ಕೊಡಗು : ಹಾವು ಎಂದರೆ ಯಾರಿಗೆ ತಾನೆ ಭಯ ಆಗೋದಿಲ್ಲ ಹೇಳಿ. ಅದರಲ್ಲೂ ಪಕ್ಕದಲ್ಲೇ ಹಾವು ಹರಿದರೆ ಹೇಗಾಗಬಹುದು. ಎಷ್ಟೇ ಸಾಧು ಹಾವಾದರೂ ಒಮ್ಮೆ ಎದೆ ಜಲ್ಲ್ ಎನ್ನದೆ ಇರದು ಅಲ್ವಾ. ಆದರೆ ಮನೆಯಂಗಳಕ್ಕೆ ಬಂದ ಸರ್ಪವೊಂದನ್ನು ಆರು ವರ್ಷದ ಬಾಲಕಿಯೊಬ್ಬಳು ಯಾವುದೇ ಭಯ ಅಂಜಿಕೆ ಇಲ್ಲದೆ ಹಿಡಿದು ರಕ್ಷಣೆ ಮಾಡಿದ್ದಾಳೆ. ಆರು ವರ್ಷದ ಬಾಲಕಿ ಹಾವು ಹಿಡಿದಿದ್ದಾಳೆ ಎಂದರೆ ಅದು ನಿಮಗೂ ನಂಬಲು ಕಷ್ಟವಾಹಬಹುದು. ಆದರೂ ಅದು ಸತ್ಯ ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಾವಾಡಿ ಗ್ರಾಮದ ರೋಷನ್ ಎಂಬುವರ ಆರು ವರ್ಷದ ಮಗಳು ತನುಷಾ ಹಾವು ಹಿಡಿದು ರಕ್ಷಿಸಿದ ಪೋರಿ.
ಹಾವನ್ನು ಹಿಡಿದು ತಂದ ಬಾಲಕಿ..!
ತನ್ನ ಎರಡು ವರ್ಷದ ತಂಗಿಯೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ನಾಗರ ಹಾವೊಂದು ಬಂದಿದೆ. ಅದು ಮನೆಯ ಸಮೀಪದಲ್ಲೇ ಇರುವ ಪೊದೆಯೊಳಕ್ಕೆ ಹೋಗುತ್ತಿದ್ದನ್ನು ತನೂಷಾ ನೋಡಿದ್ದಾಳೆ. ನೋಡಿದವಳೇ ಮನೆಯೊಳಗಿದ್ದ ಅಮ್ಮನನ್ನು ಕೂಗಿ ಕರೆದು ಅಮ್ಮ ಹಾವು ಬಂದಿದೆ ಎಂದು ಹೇಳಿದ್ದಾಳೆ. ಅಮ್ಮ ಪವಿತ್ರ ಇರು ಬಂದೆ ಎನ್ನುವಷ್ಟರಲ್ಲಿ ಆ ಬಾಲಕಿ ಪೊದೆಯೊಳಕ್ಕೆ ಹೋಗುತ್ತಿದ್ದ ಹಾವನ್ನು ಹಿಡಿದು ಮನೆ ಮುಂದಿರುವ ಕಾಫಿ ಕಣಕ್ಕೆ ತಂದಿದ್ದಾಳೆ. ತನುಷಾ ಹಾವು ಹಿಡಿದು ತಂದಿರುವುದನ್ನು ತಾಯಿ ಪವಿತ್ರ ಮತ್ತು ಅಕ್ಕಪಕ್ಕದ ಮನೆಯವರೆಲ್ಲರೂ ನೋಡಿ ಹೌಹಾರಿದ್ದಾರೆ. ಆದರೆ ಬಾಲಕಿ ತನುಷಾ ಮಾತ್ರ ಯಾವ ಅಂಜಿಕೆ ಇಲ್ಲದೆ ಹಾವು ಹಿಡಿದು ಆಟವಾಡಿಸಿದ್ದಾಳೆ.
ತಂದೆಯೇ ಸ್ಪೂರ್ತಿ..!
ತನಗೆ ಇಷ್ಟ ಬಂದಂತೆ ಹಾವನ್ನು ಎರಡು ಕೈಗಳಲ್ಲಿ ಎತ್ತಿ ಹಾಡಿಸಿದ್ದಾಳೆ. ಅಲ್ಲಿದ್ದವರೆಲ್ಲರೂ ದೂರದಲ್ಲೇ ನಿಂತು ಭಯದಿಂದಲೇ ನೋಡಿದ್ದಾರೆ. ತನುಷಾಳ ತಾಯಿ ಪವಿತ್ರ ಮನೆಯಿಂದ ಹೊರ ಹೋಗಿದ್ದ ರೋಷನ್ ಅವರಿಗೆ ಕರೆ ಮಾಡಿ ಕೂಡಲೇ ವಿಷಯ ತಿಳಿಸಿ ಕರೆದಿದ್ದಾರೆ. ತಕ್ಷಣವೇ ಬಂದ ರೋಷನ್ ಮಗುವಿನ ಕೈಯಿಂದ ಹಾವು ಪಡೆದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಈ ಬಾಲಕಿ ಹಾವನ್ನು ತಿಳುವಳಿಕೆ ಇಲ್ಲದೆಯೋ ಅಥವಾ ಅಚಾನಕ್ಕಾಗಿ ಹಿಡಿದಿರುವುದಲ್ಲ. ಬದಲಾಗಿ ತನ್ನ ತಂದೆ ಹಾವುಗಳನ್ನು ರಕ್ಷಣೆ ಮಾಡುವುದನ್ನು ನೋಡಿ ಅದರಿಂದ ಸ್ಫೂರ್ತಿ ಹೊಂದಿ ಹಾವನ್ನು ಹಿಡಿದು ರಕ್ಷಿಸಿದ್ದಾಳೆ.
ಅಪ್ಪನಂತೆ ಮಗಳು..!
ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ತಾಯಿ ಪವಿತ್ರ ತನ್ನ ಪತಿ ರೋಷನ್ ಅವರು ಸಾಕಷ್ಟು ಹಾವುಗಳನ್ನು ಹಿಡಿದು ರಕ್ಷಿಸಿದ್ಧಾರೆ. ಹಲವು ಬಾರಿ ಹಾವು ರಕ್ಷಣೆ ಸಂದರ್ಭ ಮಗಳನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆಯಲ್ಲೆಲ್ಲಾ ಹಾವುಗಳನ್ನು ತಂದೆ ಹಿಡಿಯುತ್ತಿದ್ದನ್ನು ನೋಡಿದ್ದ ಮಗಳು ಕೂಡ ಇದು ಸುಲಭದ ಕೆಲಸ ಎನ್ನುವಂತೆ ಮನೆಯ ಬಳಿಗೆ ಬಂದ ಹಾವನ್ನು ಹಿಡಿದಿದ್ದಾಳೆ. ಸದ್ಯ ಯಾವುದೇ ತೊಂದರೆಯಾಗಿಲ್ಲ ಎಂದು ತಾಯಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ನೆರೆಹೊರೆಯವರು ಮಾತ್ರ ಅಚ್ಚರಿಯ ಜೊತೆಗೆ ಮಗುವಿನ ಧೈರ್ಯಕ್ಕೆ ಸೈ ಎಂದಿದ್ದಾರೆ.
ಇದನ್ನೂ ಓದಿ: Robbery: ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದೋಚಿ ಒಂದು ರೂಪಾಯಿ ಹಾಕಿ ತೆರಳಿದ ಚಾಲಾಕಿ ಖದೀಮರು!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ