ಚಾಮರಾಜನಗರ(ಸೆ. 02): ಟಾಯ್ಲೆಟ್ನಲ್ಲೇ ಅಡುಗೆ, ಅಲ್ಲಿಯೇ ಊಟ, ಅಲ್ಲಿಯೇ ನಿದ್ದೆ. ಹೀಗೆ ಹೀನಾಯವಾಗಿ ಬದುಕುವ ಸ್ಥಿತಿಗೆ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸೋಲಿಗರು ತಳ್ಳಲ್ಪಟ್ಟಿದ್ದಾರೆ. ಮಧ್ಯವರ್ತಿಗಳನ್ನು ನಂಬಿ ಬೀದಿಪಾಲಾಗಿರುವ ಬುಡಕಟ್ಟು ಸೋಲಿಗರು, ಅವರಿವರ ಮನೆಗಳ ಟಾಯ್ಲೆಟ್, ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಹೀನಾಯ ಸಂಗತಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹನೂರು ತಾಲೋಕು ಅರೆಕಡುವಿನ ದೊಡ್ಡಿ ಎಂಬ ಗ್ರಾಮದಲ್ಲಿ 30 ಮಂದಿ ಸೋಲಿಗರಿಗೆ ಅಂಬೇಡ್ಕರ್ ವಸತಿ ಯೋಜಯಡಿ ಮನೆಗಳು ಮಂಜೂರಾಗಿದ್ದವು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಒಬ್ಬ ಗ್ರಾಮಪಂಚಾಯ್ತಿ ಸದಸ್ಯ ಸೇರಿದಂತೆ ಮೂವರು ಮದ್ಯವರ್ತಿಗಳು ಸರ್ಕಾರದಿಂದ ಹಂತಹಂತವಾಗಿ ಬಿಡುಗಡೆಯಾಗುವ ಹಣದಲ್ಲಿ ತಾವೇ ಮನೆ ಕಟ್ಟಿಕೊಡುವುದಾಗಿ ಹಳೆಯ ಮನೆಗಳನ್ನು ಒಡೆಸಿ ಹಾಕಿದ್ದಾರೆ.
ತಳಪಾಯ ಹಾಕಿದ ನಂತರ ಸರ್ಕಾರದಿಂದ ಮೊದಲ ಕಂತಿನ ಹಣ ತಲಾ 45 ಸಾವಿರ ರೂಪಾಯಿ ಬಿಡುಗಡೆಯಾಗಿದೆ. ಈ ಹಣವನ್ನು ಫಲಾನುಭವಿಗಳಿಂದ ಮಂಜೂರಾತಿ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಸಮೇತ ವಸೂಲಿ ಮಾಡಿಕೊಂಡ ಮದ್ಯವರ್ತಿಗಳು ಎರಡನೇ ಹಂತದ ಕಾಮಗಾರಿ ಮಾಡದೆ ಕೈಕೊಟ್ಟಿದ್ದಾರೆ.
ಇದನ್ನೂ ಓದಿ: ದಲಿತ ಯುವಕ ಇಂಗಳಗಿ ಕೊಲೆ ಪ್ರಕರಣ: ಕುಟುಂಬ ಸದಸ್ಯನಿಗೆ ಸರ್ಕಾರಿ ನೌಕರಿ, ಜಮೀನು ಇತ್ಯಾದಿ ಸೌಲಭ್ಯದ ಭರವಸೆ
ಹೊಸ ಮನೆ ಆಸೆಗೆ ಹಳೆಯ ಮನೆ ಕೆಡವಿ ಹಾಕಿದೆವು. ಸರ್ಕಾರದ ಹಣದಲ್ಲಿ ನಾವೇ ಮನೆ ಕಟ್ಟಿಕೊಡುತ್ತೇವೆ ಎಂದು ಹೇಳಿ ಗ್ರಾಮಪಂಚಾಯ್ತಿ ಸದಸ್ಯ ಹಾಗು ಇನ್ನಿಬ್ಬರು ಬಂದು ಅಡಿಪಾಯ ಹಾಕಿದರು. ಇದಕ್ಕೆ ಹಣ ಬಿಡುಗಡೆಯಾಗುತ್ತಿದ್ದಂತೆ ನನ್ನ ಖಾತೆಯಿಂದ 45 ಸಾವಿರ ರೂಪಾಯಿ ಹಣ ಡ್ರಾ ಮಾಡಿಸಿಕೊಂಡು ಹೋದವರು ಮತ್ತೆ ಬರಲೇ ಇಲ್ಲ. ಅತ್ತ ಹಳೆ ಮನೆಯು ಇಲ್ಲದೆ ಇತ್ತ ಹೊಸ ಮನೆಯನ್ನು ಕಟ್ಡಿಕೊಡದ ಕಾರಣ ವಾಸ ಮಾಡಲು ಮನೆಯಿಲ್ಲದೆ ಪಕ್ಕದ ಮನೆಯವರ ಟಾಯ್ಲೆಟ್ನಲ್ಲಿ ವಾಸವಾಗಿದ್ದೇನೆ ಎಂದು ನ್ಯೂಸ್18 ನೊಂದಿಗೆ ಈರಮ್ಮಎಂಬ ಮಹಿಳ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಳಪಾಯದ ಹಣ ಡ್ರಾ ಮಾಡಿಸಿಕೊಂಡ ಗ್ರಾಮ ಪಂಚಾಯ್ತಿ ಸದಸ್ಯನನ್ನು ಕೇಳಿದರೆ ಅದು ಇದು ಅಂತಾ ಸಬೂಬು ಹೇಳುತಿದ್ದಾರೆ. ನನಗೆ ಪತಿ ಇಲ್ಲ, ಇಬ್ಬರು ಮಕ್ಕಳೊಂದಿಗೆ ಪಕ್ಕದ ಮನೆಯವರ ದನದ ಕೊಟ್ಟಿಗೆಯಲ್ಲಿ ಮಾಡುತ್ತಿದ್ದೇನೆ ಎನ್ನುತ್ತಾರೆ ಸೋಲಿಗ ಮಹಿಳೆ ಮಹದೇವಮ್ಮ.
ಸರ್ಕಾರದಿಂದ ಕಂತಿನ ಹಣ ಬಿಡುಗಡೆಯಾಗಬೇಕಾದರೆ ಕಾಮಗಾರಿ ಮುಂದುವರಿಸಿ, ಜಿಪಿಎಸ್ ಮಾಡಿಸಬೇಕು. ಆದರೆ ಕೈಯಲ್ಲಿ ಹಣ ಇಲ್ಲದೆ ಎರಡನೇ ಹಂತದ ಕಾಮಗಾರಿ ಮಾಡಲಾಗದೆ ಸೋಲಿಗರು ಅಸಹಾಯಕರಾಗಿದ್ದಾರೆ. ಮದ್ಯವರ್ತಿಗಳನ್ನು ನಂಬಿ ಇದ್ದ ಹಳೆಯ ಮನೆಗಳನ್ನು ಕೆಡವಿ ಅವರಿವರ ಮನೆಯ ಟಾಯ್ಲೆಟ್, ದನಗಳ ಕೊಟ್ಟಿಗೆ, ಗುಡಿಸಲುಗಳಲ್ಲಿ ಹೀನಾಯವಾಗಿ ವಾಸಮಾಡುತ್ತಿದ್ದಾರೆ.
ಇದನ್ನೂ ಓದಿ: ಅಪಾಯದ ಅಂಚಿನಲ್ಲಿದೆ ಪಣಜಿ-ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಕಿರುಸೇತುವೆ
ಈ ನಡುವೆ ಕಾಮಗಾರಿ ಮುಂದುವರಿಸದೆ ಜಿಪಿಎಸ್ ಮಾಡಲು ಸಾಧ್ಯವಿಲ್ಲ, ಜಿಪಿಎಸ್ ಮಾಡದೆ ಹಣ ಬಿಡುಗಡೆಯಾಗುವುದಿಲ್ಲ ಎನ್ನುತ್ತಿದ್ದಾರೆ ಗ್ರಾಮಪಂಚಾಯ್ತಿ ಪಿಡಿಓ ರಾಜು.
ಜಿಲ್ಲಾ ಪಂಚಾಯ್ತಿ ಹಿರಿಯ ಅಧಿಕಾರಗಳು ಹಾಗು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಅಮಾಯಕ ಸೋಲಿಗರಿಗೆ ನ್ಯಾಯ ಒದಗಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಎಸ್. ಎಂ. ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ