ವಿಜಯಪುರ, (ಜೂ. 28): ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಸಾಮಾನ್ಯ ಸೇವಾ ಕೇಂದ್ರ ಅಂದರೆ ಸಿಎಸ್ಸಿ ಏಜೆನ್ಸಿ ಗ್ರಾಮಸ್ಥರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜೀರಂಕಲಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಯುಷ್ಮಾನ ಭಾರತ ಕಾರ್ಡ್ ನೋಂದಣಿ ಮಾಡಿ ಕೊಡಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೆಸರಿನಲ್ಲಿ ಬಂದಿದ್ದ ತಂಡವೊಂದು ಪ್ರತಿಯೊಬ್ಬರಿಂದ ಹೆಚ್ಚುವರಿ ಹಣ ಸುಲಿಗೆ ಮಾಡಿದೆ.
ಇಲ್ಲಿ ಪ್ರತಿಯೊಬ್ಬರಿಂದ ತಲಾ ರೂ. 100 ಹಣ ವಸೂಲಿ ಮಾಡಿದೆ. ಆದರೆ, ಸರಕಾರ ನಿಗದಿಪಡಿಸಿರುವ ದರವೇ ಬೇರೆಯಾಗಿದೆ. ಆಧಾರ ಕಾರ್ಡ್ ಮಾದರಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಪ್ರತ್ಯೇಕವಾಗಿ ಆಯುಷ್ಮಾನ್ ಭಾರತ ಕಾರ್ಡ್ ಮಾಡಿ ಕೊಡಲಾಗುತ್ತಿದೆ. ಈ ಕಾರ್ಡ್ ಮಾಡಿ ಕೊಡಲು ಪ್ರತಿಯೊಂದು A4 ಸೈಜಿನ ಕಾರ್ಡಿಗೆ ತಲಾ ರೂ. 10 ಹಾಗೂ ಪಿವಿಸಿ ಕಾರ್ಡಿಗೆ ತಲಾ ರೂ. 35 ನಿಗದಿ ಪಡಿಸಿದೆ. ಆದರೆ, ಇಲ್ಲಿ ಪ್ರತಿ ಕಾರ್ಡಿಗೆ ರೂ. 100 ವಸೂಲಿ ಮಾಡಲಾಗಿದೆ. ಅಂದರೆ ಪ್ರತಿಯೊಂದು ಕಾರ್ಡಿನಿಂದ ತಲಾ ರೂ. 65 ಹೆಚ್ಚುವರಿ ಹಣ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.
ಬರೀ ಪೋಟೋ ಕ್ಲಿಕ್ಕಿಸಿಕೊಂಡು ಗ್ರಾಮಸ್ಥರಿಂದ ತಲಾ ರೂ. 100 ಹಣ ವಸೂಲಿ ಮಾಡಲಾಗಿದೆ. ಈಗಾಗಲೇ ಗ್ರಾಮದ ಸುಮಾರು 50 ಜನರಿಂದ ಹಣ ವಸೂಲಿ ಮಾಡಲಾಗಿದೆ. ನಾವು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಬಂದಿದ್ದೇವೆ ಎಂದು ಈ ತಂಡ ಗ್ರಾಮಸ್ಥರನ್ನ ಯಾಮಾರಿಸಿದೆ. ಜೀರಂಕಲಗಿ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಈ ಅವಾಂತರಕ್ಕೆ ಸಾತ್ ನೀಡಿರುವ ಆರೋಪ ಕೂಡ ಕೇಳಿ ಬಂದಿದೆ. ಇದೇ ಮಹಿಳೆ ಚಡಚಣದಿಂದ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಯನ್ನು ಕರೆತಂದು ಕಾರ್ಡ್ ಮಾಡಿಸಿರುವ ಆರೋಪವೂ ಕೇಳಿ ಬಂದಿದೆ.
ಈ ಇಬ್ಬರು ಸಿಬ್ಬಂದಿ ಆಯುಷ್ಮಾನ್ ಕಾರ್ಡ್ ಮಾಡಿಕೊಡಲು ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಗ್ರಾಮಕ್ಕೆ ಕಂಪ್ಯೂಟರ್ ಸಿಸ್ಟಮ್, ಪಿಂಗರ್ ಪ್ರಿಂಟ್ ಮಶೀನ್ ಸಮೇತ ಬಂದಿದ್ದ ಇವರು ಹೆಚ್ಚಿಗೆ ಯಾಕೆ ಹಣ ಪಡೆಯುತ್ತೀರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ಹಾರಿಕೆಯ ಉತ್ತರ ನೀಡಿದ್ದಾರೆ.
ಗ್ರಾಮದ ಮುಗ್ದರನ್ನು ಯಾಮಾರಿಸಲು ಯತ್ನಿಸಿದರಿಗೆ ಜನ ಪ್ರಶ್ನಿಸದಾಗ ಬೇಕಿದ್ದರೆ ಕಾರ್ಡು ಮಾಡಿಸಿಕೊಳ್ಳಿ. ಬೇಡವಾದರೆ ಬೀಡಿ ಎಂದು ಆವಾಜ್ ಹಾಕಿದ್ದಾರೆ. ಇದು ಬಡ ಗ್ರಾಮಸ್ಥರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಸುಮಾರು 510 ಸಾಮಾನ್ಯ ಸೇವಾ ಕೇಂದ್ರ(ಸಿಎಸ್ೆಸಿ) ಕೇಂದ್ರಗಳಿವೆ. ಸುಮಾರು 400 ಕೇಂದ್ರಗಳಿಗೆ ಕೇಂದ್ರದ ಆಯುಷ್ಮಾನ ಭಾರತ ಕಾರ್ಡುಗಳನ್ನು ಮಾಡಿಕೊಡಲು ಅವಕಾಶ ನೀಡಲಾಗಿದೆ. ಈ ಮುಂಚೆ ಕೇವಲ ನಗರ ಮತ್ತು ಪಟ್ಟಣಗಳಲ್ಲಿ ಮಾತ್ರ ನೋಂದಣಿ ಮಾಡಿಸುತ್ತಿದ್ದ ಗ್ರಾಮಸ್ಥರಿಗೆ ಅನುಕೂಲವಾಗಲು ಈಗ ಬಹುತೇಕ ಗ್ರಾಮಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೆ ಆಯುಷ್ಮಾನ ಭಾರತ ಕಾರ್ಡ್ ಮಾಡಿಕೊಡಲು ಅನುಮತಿ ನೀಡಲಾಗಿದೆ.
ಆದರೆ, ಇದನ್ನೇ ಒಂದು ಸುವರ್ಣಾವಕಾಶ ಎಂದು ಕೆಲವು ಕೇಂದ್ರಗಳು ಜನರಿಂದ ಹೆಚ್ಚಿನ ಹಣ ಸುಲಿಗೆಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕೇಂದ್ರಗಳ ನಡೆಯನ್ನು ಪ್ರಶ್ನಿಸಿದರೆ ಅಂಥವರನ್ನು ಹಿಯಾಳಿಸುವ ಈ ಕೇಂದ್ರಗಳ ಸಿಬ್ಬಂದಿಗಳಿಗೆ ಮಾತ್ರ ಮಾನವೀಯತೆ ಎಂಬುದೇ ಇಲ್ಲದಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇಂಥ ಕೇಂದ್ರಗಳನ್ನು ರದ್ದು ಮಾಡುವ ಮೂಲಕ ಜನರಿಂದ ಹೆಚ್ಚಿನ ಹಣ ಸುಲಿಗೆ ಮಾಡುವವರಿಗೆ ತಕ್ಕ ಪಾಠ ಕಲಿಸೇಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.