ಶಾಸಕ ಪುತ್ರನ ಶೋಕಿ; ಐಫೋನ್​ನಿಂದ ಕೇಕ್ ಕಟ್ ಮಾಡಿದ ಕೊಪ್ಪಳ ಶಾಸಕನ ಮಗ

ಕನಕಗಿರಿ ಶಾಸಕ ಬಸವರಾಜ ದಡೇಸಗೂರ ಅವರ ಮಗ (Son of BJP MLA Basavaraj Dadesugur) ಇತ್ತೀಚೆಗೆ ಹೊಸಪೇಟೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ವೇಳೆ ತನ್ನ ಐಫೋನ್ನಿಂದಲೇ ಕೇಕ್ ಕತ್ತರಿಸಿದ್ದಾನೆ. ಇದು ಹಣದ ಮದ ಎಂದು ಕಾಂಗ್ರೆಸ್ ಪಕ್ಷದವರು ಟೀಕಿಸಿದ್ದಾರೆ.

ಐಫೋನ್​ನಿಂದ ಕೇಕ್ ಕಟ್ ಮಾಡುತ್ತಿರುವುದು (ಕಿರುಚಿತ್ರ)

ಐಫೋನ್​ನಿಂದ ಕೇಕ್ ಕಟ್ ಮಾಡುತ್ತಿರುವುದು (ಕಿರುಚಿತ್ರ)

 • Share this:
  ಕೊಪ್ಪಳ: ರೌಡಿಗಳು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಲಾಂಗ್​ನಲ್ಲಿ ಕೇಕ್ ಕತ್ತರಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲಿಯ ಶಾಸಕರೊಬ್ಬರ ಮಗ ತನ್ನ ಐಫೋನ್​ನಿಂದ ಕೇಕ್ ಕಟ್ (Cutting birthday cake with iPhone) ಮಾಡಿ ಹುಬ್ಬೇರಿಸಿದ್ದಾನೆ. ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸಗೂರ (BJP MLA Basavaraja Dadesugur) ಅವರ ಮಗ ಸುರೇಶ್ ಈ ಶೋಕಿ ತೋರಿಸಿದ ವ್ಯಕ್ತಿ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ (Viral on Social Media) ಆಗಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ಹುಟ್ಟುಹಬ್ಬ ಆಚರಿಸುವ ವೇಳೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ದಿ ನ್ಯೂಸ್ ಮಿನ್ಯೂಟ್ ವೆಬ್​ಸೈಟ್​ನಲ್ಲಿ ಈ ವರದಿ ಪ್ರಕಟವಾಗಿದೆ. ಇನ್ನು, ಡೆಕನ್ ಹೆರಾಲ್ಡ್ ಪತ್ರಿಕೆಯು ಈ ಘಟನೆಯ ಬಗ್ಗೆ ಎದುರಾಳಿ ಕಾಂಗ್ರೆಸ್ ಪಕ್ಷ ಬಿಜೆಪಿ ಮೇಲೆ ಹರಿಹಾಯ್ದಿರುವುದನ್ನು ವರದಿ ಮಾಡಿದೆ. “ಇದು ಹಣಬಲದ ಅಸಹ್ಯ ಪ್ರದರ್ಶನವಾಗಿದೆ. ಒಂದೆಡೆ ಜನರು ತಮ್ಮ ಜೀವ ಮತ್ತು ಜೀವನ ಕಳೆದುಕೊಳ್ಳುತ್ತಿದ್ಧಾರೆ. ಒಂದೊತ್ತಿನ ಊಟಕ್ಕೂ ಶ್ರಮ ಪಡುತ್ತಿದ್ದಾರೆ. ಆದರೆ, ಶಾಸಕನ ಕುಟುಂಬದವರು ಕ್ಷೇತ್ರದ ಬಡವರನ್ನ ಅಪಹಾಸ್ಯ ಮಾಡುವ ರೀತಿಯಲ್ಲಿ ಸಂಪತ್ತಿನ ಅಸಹ್ಯ ಪ್ರದರ್ಶನ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

  ಆದರೆ, ಕನಕಗಿರಿ ಶಾಸಕ ಬಸವರಾಜ ದಡೇಸಗೂರ ಅವರು ತಮ್ಮ ಮಗನ ಈ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಮಗ ಮಾಡಿರುವುದಲ್ಲಿ ಏನು ತಪ್ಪಿದೆ? ತಾನೇ ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿದ್ದಾನೆ. ಕೋವಿಡ್ ಸೋಂಕಿನ ಭಯ ಇದ್ದದರಿಂದ ಕೈ ಬದಲು ತನ್ನ ಫೋನನ್ನು ಕೇಕ್ ಕಟ್ ಮಾಡಲು ಬಳಸಿರಬಹುದು ಎಂದು ಬಿಜೆಪಿ ಶಾಸಕರ ಹೇಳಿದರೆಂದು ಡೆಕನ್ ಹೆರಾಲ್ಡ್ ವರದಿ ಮಾಡಿದೆ.

  ವಿಚಿತ್ರವೆಂದರೆ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ದಡೇಸಗೂರ ಅವರು ತಮ್ಮ ಸರಳತೆಯಿಂದ ಗಮನ ಸೆಳೆದಿದ್ದರು. 2018ರ ಚುನಾವಣೆಯಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅವರು ತಮ್ಮ ಚುನಾವಣಾ ಪ್ರಚಾರದ ಖರ್ಚಿಗೆ ಜನರಿಂದಲೇ ಚಂದಾ ಎತ್ತಿದ್ದರು. ಆದರೆ, ಚುನಾವಣೆಯಲ್ಲಿ ಗೆದ್ದಿದ್ದೇ ಬಂತು ಹಲವು ಐಷಾರಾಮಿ ಕಾರುಗಳನ್ನ ಅವರು ಖರೀದಿಸಿದರೆಂದು ನ್ಯೂಸ್ ಮಿನ್ಯೂಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.

  ಇದನ್ನೂ ಓದಿ: Job Fair- ಬೆಂಗಳೂರಿನಲ್ಲಿ ಜಾಬ್ ಮೇಳ ಶುರು; 2000 ಉದ್ಯೋಗಗಳಿಗೆ ಅವಕಾಶ

  ಬಸವರಾಜ ದಡೇಸಗೂರ ಅವರ ಮಗ ಸುರೇಶ್ ತಮ್ಮ ಜನ್ಮದಿನ ಆಚರಣೆಗೆ ಸ್ನೇಹಿತರನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಹೊಸಪೇಟೆಗೆ ಕರೆದುಕೊಂಡು ಹೋಗಿದ್ದರು. ಆಡಿ ಕಾರಿನಲ್ಲೂ ಸುರೇಶ್ ಸುತ್ತಾಟ ನಡೆಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೆ.

  ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಭಯದ ಮಧ್ಯೆಯೂ ರಾಜಕಾರಣಿಗಳು ಹಾಗೂ ಅವರು ಕುಟುಂಬದವರು ಬಹಳ ವಿಜೃಂಬಣೆಯಿಂದ ಸಭೆ ಸಮಾರಂಭಗಳನ್ನ ಮಾಡುತ್ತಾರೆ. ಹುಟ್ಟುಹಬ್ಬಗಳಂದು ಸಾವಿರಾರು ಜನರನ್ನ ಸೇರಿಸಿ ಬಾಡೂಟ ಹಾಕಿಸುವ ಪರಿಪಾಟವನ್ನೂ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ 21 ದಿನ ಲಾಕ್ ಡೌನ್ ಇದ್ದ ವೇಳೆಯಲ್ಲಿಯೇ ತುಮಕೂರಿನ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರು ಗುಬ್ಬಿ ತಾಲೂಕನಲ್ಲಿ ನೂರಾರು ಗ್ರಾಮಸ್ಥರನ್ನ ಸೇರಿಸಿ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಸರ್ಕಾರಿ ಶಾಲೆಯಲ್ಲೇ ನಡೆದ ಈ ಕಾರ್ಯಕ್ರಮಕ್ಕೆ ಹಲವು ಮಕ್ಕಳೂ ಬಂದಿದ್ದರು. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಅವರು ಈ ರೀತಿಯ ಕೋವಿಡ್ ಸಾಂಕ್ರಾಮಿದಲ್ಲೂ ಜನರ ಗುಂಪನ್ನ ಸೇರಿಸಿ ಜನ್ಮ ದಿನ ಆಚರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನ ಜನಸಾಮಾನ್ಯರು ಕೇಳುತ್ತಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: