿದ್ದು, ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಹಾಲಿ ಬಿಜೆಪಿ, ಜೆಡಿಎಸ್ ಶಾಸಕರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆ ಎಂದು‌ ತಿಳಿಸಿದ್ದಾರೆ.


ಜೆಡಿಎಸ್​ಗೆ ಶ್ರೀನಿವಾಸಗೌಡ, ಸಿಆರ್ ಮನೋಹರ್ ಗುಡ್ ಬೈ ?


ಜೆಡಿಎಸ್​ನಿಂದ ಶಾಸಕರಾದರೂ ಕೋಲಾರ‌ ಶಾಸಕ ಶ್ರೀನಿವಾಸಗೌಡ ಹಾಗು ಪಕ್ಷದ ವರಿಷ್ಟರ ಮಧ್ಯೆಯ ಸಂಬಂದ ಅಷ್ಟಕ್ಕಷ್ಟೇ ಎಂಬಂತಿದೆ. ಶಾಸಕರು ಇರುವಾಗಲೇ ಈಗಾಗಲೇ ಮುಂದಿನ ಚುನಾವಣೆಯಲ್ಲಿ ಟೊಮೆಟೊ ಮಂಡಿ ಮಾಲೀಕ ಸಿಎಮ್ಆರ್ ಶ್ರೀನಾಥ್ ಎನ್ನುವರಿಗೆ ಜೆಡಿಎಸ್ ಟಿಕೆಟ್ ಪಕ್ಕಾ ಎಂದು‌ ಚರ್ಚೆಗಳು ನಡೆಯುತ್ತಿವೆ. ಇದೇ ಕಾರಣದಿಂದಲೇ ಶ್ರೀನಿವಾಸಗೌಡರು ಪಕ್ಷ ತ್ಯಜಿಸೊ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಇದರ ಮೊದಲ ಭಾಗವಾಗಿ ತಮ್ಮ ಮಗನಿಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸಲು ಎಲ್ಲಾ ಮಾತುಕತೆ ಮುಗಿದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಮತ ಪಡೆಯಲು ನಾವು, ಅಧಿಕಾರ ಬೇರೆಯವರಿಗಾ? ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಅಸಮಾಧಾನ


ಶಾಸಕ ಶ್ರೀನಿವಾಸಗೌಡ ಜೆಡಿಎಸ್ ತ್ಯಜಿಸಿದರೆ, ಕೋಲಾರ ಮತ್ತು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗುವ ಎಲ್ಲಾ ಸಾಧ್ಯತೆಯಿದೆ. ಇನ್ನು ಜೆಡಿಎಸ್ ಎಮ್‍ಎಲ್‍ಸಿ ಆಗಿರುವ ನಿರ್ಮಾಪಕ ಸಿಆರ್ ಮನೋಹರ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ. ಜೆಡಿಎಸ್‍ನಿಂದ ಸದ್ಯಕ್ಕೆ ದೂರವಿರುವ ಮನೋಹರ್, ಕಾಂಗ್ರೆಸ್ ಮುಖಂಡರೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಮನೋಹರ್, ನಾನು ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಆದರೆ ಮುಂದೆ ನೋಡೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ಶ್ರೀನಿವಾಸಗೌಡರ ವಿರುದ್ದ ಜೆಡಿಎಸ್ ಮುಖಂಡರ ಕಿಡಿ:


ಶ್ರೀನಿವಾಸಗೌಡರು ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿ ಇದೀಗ ಕಾಂಗ್ರೆಸ್‌ ಪಕ್ಷದ ಶಾಸಕ ರಮೇಶ್ ಕುಮಾರ್ ಪರವಾಗಿ ಹೇಳಿಕೆ ನೀಡಿದ್ದಕ್ಕೆ ಜೆಡಿಎಸ್ ಮುಖಂಡರ ಕಣ್ಣು ಕೆಂಪಾಗಿಸಿದೆ. ಕೋಲಾರ ನಗರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹೊಳೂರು ಜೆಡಿಎಸ್ ಮುಖಂಡರು, ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ. ರಾಜಕೀಯವಾಗಿ ಮುಂದುವರೆಯಲು ಪಕ್ಷದಿಂದ ಹೊರಕ್ಕೆ ಹೋಗಿ ಏನು ಬೇಕಾದರು ಮಾಡಿ ಎಂದು ಕಿಡಿಕಾರಿದ್ದಾರೆ.


ಒಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಶ್ರೀನಿವಾಸಗೌಡ ರಿಗೆ ಇದೆಯೆಂಬ ವಿಚಾರ ಸುಳ್ಳಲ್ಲ. ಆದರೆ ಕಳೆದ ಬಾರಿ ಕಾಂಗ್ರೆಸ್ ಟಿಕೆಟ್​ಗಾಗಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಬಳಿ ಹೋಗಿದ್ದರು. ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು, ಆದರೆ ಮತ್ತೆ ಜೆಡಿಎಸ್ ಪಕ್ಷವೇ ಶ್ರೀನಿವಾಸಗೌಡರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತು. ಆದರೀಗ ಮತ್ತೆ ಜೆಡಿಎಸ್​ಗೆ ಗುಡ್ ಬೈ ಹೇಳಲು ಶ್ರೀನಿವಾಸಗೌಡರು ತಯಾರಿ ನಡೆಸಿದ್ದು, ಜಿಲ್ಲೆಯ ಜೆಡಿಎಸ್ ಪಕ್ಷದ ನಾಯಕರು ಸದ್ಯ ಮೌನಕ್ಕೆ ಶರಣಾಗಿದ್ದಾರೆ.


ವರದಿ: ರಘುರಾಜ್

Published by:Vijayasarthy SN
First published: