HOME » NEWS » District » SOCIAL BOYCOTT FOR FOUR FAMILIES DUE TO VOTING FOR BJP NCHM HK

ಬಿಜೆಪಿಗೆ ಮತಹಾಕಿದ ಕಾರಣಕ್ಕೆ ನಾಲ್ಕು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

ನಾಲ್ಕು ಕುಟುಂಬಗಳು ಸಂಬಂಧಿಕರ ಸಾವು ನೋವುಗಳಿಗೆ ಹೋಗುವಂತಿಲ್ಲ, ದೇವರ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ, ಇವರನ್ನು ಯಾರು ಸಹ ಮಾತನಾಡಿಸುವಂತಿಲ್ಲ ಎಂದು ಹಲವು ಕಟ್ಟುಪಾಡುಗಳೊಂದಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

news18-kannada
Updated:October 14, 2020, 6:30 PM IST
ಬಿಜೆಪಿಗೆ ಮತಹಾಕಿದ ಕಾರಣಕ್ಕೆ ನಾಲ್ಕು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ
ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು
  • Share this:
ಚಾಮರಾಜನಗರ(ಅಕ್ಟೋಬರ್. 14): ನಾಗರೀಕತೆ ಎಷ್ಟೇ ಮುಂದುವರಿದಿದ್ದರೂ ಕೆಲವು ಅನಿಷ್ಠ ಪದ್ದತಿಗಳು ಇನ್ನೂ ಜಾರಿಯಲ್ಲಿವೆ. ಬಹಿಷ್ಕಾರ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಿಂತವೆ. ಅದರಲ್ಲು ಗಡಿ ಜಿಲ್ಲೆ ಚಾಮರಾಜನಗರದಲ್ಲಂತೂ ಸಾಮಾಜಿಕ ಬಹಿಷ್ಕಾರದಿಂದ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಆಯಾ ಸಮುದಾಯದವರು ವಿಧಿಸುವ ಕಟ್ಟುಪಾಡುಗಳಿಂದ ಮಾನಸಿಕ ಹಾಗು ದೈಹಿಕ ಹಿಂಸೆ ಅನುಭವಿಸುತ್ತಿವೆ. ಇಂತಹುದ್ದೇ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದ್ದು ರಾಜಕೀಯ ಕಾರಣಕ್ಕೆ ನಾಲ್ಕು ಕುಟುಂಬಗಳಿಗೆ ಅವರದ್ದೇ ಸಮುದಾಯದ ಮುಖಂಡರ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಹೆಚ್.ಎಸ್. ಮಹದೇವಪ್ರಸಾದ್ ಅವರ ನಿಧನದಿಂದ ತೆರವಾದ ಗುಂಡ್ಲುಪೇಟೆಯ ಶಾಸಕ ಸ್ಥಾನಕ್ಕೆ 2017ರಲ್ಲಿ ಉಪಚುನಾವಣೆ ನಡೆದಿತ್ತು. ಈ  ವೇಳೆ ಗುಂಡ್ಲುಪೇಟೆ ಪಟ್ಟಣದ ಸನಿಹದಲ್ಲಿರುವ ಹೊಸೂರು ಗ್ರಾಮದಲ್ಲಿರುವ 24 ಮನೆ ತೆಲುಗು ಶೆಟ್ಟರ್ ಸಮುದಾಯದವರು ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಆ ಸಮುದಾಯದ ಮುಖಂಡರು ನಿರ್ಧರಿಸಿದ್ದರು.

ಆದರೆ ಇದೇ ವಾರ್ಡಿನಲ್ಲಿರುವ ಹೆಚ್.ವಿ.ನಾಗರಾಜ ಶೆಟ್ಟಿ, ವೆಂಕಟರಮಣ ಶೆಟ್ಟಿ, ಶಾಂತ ಶೆಟ್ಟಿ ಹಾಗೂ ದೀಪಕ್ ಎಂಬುವರ ಕುಟುಂಬ ಸದಸ್ಯರೆಲ್ಲಾ ಬಿಜೆಪಿಗೆ ಮತ ಹಾಕಿದ್ದರು. ತಾವು ತೀರ್ಮಾನಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿಲ್ಲ ಹಾಗಾಗಿ ಈ ನಾಲ್ಕು ಕುಟುಂಬಸ್ಥರು ದಂಡ ಕಟ್ಟಬೇಕೆಂದು ಹೇಳಿದ್ದಾರೆ. ಆದರೆ, ಮತದಾನ ನಮ್ಮ ಹಕ್ಕು, ಇಂತಹವರಿಗೆ ಹಾಕಬೇಕು ಎಂದು ಯಾರೂ ಸಹ ತಾಕೀತು ಮಾಡುವಂತಿಲ್ಲ, ನಾವೇಕೆ ದಂಡಕಟ್ಟಬೇಕು ಎಂದು ಈ ನಾಲ್ಕು ಕುಟುಂಬದ ಸದಸ್ಯರು ದಂಡ ಕಟ್ಟಲು ನಿರಾಕರಿಸಿದ್ದಾರೆ. ತಾವು ಹೇಳಿದ ಪಕ್ಷಕ್ಕೆ ಮತ ಹಾಕದೆ ದಿಕ್ಕರಿಸಿದ್ದಲ್ಲದೆ ದಂಡ ಕಟ್ಟಲು ನಿರಾಕರಿಸಿದ್ದರಿಂದ ಮುಖಂಡರು ಈ ನಾಲ್ಕು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ.

ಈ ನಾಲ್ಕು ಕುಟುಂಬಗಳು ಸಂಬಂಧಿಕರ ಸಾವು ನೋವುಗಳಿಗೆ ಹೋಗುವಂತಿಲ್ಲ, ದೇವರ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ, ಇವರನ್ನು ಯಾರು ಸಹ ಮಾತನಾಡಿಸುವಂತಿಲ್ಲ ಹೀಗೆ ಮಾತನಾಡಿಸಿದರೆ ಅಂತಹವರಿಗೂ ಬಹಿಷ್ಕಾರ ಹಾಕಲಾಗುವುದು ಎಂದು ಹಲವು ಕಟ್ಟುಪಾಡುಗಳೊಂದಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ವಿಚಿತ್ರವೆಂದರೆ ಮುಖ್ಯಸ್ಥರ ದಬ್ಬಾಳಿಕೆಗೆ ಹೆದರಿ ಪೊಲೀಸ್ ಹುದ್ದೆಯಲ್ಲಿರುವ ತಮ್ಮ ಮಕ್ಕಳು ಸಹ ಮನೆಗೆ ಬರುತ್ತಿಲ್ಲವೆಂದು ಹೆತ್ತವರು ಅಳಲು ತೋಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಊರ ಹಬ್ಬದಲ್ಲಿ ಊಟಮಾಡುತ್ತಿದ್ದಾಗ ಮುಖಂಡರು ತಮ್ಮನ್ನು ಊಟದಿಂದ ಎಬ್ಬಿಸಿ ಆಚೆ ಕಳುಹಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ದೂರಿದ್ದಾರೆ.

ಮುಖಂಡರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದರಿಂದ ನೆಮ್ಮದಿಯಿಂದ ವಾಸಿಸಲು ಸಾಧ್ಯವಾಗದೆ ಗ್ರಾಮ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಮಗೆ ದಯಾಮರಣ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ಈ ಹಿಂದೆ ತಹಶೀಲ್ದಾರ್​ ಹಾಗೂ ಪೊಲೀಸರಿಗೆ ದೂರು ನೀಡಲಾಗಿ ಅವರು ಬಂದು ಶಾಂತಿ ಸಂಧಾನ ಸಭೆ ನಡೆಸಿದ್ದರು. ಕೆಲವು ರಾಜಕೀಯ ಮುಖಂಡರು ಸಹ ಬಂದು ರಾಜಿ ಪಂಚಾಯ್ತಿ ನಡೆಸಿದ್ದರು.

ಇದನ್ನೂ ಓದಿ : ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ; ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶಈ ವೇಳೆ ಯಾವುದೇ ಸಾಮಾಜಿಕ ಬಹಿಷ್ಕಾರ ಹಾಕಿಲ್ಲವೆಂದು ಅನ್ಯನ್ಯೋವಾಗಿ ಇರುತ್ತೇವೆಂದು ಸುಳ್ಳು ಹೇಳಿಕೆ ನೀಡಿದ ಮುಖಂಡರು ಪೊಲೀಸರು ಹಾಗು ರಾಜಕೀಯ ಮುಖಂಡರು ಅತ್ತ ಹೋಗುತ್ತಿದ್ದಂತೆ ಯಾರು ಬಂದರೇನು ಹೋದರೇನು, ನಮ್ಮ ಕಟ್ಟುಪಾಡುಗಳಿಗೆ ಸಮುದಾಯದವರು ತಲೆಬಾಗಲೇಬೇಕು ಎಂದು ಬಹಿಷ್ಕಾರ ಮುಂದುವರಿಸಿದ್ದು, ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬಹಿಷ್ಕಾರಕ್ಕೆ ಒಳಗಾದವರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದಲ್ಲೀಗ ಬಿಜೆಪಿ ಸರ್ಕಾರವೇ ಇದೆ, ಗುಂಡ್ಲುಪೇಟೆಯಲ್ಲೂ ಬಿಜೆಪಿ ಶಾಸಕರೇ ಇದ್ದಾರೆ. ಹಾಗಿದ್ದರೂ ಇವರಿಗೆ ನ್ಯಾಯದೊರೆಯದಂತಾಗಿದೆ. ತಾವು ಇತರರಂತೆ ಎಲ್ಲರೊಡನೆ ಸಾಮರಸ್ಯದಿಂದ ಬಾಳಿ ಬದುಕಬೇಕು ಎಂಬ ಇವರ ಕೂಗು ಅರಣ್ಯರೋಧನವಾಗಿದೆ
Published by: G Hareeshkumar
First published: October 14, 2020, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories