ನಾಗರಹಾವಿನ 8 ಮೊಟ್ಟೆಗಳಿಗೆ ಕೃತಕ ಶಾಖ ಕೊಟ್ಟು ಮರಿ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಉರಗಪ್ರೇಮಿ!

ಅನಾಥವಾಗಿದ್ದ ಎಂಟು ಹಾವಿನ ಮೊಟ್ಟೆಗಳನ್ನು ಜೋಪಾನ ಮಾಡಿ, ಅವುಗಳಿಗೆ ಕೃತಕ ಶಾಖ ನೀಡಿ ಮೊಟ್ಟೆಯಿಂದ ಮರಿಗಳು ಸುರಕ್ಷಿತವಾಗಿ ಹೊರಬರುವಂತೆ ಮಾಡಿದ್ದಾರೆ. ಜೊತೆಗೆ ಅವುಗಳು ಸ್ವತಂತ್ರವಾಗಿ ಬದುಕಲು ಕಾಡಿಗೆ ಬಿಟ್ಟಿದ್ದಾರೆ.

ನಾಗರಹಾವಿನ ಮರಿಗಳನ್ನು ಕಾಡಿಗೆ ಬಿಡುತ್ತಿರುವ ತೇಜಸ್.

ನಾಗರಹಾವಿನ ಮರಿಗಳನ್ನು ಕಾಡಿಗೆ ಬಿಡುತ್ತಿರುವ ತೇಜಸ್.

  • Share this:
ಪುತ್ತೂರು: ಅನಾಥವಾಗಿದ್ದ ನಾಗರ ಹಾವಿನ ಮೊಟ್ಟೆಗಳಿಗೆ ಕೃತಕ ಶಾಖ ನೀಡಿ ಮರಿ ಮಾಡಿ ಅರಣ್ಯಕ್ಕೆ ಬಿಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪರಿಸರ ಪ್ರೇಮಿಯಾಗಿರುವ ಯುವಕ ತೇಜಸ್ ಕಳೆದ ಹಲವಾರು ವರ್ಷಗಳಿಂದ ಕಾಡು ಪ್ರಾಣಿ- ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ನಾಗರಹಾವುಗಳನ್ನು ಇವರು ಈಗಾಗಲೇ ರಕ್ಷಿಸಿ ಸುರಕ್ಷಿತ ತಾಣಕ್ಕೆ ಅವುಗಳನ್ನು ಸೇರಿಸುವ ಕೆಲಸ ಮಾಡಿದ್ದಾರೆ.

ಇದೇ ರೀತಿ ಇತ್ತೀಚಿಗೆ ಪುತ್ತೂರಿನ ಡಾ. ರಮೇಶ್ ಎನ್ನುವವರ ಮನೆಯಲ್ಲಿ ನಾಗರಹಾವಿನ 8  ಮೊಟ್ಟೆಗಳು ಪತ್ತೆಯಾಗಿದ್ದವು. ಮನೆ ಮಂದಿ ಇದನ್ನು ತೇಜಸ್ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದ ತೇಜಸ್ ಈ ಮೊಟ್ಟೆಗಳು ನಾಗರಹಾವಿನ ಮೊಟ್ಟೆಗಳು ಎನ್ನುವುದನ್ನು ಖಾತರಿಪಡಿಸಿಕೊಂಡರು. ಮೊಟ್ಟೆಗಳನ್ನು ಹಾಗೆಯೇ ಬಿಟ್ಟಲ್ಲಿ ಮೊಟ್ಟೆ ಹೊಡೆದು ಹೋಗುವ ಸಾಧ್ಯತೆಮನಗಂಡಿದ್ದ ತೇಜಸ್ ಅರಣ್ಯ ಅಧಿಕಾರಿಗಳ ಸಮ್ಮತಿಯ ಮೇರೆಗೆ ಮೊಟ್ಟೆಗಳನ್ನು ತನ್ನ ಮನೆಗೆ ತಂದು ಕೃತಕ ಶಾಖ ನೀಡುವ ವ್ಯವಸ್ಥೆ ಮಾಡಿದ್ದರು.

57 ದಿನಗಳ ಕಾಲ ಮೊಟ್ಟೆಗಳಿಗೆ ಕೃತಕ ಶಾಖ ನೀಡಿದ ಬಳಿಕ ಎಲ್ಲಾ 8 ಮೊಟ್ಟೆಗಳಿಂದ ಮರಿಗಳು ಹೊರಬಂದಿದ್ದು, ಇದೀಗ ಈ‌ ಮರಿಗಳು ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಪುತ್ತೂರು ಹೊರವಲಯದ ಅರಣ್ಯಕ್ಕೆ ಎಲ್ಲಾ ಮರಿಗಳನ್ನು ಬಿಡುವ ಮೂಲಕ ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ. ಎಳವೆಯಿಂದಲೇ ಪರಿಸರ ಹಾಗೂ ಪ್ರಾಣಿ-ಪಕ್ಷಿಗಳ ಮೇಲೆ ಅಪಾರ‌ ಕಾಳಜಿ ಹೊಂದಿರುವ ತೇಜಸ್ ಕಾಲೇಜು ದಿನಗಳಲ್ಲೇ ಹಾವುಗಳ ಹಾಗೂ ಕಾಡಿನಿಂದ ನಾಡಿಗೆ ಬರುವ ಸಣ್ಣ ಪ್ರಾಣಿಗಳ ರಕ್ಷಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಂಕೆ, ಬರಿಂಕ, ಕೆಂಚಳಿಲು ಸೇರಿದಂತೆ ಹಲವು ಪ್ರಾಣಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ತೇಜಸ್ ಹಾವುಗಳನ್ನು ಹಿಡಿಯುವುದಲ್ಲೂ ನಿಸ್ಸೀಮರಾಗಿದ್ದಾರೆ.

ಇದನ್ನು ಓದಿ: ಕೋವಿಡ್‌ ರಿಸಲ್ಟ್‌ ನೀಡಲು ವಿಳಂಬ ಮಾಡಿದ 40 ಲ್ಯಾಬ್‌ಗಳ ಮೇಲೆ ದಂಡ; ಡಿಸಿಎಂ ಅಶ್ವತ್ಥ್ ನಾರಾಯಣ

ದಕ್ಷಿಣಕನ್ನಡ ಜಿಲ್ಲೆಯ ಯಾವ ಭಾಗದಲ್ಲೂ ಮನೆಗೆ ಅಥವಾ ಇತರ ಜನವಸತಿ ಪ್ರದೇಶಗಳಿಗೆ ವಿಷಕಾರಿ ಹಾವುಗಳು ಕಾಣಿಸಿಕೊಂಡಲ್ಲಿ ತೇಜಸ್ ಗೆ ಕರೆ ಬರುವುದು ಸಾಮಾನ್ಯವಾಗಿದೆ. ಇಂಥ ವಿಷಕಾರಿ ಹಾವುಗಳನ್ನು ತನ್ನ ಚಾಕಚಕ್ಯತೆಯಿಂದ ಸಲೀಸಾಗಿ ಹಿಡಿದು ಅವುಗಳನ್ನು ಅರಣ್ಯ ಇಲಾಖೆಯ ಒಪ್ಪಿಗೆಯ ಬಳಿಕ ಕಾಡಿಗೆ ಬಿಡುವ ಕೆಲಸವನ್ನು ಮಾಡುತ್ತಿದ್ದಾರೆ.  ಹಾವುಗಳ ರಕ್ಷಣೆಯ ಸಂದರ್ಭದಲ್ಲಿ ಹಲವು ರೀತಿಯ ತೊಂದರೆಗಳನ್ನೂ ತೇಜಸ್ ಅನುಭವಿಸಿದ್ದಾರೆ. ಒಂದು ಬಾರಿ ನಾಗರಹಾವು ಒಂದನ್ನು ರಕ್ಷಿಸುವ ವೇಳೆ ಹಾವು ಅವರ ಕೈಗೆ ಕಚ್ಚಿದ ಪರಿಣಾಮ ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಆ ಬಳಿಕ ಹಾವು ಹಿಡಿಯುವ ಕಾರ್ಯವನ್ನು ನಿಲ್ಲಿಸಲು ತೀರ್ಮಾನಿಸಿದ್ದ ತೇಜಸ್ ಗೆ ಹಲವಾರು ವಿಷಕಾರಿ ಹಾವುಗಳಿಂದಾಗಿ ತೊಂದರೆಗೆ ಒಳಗಾಗುವುದನ್ನು ಮನಗಂಡು ಮತ್ತೆ ಹಾವು ಹಿಡಿಯುವ ಹವ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

ಇದೀಗ ಅನಾಥವಾಗಿದ್ದ ಎಂಟು ಹಾವಿನ ಮೊಟ್ಟೆಗಳನ್ನು ಜೋಪಾನ ಮಾಡಿ, ಅವುಗಳಿಗೆ ಕೃತಕ ಶಾಖ ನೀಡಿ ಮೊಟ್ಟೆಯಿಂದ ಮರಿಗಳು ಸುರಕ್ಷಿತವಾಗಿ ಹೊರಬರುವಂತೆ ಮಾಡಿದ್ದಾರೆ. ಜೊತೆಗೆ ಅವುಗಳು ಸ್ವತಂತ್ರವಾಗಿ ಬದುಕಲು ಕಾಡಿಗೆ ಬಿಟ್ಟಿದ್ದಾರೆ.
Published by:HR Ramesh
First published: