• Home
  • »
  • News
  • »
  • district
  • »
  • ಸರ್ಕಾರದ ವೆಬ್‍ ಪೋರ್ಟಲ್‍ನಲ್ಲಿ ಐಎಲ್​ಐ, ಎಸ್​ಎಆರ್​ಐ ಪ್ರಕರಣ ಅಪ್‍ಡೇಟ್ ಮಾಡದ ಆಸ್ಪತ್ರೆ, ನರ್ಸಿಂಗ್‍ ಹೋಂಗಳು ಮುಟ್ಟುಗೋಲು

ಸರ್ಕಾರದ ವೆಬ್‍ ಪೋರ್ಟಲ್‍ನಲ್ಲಿ ಐಎಲ್​ಐ, ಎಸ್​ಎಆರ್​ಐ ಪ್ರಕರಣ ಅಪ್‍ಡೇಟ್ ಮಾಡದ ಆಸ್ಪತ್ರೆ, ನರ್ಸಿಂಗ್‍ ಹೋಂಗಳು ಮುಟ್ಟುಗೋಲು

ದಾವಣಗೆರೆಯಲ್ಲಿ ನರ್ಸಿಂಗ್ ಹೋಂ ಸೀಜ್ ಮಾಡುತ್ತಿರುವುದು.

ದಾವಣಗೆರೆಯಲ್ಲಿ ನರ್ಸಿಂಗ್ ಹೋಂ ಸೀಜ್ ಮಾಡುತ್ತಿರುವುದು.

ಅಪ್‍ಡೇಟ್ ಮಾಡದವರಿಗೆ ನೋಟಿಸನ್ನೂ ಸಹ ನೀಡಲಾಗಿದ್ದರೂ ಕೆಲವರು ಅಪ್‍ಡೇಟ್ ಮಾಡುತ್ತಿಲ್ಲ. ಆದ ಕಾರಣ ಹೀಗೆ ನಿರ್ಲಕ್ಷ್ಯ ವಹಿಸಿದವರ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡುವಂತೆ ಜಿಲ್ಲಾಧಿಕಾರಿಗಳು ಜೂ.30 ರಂದು ಆದೇಶಿಸಿದ್ದರು.

  • Share this:

ದಾವಣಗೆರೆ; ಸರ್ಕಾರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ, ಜ್ವರದಂತಹ (ಐಎಲ್‍ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್‍ಎಆರ್​ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್‍ಪೋರ್ಟಲ್‍ಗೆ ಅಪ್‍ಡೇಟ್ ಮಾಡದೇ ಇರುವ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ  ಡಿಹೆಚ್‍ಓ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂತಹ ಆಸ್ಪತ್ರೆ, ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದೆ.

ಮೊದಲಿಗೆ ಪಿಜೆ ಬಡಾವಣೆಯಿಂದ ಆರಂಭಿಸಿ ಕೆ.ಬಿ.ಬಡಾವಣೆ, ಬೇತೂರು ರಸ್ತೆಗಳಲ್ಲಿನ ಒಟ್ಟು 11 ಆಸ್ಪತ್ರೆಗಳಿಗೆ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬಿಇಹೆಚ್‍ಓ ಡಾ.ಸುರೇಶ್, ಇತರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಎಲ್‍ಐ ಮತ್ತು ಎಸ್‍ಎಆರ್​ಐ ಪ್ರಕರಣಗಳಲ್ಲಿ ಪ್ರತಿದಿನ ಏಕೆ ವೆಬ್‍ಪೋರ್ಟಲ್‍ನಲ್ಲಿ ಹಾಕುತ್ತಿಲ್ಲವೆಂದು ವಿಚಾರಿಸಿ, ಹೀಗೆ ಅಪ್‍ಡೇಟ್ ಮಾಡದೇ ಇರುವ ಈ ಆಸ್ಪತ್ರೆಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಸೀಜ್ ಮಾಡಿದರು. ಈ ವೇಳೆ ಸೀಜ್ ಮಾಡಲು ಆಗಮಿಸಿದ ಡಿಎಚ್ಒ ಅವರೊಂದಿಗೆ ವೈದ್ಯರೊಬ್ಬರು ವಾಗ್ವಾದಕ್ಕಿಳಿದ ಘಟನೆ ನಗರದ ಕೃಷ್ಣ ಕ್ಲಿನಿಕ್‌ನಲ್ಲಿ ನಡೆಯಿತು. ನಾನು ನಿಯಮಾನುಸಾರ ದಾಖಲೆ ಸಲ್ಲಿಸಿದ್ದೇನೆ ಎಂದು ವಾದ ಮಾಡಿದ ವೈದ್ಯ ಸೀಜ್ ಮಾಡುವಾಗ ನೀವು ತಪ್ಪು ಮಾಡುತ್ತಿದ್ದಾರಾ ಎಂದು ವಾಗ್ವಾದಕ್ಕಿಳಿದರು. ನೀವು ಸಲ್ಲಿಸಿರುವ ದಾಖಲೆಗಳು ಕಚೇರಿಗೆ ತಲುಪಿಲ್ಲ ಎಂದ ಡಿಎಚ್ಒ ದಾಖಲೆಗಳನ್ನು ಸಲ್ಲಿಸಿದ ನಂತರ ಕ್ಲಿನಿಕ್ ಒಪನಿಂಗ್‌ಗೆ ಅವಕಾಶ ಮಾಡಿಕೊಡಲಾಗುತ್ತೆ ಎಂದರು.

ಡಿಎಚ್ಒ ಇನ್ನೊಂದೆಡೆ ಸ್ವಾಧೀನಕ್ಕೆ ಆಗಮಿಸಿದಾಗ ಅವರೊಂದಿಗೆ ನರ್ಸಿಂಗ್ ಹೋಂ ಮಾಲೀಕ ಕೂಡ ವಾಗ್ವಾದ ನಡೆಸಿದರು. ದಾವಣಗೆರೆಯ ಪಿಜೆ ಬಡಾವಣೆಯಲ್ಲಿರುವ ಅಶ್ವಿನಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆಯಿತು.ನಾನು ಕೂಡ ನಿಯಮಾನುಸಾರ ದಾಖಲೆ ಸಲ್ಲಿಸಿದ್ದೇನೆ ಎಂದು ನರ್ಸಿಂಗ್ ಹೋಂ ಮಾಲೀಕರು ವಾದ ಮಾಡಿದರು.

ಕ್ಲಿನಿಕ್‌ಗಳ ಮೇಲೆ ದಾಳಿ ಬಳಿಕ ಮಾತನಾಡಿದ ಡಿಹೆಚ್‍ಒ ಡಾ.ರಾಘವೇಂದ್ರ ಸ್ವಾಮಿ, ಸರ್ಕಾರದ ಆದೇಶದ ಮೇರೆಗೆ ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಆರೋಗ್ಯ ನಿರ್ದೇಶನಾಲಯದ ಆಯುಕ್ತರು, ಕಾರ್ಯದರ್ಶಿಗಳು ಆದೇಶ ಹೊರಡಿಸಿ, ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾದ ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಯೂಸರ್ ಐಡಿ, ಪಾಸ್‍ವರ್ಡ್ ನೀಡಿ ಆನ್‍ಲೈನ್ ಮೂಲಕ ತಮ್ಮ ಆಸ್ಪತ್ರೆಗಳಿಗೆ ಬರುವ ಐಎಲ್‍ಐ ಮತ್ತು ಎಸ್‍ಎಆರ್​ಐ ಪ್ರಕರಣಗಳನ್ನು ಅಪ್‍ಡೇಟ್ ಮಾಡಬೇಕೆಂದು ತಿಳಿಸಲಾಗಿತ್ತು. ಹೀಗೆ ಅಪ್‍ಡೇಟ್ ಮಾಡಿದ ವರದಿಯು ಸ್ಟೇಟ್ ಪೋರ್ಟಲ್‍ನಿಂದ ತಳಮಟ್ಟದವರೆಗೆ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ತಲುಪಿಸಿ ಅವರ ವ್ಯಾಪ್ತಿಯಲ್ಲಿ ಬರುವವರಿಗೆ ಗಂಟಲು ದ್ರವ ಪರೀಕ್ಷೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಐಎಂಎ, ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಪ್ರತಿದಿನ ಮಾಹಿತಿ ಅಪ್‍ಡೇಟ್ ಮಾಡುವಂತೆ ತಿಳಿಸಿದ್ದರು. ಜೊತೆಗೆ ಅಪ್‍ಡೇಟ್ ಮಾಡದವರಿಗೆ ನೋಟಿಸನ್ನೂ ಸಹ ನೀಡಲಾಗಿದ್ದರೂ ಕೆಲವರು ಅಪ್‍ಡೇಟ್ ಮಾಡುತ್ತಿಲ್ಲ. ಆದ ಕಾರಣ ಹೀಗೆ ನಿರ್ಲಕ್ಷ್ಯ ವಹಿಸಿದವರ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡುವಂತೆ ಜಿಲ್ಲಾಧಿಕಾರಿಗಳು ಜೂ.30 ರಂದು ಆದೇಶಿಸಿದ್ದರು ಎಂದು ತಿಳಿಸಿದರು.

ಇದನ್ನು ಓದಿ: ರಾಜ್ಯದಲ್ಲಿ 18 ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣ; ಬೆಂಗಳೂರಿನಲ್ಲಿ ಶತಕ ದಾಖಲಿಸಿದ ಸಾವಿನ ಸಂಖ್ಯೆ


ಈ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಲಾಗಿದೆ. ಜಿಲ್ಲೆಯಲ್ಲಿ ಐಎಲ್‍ಐ ಮತ್ತು ಎಸ್‍ಎಆರ್​ಐ ಪ್ರಕರಣ ಅಪ್‍ಡೇಟ್ ಮಾಡದ 170 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಪಿಎಂಇ ಅಡಿಯಲ್ಲಿ ನವೀಕರಿಸದ ಮತ್ತು ಐಎಲ್‍ಐ ಎಸ್‍ಎಆರ್​ಐ ಪ್ರಕರಣ ವೆಬ್‍ಪೋರ್ಟಲ್‍ನಲ್ಲಿ ದಾಖಲಿಸದೇ ಇರುವ ಒಟ್ಟು 280 ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ ನವೀಕರಿಸುವಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರೋಪಾಯಗಳ ಬಗ್ಗೆ ಜು.3 ರಂದು ಡಿಹೆಚ್‍ಓ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಯವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಹಾಜರಾಗಿ ಇದರ ಸದುಪಯೋಗ ಪಡೆಯಬೇಕು. ಹಾಗೂ ಇನ್ನು 15 ದಿನಗಳ ಒಳಗೆ ನೋಂದಣಿ ನವೀಕರಿಸಿಕೊಂಡು ಸರ್ಕಾರದ ಆದೇಶದಂತೆ ನಡೆಯಬೇಕು ಎಂದು ತಿಳಿಸಿದರು.

First published: