ಯಾದಗಿರಿಯಲ್ಲಿ 92 ವರ್ಷದ ತಂದೆಗೆ ಕೋವಿಡ್ ಆಸ್ಪತ್ರೆಯಲ್ಲಿ ಮಗನಿಂದ ಆರೈಕೆ

ಹೆತ್ತವರ ಸೇವೆ ಎಷ್ಟೇ ಮಾಡಿದರೂ ಕಡಿಮೆ. ನನಗೆ ಭಗವಂತ ಅವರ ಸೇವೆ ಮಾಡಲು ಶಕ್ತಿ ಕೊಟ್ಟಿದ್ದಾನೆ. ನಾನು ಕೋವಿಡ್ ಮುಂಜಾಗ್ರತೆ ವಹಿಸಿ ಸೇವೆ ಮಾಡುತ್ತಿದ್ದೇನೆ ಎಂದು ಮಗ ಹೇಳುತ್ತಾರೆ.

news18-kannada
Updated:July 30, 2020, 8:13 AM IST
ಯಾದಗಿರಿಯಲ್ಲಿ 92 ವರ್ಷದ ತಂದೆಗೆ ಕೋವಿಡ್ ಆಸ್ಪತ್ರೆಯಲ್ಲಿ ಮಗನಿಂದ ಆರೈಕೆ
ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ತಂದೆ ಸೇವೆಯಲ್ಲಿ ನಿರತನಾಗಿರುವ ಮಗ
  • Share this:
ಯಾದಗಿರಿ: ಹೆತ್ತ ತಂದೆ ತಾಯಿಯ ಸೇವೆ ಎಷ್ಟೇ ಮಾಡಿದರೂ ಜನ್ಮದಾತರ ಋಣ ತೀರಿಸಲು ಸಾಧ್ಯವಿಲ್ಲ. ಹೆತ್ತವರೇ ದೇವರು ಎಂದು ಹಿರಿಯರು ಹೇಳುತ್ತಾರೆ.  ಆದರೆ ಇವತ್ತಿನ ದಿನಗಳಲ್ಲಿ ಹೆತ್ತವರಿಗೆ ವಯಸ್ಸಾಗುತ್ತಿದ್ದಂತೆಯೇ ಕಸದಂತೆ ನೋಡುವವರೇ ಹೆಚ್ಚು. ಇಂಥ ದಿನಗಳಲ್ಲಿ ಯಾದಗಿರಿಯಲ್ಲೊಬ್ಬ ವ್ಯಕ್ತಿ ತನ್ನ ಪ್ರಾಣ ಪಣಕ್ಕಿಟ್ಟು ವೃದ್ಧ ತಂದೆಯ ಸೇವೆಗೆ ಕಟಿಬದ್ಧರಾಗಿದ್ದಾರೆ.

ಜುಲೈ 22 ರಂದು 92 ವರ್ಷದ ತಂದೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಕೊರೋನಾ ಪಾಸಿಟಿವ್ ವರದಿ ಬಂದ ನಂತರ ಅವರನ್ನು ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರ ಮಗನ ಸ್ಯಾಂಪಲ್ ಪರೀಕ್ಷೆಯಲ್ಲಿ ಕೋವಿಡ್ ವರದಿ ನೆಗೆಟಿವ್ ಎಂದು ಬಂದಿದೆ. ವೃದ್ಧ ತಂದೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮಗ ತನ್ನ ಮನೆಯಲ್ಲಿ ಎಲ್ಲ ಮುಂಜಾಗ್ರತೆ ವಹಿಸಿ ಪ್ರತ್ಯೇಕವಾಗಿ ಇದ್ದಾರೆ.

ಆದರೆ, ತಂದೆಗೆ 92 ವರ್ಷವಾದ ಹಿನ್ನೆಲೆಯಲ್ಲಿ ಅವರಿಗೆ ನಡೆಯಲು ಹಾಗೂ ಹಾಸಿಗೆಯಿಂದ ಏಳಲು ಕೂಡ ಸಾಧ್ಯವಿಲ್ಲ. ಹೀಗಾಗಿ ಪುತ್ರ ಗ್ಲೌಸ್ ಹಾಗೂ ಮಾಸ್ಕ್ ಹಾಕಿಕೊಂಡು ಮನೆಯಿಂದ ನಿತ್ಯವೂ ಮೂರು ಬಾರಿ ಜೋಳದ ಗಂಜಿ, ರಾಗಿ ಗಂಜಿ ಹಾಗೂ ಬಿಸಿ ನೀರು ತೆಗೆದುಕೊಂಡು ಬಂದು ತಂದೆಯ ನೀರಿನ ಹಾಗೂ ಹಸಿವಿನ ದಾಹ ತಿರಿಸುವ ಕಾರ್ಯ ಮಾಡುತ್ತಿದ್ದಾರೆ.

ಈ ಬಗ್ಗೆ ನ್ಯೂಸ್18 ಕನ್ನಡದ ಜೊತೆ ಪುತ್ರ ಮಾತನಾಡಿ, ಹೆತ್ತವರ ಸೇವೆ ಎಷ್ಟೇ ಮಾಡಿದರೂ ಕಡಿಮೆ. ನನಗೆ ಭಗವಂತ ಅವರ ಸೇವೆ ಮಾಡಲು ಶಕ್ತಿ ಕೊಟ್ಟಿದ್ದಾನೆ. ನಾನು ಕೋವಿಡ್ ಮುಂಜಾಗ್ರತೆ ವಹಿಸಿ ಸೇವೆ ಮಾಡುತ್ತಿದ್ದೆನೆ ಎಂದರು.

ಇದನ್ನೂ ಓದಿ: ಒಲಂಪಿಕ್ಸ್​ಗೆ ಆಯ್ಕೆಯಾದರೂ ಸರ್ಕಾರದಿಂದ ಸಿಗುತ್ತಿಲ್ಲ ಸಹಾಯ; ಚಿತ್ರದುರ್ಗದ ಅಂಧ ಓಟಗಾರ್ತಿಯ ಕಥೆ-ವ್ಯಥೆ

ಸೋಂಕಿತರ ಕಾಳಜಿ ತೋರದ ಸಿಬ್ಬಂದಿ:
ಆಸ್ಪತ್ರೆಯಲ್ಲಿ ವೃದ್ದರು, ಬಾಣಂತಿಯರು ಇದ್ದರೂ ಕೂಡ ಆಸ್ಪತ್ರೆ ಸಿಬ್ಬಂದಿ ಸೋಂಕಿತರ ಸೇವೆ ಮಾಡುತ್ತಿಲ್ಲ. ಇದರಿಂದ ಬಾಣಂತಿ, ವೃದ್ದರಿಗೆ ಸಹಾಯ ಮಾಡಲು ಸಂಬಂಧಿಕರೇ ಬರುವಂತಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಸೋಂಕಿತ ಬಾಣಂತಿಯೊಬ್ಬರ ಸಂಬಂಧಿ ಮಾತನಾಡಿ, ಯಾರೂ ನಮ್ಮ ನಿಗಾ ವಹಿಸುತ್ತಿಲ್ಲ. ಬಾಣಂತಿ ಮಗು, ವಯಸ್ಸಾದವರು ಇದ್ದರೂ ಯಾರೂ ನೋಡುತ್ತಿಲ್ಲ. ಹೀಗಾಗಿ ನಾನು ಬಾಣಂತಿ ಹಾಗೂ ಮಗು ಸೇವೆ ಮಾಡಲು ಬಂದಿದ್ದೆನೆ ಎಂದು ನೋವು ತೊಡಿಕೊಂಡರು.ಸರಕಾರ ಕೋವಿಡ್ ತಡೆಗೆ ಅನೇಕ ಕ್ರಮ ಕೈಗೊಂಡಿದೆ. ಆದರೆ, ಆಸ್ಪತ್ರೆಯಲ್ಲಿ ಮಾತ್ರ ರೋಗಿಗಳ ಸೇವೆ ಕಾಳಜಿ ಕಾಣುತ್ತಿಲ್ಲ. ಇನ್ನು ಮುಂದಾದರೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಸೋಂಕಿತರ ಕಾಳಜಿ ತೋರುವ ಕೆಲಸ ಮಾಡಬೇಕಿದೆ.

ವರದಿ: ನಾಗಪ್ಪ ಮಾಲಿಪಾಟೀಲ
Published by: Vijayasarthy SN
First published: July 30, 2020, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading