ಚನ್ನಪಟ್ಟಣದ ಹೊಂಗನೂರು ಕೆರೆಯಲ್ಲಿ 6 ಆನೆಗಳು ಪ್ರತ್ಯಕ್ಷ; ಸ್ಥಳೀಯ ರೈತರಲ್ಲಿ ಮನೆ ಮಾಡಿದ ಆತಂಕ

ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಸದ್ಯ ರಾಮನಗರ ಜಿಲ್ಲೆಯಲ್ಲಿ ಒಟ್ಟು 29 ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಪ್ರಮುಖವಾಗಿ ಕಬ್ಬಾಳು, ಸಾತನೂರು, ಅಚ್ಚಲು, ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ವಾಸಮಾಡ್ತಿವೆ.

ಕಾಡಾನೆಗಳ ಹಿಂಡು

ಕಾಡಾನೆಗಳ ಹಿಂಡು

  • Share this:
ರಾಮನಗರ(ಆ.16): ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆರೆಯಲ್ಲಿ 6 ಆನೆಗಳು ಪ್ರತ್ಯಕ್ಷವಾಗಿವೆ.  ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ಹಿಂಡು ಕೆರೆ ಮಧ್ಯಭಾಗದಲ್ಲಿ ನೀರಿನಲ್ಲಿ ನಿಂತು ಈಗ ಪಕ್ಕದಲ್ಲಿರುವ ಪೊದೆಯಲ್ಲಿ ಕುಳಿತಿವೆ. ಇನ್ನು ಆನೆಗಳನ್ನ ನೋಡಲು ಜನಜಂಗುಳಿ ಸೇರಿತ್ತು.‌ ಚನ್ನಪಟ್ಟಣದ ದೊಡ್ಡ ಕೆರೆಗಳಲ್ಲಿ ಒಂದಾದ ಹೊಂಗನೂರು ಕೆರೆಯಲ್ಲಿ ಹಲವು ಬಾರಿ ಆನೆ ಪ್ರತ್ಯಕ್ಷವಾಗಿದೆ. ಆದರೆ ಇದೇ ಮೊದಲ ಬಾರಿಗೆ 6 ಆನೆಗಳು ಒಂದೇ ಬಾರಿ ಕಾಣಿಸಿಕೊಂಡಿವೆ.

ಕಾಡಾನೆಗಳ ದಾಳಿಗೆ ಅನ್ನದಾತ ಕಂಗಾಲು

ಹೌದು, ರೇಷ್ಮೆನಗರಿ ರಾಮನಗರ ಜಿಲ್ಲೆಯ ರೈತರು ಕಾಡಾನೆಗಳ ದಾಳಿಯಿಂದಾಗಿ ವ್ಯವಸಾಯವೇ ಬೇಡ ಎನ್ನುವ ದುಸ್ಥಿತಿಗೆ ಬಂದಿದ್ದಾರೆ. ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣದಲ್ಲಿ ಹೆಚ್ಚಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದು, ಮಾಗಡಿಯಲ್ಲಿಯೂ ಸಹ ಈಗೀಗ ಹೆಚ್ಚಾಗಿದೆ. ಇನ್ನು ಕಳೆದ ಕೆಲದಿನಗಳ ಹಿಂದೆ ಹಾಸನದ ಸಕಲೇಶಪುರದಿಂದ ವಲಸೆ ಬಂದಿದ್ದ ಮೌಂಟೇನ್ ಹೆಸರಿನ ಸಲಗವನ್ನ ಚನ್ನಪಟ್ಟಣದ ಗುಡ್ಡೆಅವ್ವೇರಹಳ್ಳಿ ಗ್ರಾಮ ವ್ಯಾಪ್ತಿಯ ಕಾಡಿನಲ್ಲಿ ಸೆರೆಯಿಡಿಯಲಾಗಿತ್ತು. ಆದರೆ ಇದನ್ನ ಹೊರತುಪಡಿಸಿ ಕನಕಪುರ, ರಾಮನಗರ, ಚನ್ನಪಟ್ಟಣ ಭಾಗದಲ್ಲಿ 48 ಕಾಡಾನೆಗಳ ದಂಡು ಬೀಡುಬಿಟ್ಟಿವೆ ಎಂದು ಬಲ್ಲಮೂಲಗಳಿಂದ ನ್ಯೂಸ್ 18 ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:Karnataka Weather Today: ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

ಇನ್ನು ಚನ್ನಪಟ್ಟಣ - ಕನಕಪುರ ಭಾಗದಲ್ಲಿ ಹೆಚ್ಚು ನೀರಾವರಿ ಇರುವ ಕಾರಣ ಆಹಾರ, ನೀರನ್ನ ಅರಸಿಕೊಂಡು ಆನೆಗಳು ರೈತರ ಕೃಷಿ ಭೂಮಿಯ ಮೇಲೆ ದಾಳಿ ಮಾಡ್ತಿವೆ. ಆದರೆ ಈ ವಿಚಾರವಾಗಿ ಆಡಳಿತ ನಡೆಸುವ ಯಾವ ರಾಜ್ಯ ಸರ್ಕಾರಗಳು ಸಹ ಶಾಶ್ವತ ಪರಿಹಾರ ನೀಡ್ತಿಲ್ಲ. ಬದಲಾಗಿ ಕವಡೆ ಕಾಸು ನೀಡ್ತಿದ್ದಾರೆ. ಇದರಿಂದಲೇ ರೈತರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ಸದ್ಯ ರಾಮನಗರ ಜಿಲ್ಲೆಯಲ್ಲಿ ಒಟ್ಟು 29 ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಪ್ರಮುಖವಾಗಿ ಕಬ್ಬಾಳು, ಸಾತನೂರು, ಅಚ್ಚಲು, ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ವಾಸಮಾಡ್ತಿವೆ. ಬನ್ನೇರುಘಟ್ಟ, ಕಾವೇರಿ ವನ್ಯಜೀವಿ ಧಾಮದಿಂದ ಜಿಲ್ಲೆಗೆ ಆನೆಗಳು ಬರುತ್ತಿವೆ. ನಾವು ಸಹ ಅವುಗಳನ್ನ ಕಾಡಿಗೆ ಓಡಿಸಲು ಪ್ರಯತ್ನ ಮಾಡ್ತಿದ್ದೇವೆ ಎನ್ನುತ್ತಾರೆ.

ಇನ್ನು ಕಳೆದ ವರ್ಷ ರಾಮನಗರ ಜಿಲ್ಲೆಯ ರೈತರಿಗೆ ಆನೆಗಳ ದಾಳಿಯಿಂದಾಗಿ ಬೆಳೆ ಕಳೆದುಕೊಂಡವರಿಗೆ ಸರ್ಕಾರದಿಂದ 1.45 ಕೋಟಿ ರೂ. ಪರಿಹಾರ ನೀಡಿದ್ದೇವೆಂದು ಅರಣ್ಯ ಇಲಾಖೆಯ ಅಧಿಕಾರಿ ನ್ಯೂಸ್ 18 ಗೆ ತಿಳಿಸಿದ್ದಾರೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಸರ್ಕಾರದಿಂದ ಕೋಟಿ ಕೋಟಿ ಪರಿಹಾರ ಕೊಡುವ ಬದಲಾಗಿ, ಅದೇ ಹಣದಿಂದ ಆನೆಗಳು ಬರದಂತೆ ತಂತಿ ಬೇಲಿ ಕಾರಿಡಾರ್  ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ. ಈಗಲಾದರೂ ರಾಜ್ಯ ಸರ್ಕಾರ ಈ ವಿಚಾರವಾಗಿ ಹೆಚ್ಚಿನ‌ ಗಮನಹರಿಸಬೇಕಿದೆ ಎಂಬ ಕೂಗು ಕೇಳಿಬಂದಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

(ವರದಿ : ಎ.ಟಿ.ವೆಂಕಟೇಶ್)
Published by:Latha CG
First published: