• Home
  • »
  • News
  • »
  • district
  • »
  • ತುಮಕೂರಲ್ಲಿ ಹೇಮೆಗಾಗಿ ಹೋರಾಟ; ಉಪನಾಲೆ ನಿರ್ಮಿಸಿ 8 ವರ್ಷವಾದರೂ ನೀರಿಲ್ಲದೆ ಗ್ರಾಮಸ್ಥರ ಪರದಾಟ

ತುಮಕೂರಲ್ಲಿ ಹೇಮೆಗಾಗಿ ಹೋರಾಟ; ಉಪನಾಲೆ ನಿರ್ಮಿಸಿ 8 ವರ್ಷವಾದರೂ ನೀರಿಲ್ಲದೆ ಗ್ರಾಮಸ್ಥರ ಪರದಾಟ

ಹೇಮಾವತಿ ನದಿಯ ಪ್ರಾತಿನಿಧಿಕ ಚಿತ್ರ

ಹೇಮಾವತಿ ನದಿಯ ಪ್ರಾತಿನಿಧಿಕ ಚಿತ್ರ

ಉಪನಾಲೆಗೆ ಭೂಮಿ ಕೊಟ್ಟಿದ್ದ ರೈತರು 8 ವರ್ಷಗಳಿಂದ ಹೇಮಾವತಿ ನೀರಿಗಾಗಿ ಕಾದುಕಾದು ಈಗ ಕಣ್ಣೀರು ಹರಿಸುವ ಪರಿಸ್ಥಿತಿ ಬಂದಿದೆ.

  • Share this:

ತುಮಕೂರು(ಜೂನ್ 25): ಅನ್ನದಾತರು ಕುಡಿಯುವ ನೀರಿಗಾಗಿ ಅನುಭವಿಸುತ್ತಿರುವ ಸಂಕಷ್ಟಕ್ಕೆ ಒಂದು ನಿದರ್ಶನ ಇಲ್ಲಿದೆ.  ತಮ್ಮೂರಿನ ಕೆರೆಗೆ ಹೇಮಾವತಿ ನೀರು ತುಂಬಿಸಿಕೊಳ್ಳಲು ಗ್ರಾಮಸ್ಥರು ತಮ್ಮ ಕೈಯಿಂದಲೇ ಪ್ರತಿ ವರ್ಷ 3-4 ಲಕ್ಷ ರೂ. ಹಣ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗುಬ್ಬಿ ತಾಲೂಕಿನ ಸೋಮಲಾಪುರ ಸುತ್ತಮುತ್ತಲ ರೈತರು ನೀರಿಗಾಗಿ ಕಣ್ಣೀರಿಡಬೇಕಾದ ಪರಿಸ್ಥಿತಿ ಇದು.


ಸೋಮಲಾಪುರ ಬಳಿಯ ಹೇಮಾವತಿ ಮುಖ್ಯ ನಾಲೆ 15/1ಸಿಯಿಂದ ತೋಟದ ಪಾಳ್ಯದ ಮಾರ್ಗದಿಂದ ವರದನೇಹಳ್ಳಿಯವರೆಗೆ ಉಪ ನಾಲೆ ನಿರ್ಮಿಸಿ ಎಂಟು ವರ್ಷ ಕಳೆದಿದೆ. 3 ಕಿಮೀ ಉದ್ದವಿರುವ ಈ ಉಪನಾಲೆಗೆ ಒಂದು ಹನಿ ನೀರೂ ಹರಿದಿಲ್ಲ. ಇದರಿಂದ ನಾಲೆಗೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಅತ್ತ ಜಮೀನೂ ಇಲ್ಲ, ಇತ್ತ ನೀರೂ ಇಲ್ಲವಾಗಿದೆ. ವೈಜ್ಞಾನಿಕವಾಗಿ ನಿರ್ಮಾಣವಾಗದ ನಾಲೆಗೆ ಕೆಲವು ಬಾರಿ ನೀರು ಹರಿದರೂ ಗುಂಡಿಗಳಿಂದಾಗಿ ನೀರು ತುಂಬಿ ಮುಂದೆ ಹರಿಯದಂತಾಗಿದೆ. ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಏರಿಯು ಮಣ್ಣಿನದ್ದಾಗಿದೆ. ಸಣ್ಣ ಮಳೆ ಬಂದ್ರೂ ಸಾಕು ದಡದ ಮಣ್ಣು ಕುಸಿದು ನೀರು ಹರಿಯುವ ಗೇಟ್​ವಾಲ್ ಸಂಪೂರ್ಣ ಮುಚ್ಚಿಹೋಗುತ್ತೆ.


ನಾಲೆ ನಿರ್ಮಾಣವಾದ ಬಳಿಕ ಹಲವು ಬಾರಿ ಸುತ್ತಮುತ್ತಲಿನ ಗ್ರಾಮಸ್ಥರು ಕೂಲಿ ನಾಲಿ ಮಾಡಿ ಲಕ್ಷಾಂತರ ರೂ ಸಂಗ್ರಹಿಸಿ ನಾಲೆಯಲ್ಲಿನ ಹೂಳು ತೆಗೆಸಿದ್ದಾರೆ. ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದುರಂತ ಅಂದ್ರೆ ಈ ಭಾಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಗೆಲ್ಲುತ್ತಾ ಬಂದಿರೋ ಶಾಸಕ ಹಾಗೂ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಕೂಡ ಗ್ರಾಮಸ್ಥರ ಕಷ್ಟಕ್ಕೆ ನೆರವಾಗಿಲ್ಲ.


ಇದನ್ನೂ ಓದಿ: ಉಪನಾಲೆಗೆ ಭೂಮಿ ಕೊಟ್ಟಿದ್ದ ರೈತರು 8 ವರ್ಷಗಳಿಂದ ಹೇಮಾವತಿ ನೀರಿಗಾಗಿ ಕಾದುಕಾದು ಈಗ ಕಣ್ಣೀರು ಹರಿಸುವ ಪರಿಸ್ಥಿತಿ ಬಂದಿದೆ.
ನಾಲೆ ಆದಾಗಿನಿಂದಲೂ ಈ ರೈತರದ್ದು ಇದೇ ಪರದಾಟ ಆಗಿದೆ. ಪಕ್ಕದಲ್ಲಿರುವ ಸೋಮಲಾಪುರದ ಕೆರೆ ತುಂಬಿದರೂ ಇವರಿಗೆ ಮಾತ್ರ ಹನಿ ನೀರೂ ಸಿಗುತ್ತಿಲ್ಲ. ಈ ಬಾರಿಯಾದ್ರೂ ನಮ್ಮ ಕಷ್ಟಗಳು ಬಗೆಹರಿಯುತ್ತವೆ ಎಂದು ಚಾತಕಪಕ್ಷಿಯ ಹಾಗೆ ಪ್ರತಿ ವರ್ಷ ಕಾಯುವುದೇ ಆಯಿತು. ಇನ್ನಾದರೂ ಇವರ ಸಮಸ್ಯ ಬಗೆಹರಿಯುತ್ತಾ ಕಾದುನೋಡಬೇಕಿದೆ.

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು