ಚಾಮರಾಜನಗರ (ಮಾ.22): ಅರಣ್ಯ ಪ್ರದೇಶಗಳಲ್ಲಿ ಲಂಟಾನಾ ವ್ಯಾಪಕವಾಗಿ ಬೆಳೆಯತೊಡಗಿದೆ. ಎಲ್ಲಾ ಕಡೆ ಲಂಟಾನಾ ಆವರಿಸುತ್ತಿರುವುದರಿಂದ ಹುಲ್ಲು ಬೆಳೆಯದೆ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಸಮಸ್ಯೆ ಎದುರಾಗತೊಡಗಿದೆ. ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೂ ತೊಂದರೆಯಾಗತೊಡಗಿದೆ. ಆದರೆ ಕಾಡಿನ ಪರಿಸರಕ್ಕೆ ಮಾರಕವಾಗಿರುವ ಈ ಲಂಟಾನದಿಂದ ಪೀಠೋಪಕರಣ ತಯಾರಿಸುವ ಮೂಲಕ ಬುಡಕಟ್ಟು ಸೋಲಿಗರು ಬದುಕು ಕಟ್ಟಿಕೊಂಡಿದ್ದಾರೆ. ಕಾಡಿನಲ್ಲಿ ಬೆಳೆಯುವ ಕಳೆ ಮಾದರಿಯ ಲಂಟಾನಾಕ್ಕೆ ಪೀಠೋಪಕರಣದ ಟಚ್ ಕೊಟ್ಟಿದ್ದು, ಸಾವಿರಾರು ರೂ. ಸಂಪಾದನೆ ಮಾಡ್ತಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಗೆ ತಲೆ ನೋವಾಗಿರುವ ಲಂಟಾನಾ ನಿರ್ಮೂಲನೆಗೆ ಪರೋಕ್ಷವಾಗಿ ಅರಣ್ಯ ಇಲಾಖೆ ಜೊತೆ ಸೋಲಿಗರು ಕೈ ಜೋಡಿಸಿದ್ದಾರೆ. ಇವರು ಲಂಟಾನಾದಿಂದ ನಿರ್ಮಿಸಿದ ವಿವಿಧ ಪ್ರಾಣಿಗಳ ಆಕೃತಿಗಳು ವಿದೇಶಗಳಿಗೂ ಕೂಡ ಮಾರಾಟ ಆಗುತ್ತಿವೆ.
ಕಾಡಿನಲ್ಲಿ ಬೆಳೆದಿರುವ ಲಂಟಾನಾ ನಿರ್ಮೂಲನೆ ಮಾಡುವುದು ಅರಣ್ಯ ಇಲಾಖೆಗೆ ಒಂದು ದೊಡ್ಡ ಸವಾಲಾಗಿದೆ. ಈ ಲಂಟಾನಾ ಹೆಚ್ಚಾಗಿರುವ ಕಡೆ ಕಾಡ್ಗಿಚ್ಚು ಹಬ್ಬುವ ಆತಂಕವೂ ಜಾಸ್ತಿ.ಈ ಹಿನ್ನಲೆಯಲ್ಲಿ ಲಂಟಾನಾ ನಿರ್ಮೂಲನೆ ಮಾಡಲು ಸಾಕಷ್ಟು ಪರಿಶ್ರಮ ವಹಿಸಿದರೂ ಇದುವರೆಗು ಸಾಧ್ಯವಾಗಿಲ್ಲ. ಆದರೆ ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದ ಕೆಲವು ಬುಡಕಟ್ಟು ಸೋಲಿಗರು, ಕಾಡಿಗೆ ಮಾರಕವಾಗಿರುವ ಹಾಗು ಅನುಪಯುಕ್ತವಾದ ಲಂಟಾನಾವನ್ನು ಬಳಸಿಕೊಂಡು ಪೀಠೋಪಕರಣ ತಯಾರಿಕೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಆ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಚಾಮರಾಜನಗರ ತಾಲೂಕಿನ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿರುವ ಬೆಲ್ಲವತ್ತ ಗ್ರಾಮದ ಸೋಲಿಗರು ಕಾಡಿನಿಂದ ಲಂಟಾನಾ ತಂದು ನಾನಾ ರೀತಿಯ ಪೀಠೋಪಕರಣ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ಇದರ ಜೊತೆಗೆ ಆನೆ, ಹುಲಿಯಂತಹ ಪ್ರಾಣಿಯ ಆಕೃತಿಗಳನ್ನು ಕೂಡ ಲಂಟಾನಾದಿಂದ ತಯಾರಿಸಲಾಗುತ್ತಿದ್ದು, ವಿದೇಶಗಳಿಂದಲೂ ಈ ಆಕೃತಿಗಳಿಗೆ ಡಿಮ್ಯಾಂಡ್ ಬಂದಿದೆ. ಇಂಗ್ಲೆಂಡ್ ಗೆ ಕಳುಹಿಸಲು 7 ರಿಂದ 8 ಅಡಿಯ ಆನೆಯ ಆಕೃತಿಯನ್ನು ಈಗಾಗಲೇ ಸಿದ್ದಪಡಿಸಲಾಗ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಲಂಟಾನಾದಿಂದ ತಯಾರಿಸಲಾದ ಆನೆ ಆಕೃತಿ ಇಂಗ್ಲೆಂಡ್ ಗೆ ರಫ್ತಾಗಲಿದೆ.
ಇದನ್ನು ಓದಿ: ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಿರಿ; ಆರೋಗ್ಯ ಸಚಿವ ಕೆ.ಸುಧಾಕರ್ ಮನವಿ
ಮೊದಲಿಗೆ ಈ ಲಂಟಾನಾವನ್ನು ಕಾಡಿನಿಂದ ಕಡಿದು ತರುತ್ತಾರೆ. ನಂತರ ಬಿಸಿ ನೀರಿನಲ್ಲಿ ಒಂದು ವಾರಗಳ ಕಾಲ ನೆನೆಸಿ ಇಡುತ್ತಾರೆ. ಬಳಿಕ ನೀರಿನಿಂದ ತೆಗೆದು ನೆರಳಿನಲ್ಲಿಟ್ಟುಕೊಂಡು ತಮಗೆ ಬೇಕಾದ ರೀತಿ ಬೆಂಡ್ ಮಾಡಿಕೊಂಡು ಪೀಠೋಪಕರಣ, ಪ್ರಾಣಿಯ ಆಕೃತಿ ನಿರ್ಮಿಸಲು ಬಳಸಿಕೊಳ್ತಾರೆ. ಇಪ್ಪತ್ತು ದಿನಕ್ಕೊಮ್ಮೆ ಕಾಡಿಗೆ ತೆರಳಿ ಲಂಟಾನಾ ತಂದು ಹೀಗೆ ಪೀಠೋಪಕರಣ ತಯಾರಿಸುವ ಕಾಯಕ ಮುಂದುವರಿಸುತ್ತಿದ್ದಾರೆ ಇವರು. ಮದ್ಯವರ್ತಿಗಳು ಬಂದು ಪೀಠೋಪಕರಣ ಖರೀದಿಸಿ ಕೊಂಡೊಯ್ಯುತ್ತಾರೆ. ನಮಗೆ ನೇರ ಮಾರುಕಟ್ಟೆ ಸೌಲಭ್ಯವಿಲ್ಲ, ನಮ್ಮ ಪರಿಶ್ರಮಕ್ಕೆ ತಕ್ಕಂತೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಉತ್ತಮ ಬೆಲೆ ದೊರಕಿದರೆ ನಮ್ಮ ಜೀವನ ಕೂಡ ಸುಧಾರಿಸುತ್ತೆ ಅಂತಾರೆ ಸೋಲಿಗರ ಜಡೇಗೌಡ. ಲಂಟಾನ ಬಳಸಿ ಪೀಠೋಪಕರಣ ಮಾಡುವ ಕಲೆಯನ್ನು ಡೆಹ್ರಾಡೂನ್ನಿಂದ ಕಲಿತು ಬಂದಿದ್ದೇವೆ ಅಂತಾರೆ ಸೋಲಿಗ ಮಹಿಳೆ ನಾಗಮ್ಮ.
ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್ ಫಾರ್ ಲೋಕಲ್ ಆಶಯಕ್ಕೆ ಪೂರಕವಾಗಿವೆ ಲಂಟಾನದಿಂದ ತಯಾರಿಸಲಾಗುತ್ತಿರುವ ಈ ಪೀಠೋಪಕರಣಗಳು. ಲಂಟಾನ ಪೀಠೋಪಕರಣಗಳಿಗೆ ಬ್ರ್ಯಾಂಡೆಡ್ ಸ್ವರೂಪ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಅರಣ್ಯ ಇಲಾಖೆಯ ತಲೆ ನೋವು ದೂರವಾಗುತ್ತೆ, ನೂರಾರು ಉದ್ಯೋಗ ಸೃಷ್ಟಿ ಯಾಗಿ ಸೋಲಿಗರ ಬದುಕು ಹಸನಾಗುತ್ತೆ. ಅರಣ್ಯ ಇಲಾಖೆ ಇದಕ್ಕೊಂದು ಬೃಹತ್ ಯೋಜನೆ ಸಿದ್ದಪಡಿಸುವತ್ತ ಗಮನಹರಿಸಬೇಕಿದೆ.
- ವಿಶೇಷ ವರದಿ: ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ