Dengue fever: ಕೊರೋನಾ 3ನೇ ಹಾವಳಿ ಆತಂಕದ ನಡುವೆ ರಾಯಚೂರು ಮಕ್ಕಳನ್ನು ಕಾಡುತ್ತಿದೆ ಡೆಂಘೀ; ವಾರದಲ್ಲಿ 6 ಮಕ್ಕಳು ಸಾವು!

ಇಷ್ಟೆಲ್ಲಾ ಸಾವು ನೋವುಗಳು ಸಂಭವಿಸುತ್ತಿದ್ದರೂ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಿ‌, ಸೂಕ್ತ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೇ ಮಾಯವಾಗಿದ್ದಾರೆ‌. ರಾಯಚೂರು ಉಸ್ತುವಾರಿ ಹೊಣೆ ಹೊತ್ತಾಗಿನಿಂದ ಈವರೆಗೂ ಸಚಿವ ಹಾಲಪ್ಪ ಆಚಾರ್ ಜಿಲ್ಲೆಗೆ ಕಾಲಿಟ್ಟಿಲ್ಲ.

ರಾಯಚೂರು ಜಿಲ್ಲೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದು.

ರಾಯಚೂರು ಜಿಲ್ಲೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವುದು.

  • Share this:
ರಾಯಚೂರು: ಒಂದು ಕಡೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಕೊರೋನಾ ಮೂರನೇ ಅಲೆ ವಕ್ಕರಿಸಲಿದೆ ಎಂಬ ತಜ್ಞರ ಎಚ್ಚರಿಕೆ ನಡುವೆಯೇ ರಾಯಚೂರು ಜಿಲ್ಲೆಯಾದ್ಯಂತ (Raichuru District) ಡೆಂಘೀ ಪ್ರಕರಣಗಳು (Dengue Fever Cases) ದಿನೇ ದಿನೇ ಹೆಚ್ಚುತ್ತಿವೆ. ದಿನಕ್ಕೊಬ್ಬರಂತೆ ಇದುವರೆಗೆ ಒಂದೇ ವಾರದಲ್ಲಿ ಬರೋಬ್ಬರಿ ಆರು ಮಕ್ಕಳು (Childrens Death) ಅಸುನೀಗಿದ್ದಾರೆ. ಮಾನ್ವಿ, ಸಿಂಧನೂರು, ಪಟ್ಟಣದಲ್ಲಿಯೇ ಮೂರು‌ ಮಕ್ಕಳು ಮೇಲಿಂದ‌ ಮೇಲೆ ಮೂರು ದಿನಗಳಲ್ಲೇ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳನ್ನೇ ಎಡಬಿಡದೆ ಕಾಡುತ್ತಿರುವ ಡೆಂಘೀನಿಂದಾಗಿ ಪೋಷಕರು ಹೈರಾಣಾಗಿದ್ದು, ಜಿಲ್ಲೆಯ ಬಹುತೇಕ ಆಸ್ಪತ್ರೆಗಳು (District Hopspitals) ಭರ್ತಿಯಾಗಿವೆ.

ರಾಯಚೂರು ಜಿಲ್ಲೆಗೆ ನೆರೆಯ ಹೈದ್ರಾಬಾದ್ ಸಮೀಪ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಮಕ್ಕಳನ್ನ ಹೈದ್ರಾಬಾದ್ ಗೂ ಕರೆದುಕೊಂಡು ಹೋಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ‌ ಆರೋಗ್ಯ ರಕ್ಷಣೆಗಾಗಿ ಹಳ್ಳಿ ಹಳ್ಳಿಯಿಂದ ಬಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕೋವಿಡ್ ನ ಆತಂಕದ ನಡುವೆ ಡೆಂಘೀ ಹಾವಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಇಷ್ಟಿದ್ದರೂ ಜಿಲ್ಲೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ನರಳಾಡುವ ಸ್ಥಿತಿ ಎದುರಾಗಿದೆ‌. ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ನಲ್ಲಿರುವ ಎಲ್ಲಾ ಬೆಡ್ ಗಳೂ ಭರ್ತಿಯಾಗಿವೆ. ಇರುವ ಬೆಡ್ ಗಳಲ್ಲೇ ಒಂದೊಂದು ಬೆಡ್ ನಲ್ಲಿ ಇಬ್ಬರಿಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಪರಿಣಾಮ ದಿನಕ್ಕೆ ಒಂದು ಮಗುವಿನಂತೆ ಇದೊಂದೇ ವಾರದಲ್ಲಿ ಬರೋಬ್ಬರಿ 6ಕ್ಕೂ ಹೆಚ್ಚು ಮಕ್ಕಳು ಡೆಂಘೀನಿಂದಾಗಿ ಅಸುನೀಗಿದ್ದಾರೆ.

ಪ್ರಾಣಕ್ಕೆ ಸಂಚಕಾರ ತಂದೊಡ್ಡಿದ ಡೆಂಘೀ ವಿರುದ್ಧ ಹೋರಾಡಲು ಪೋಷಕರು ಆಸ್ಪತ್ರೆಗಳಿಗೆ ಅಲೆದು ಅಲೆದು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಬಹುತೇಕ ಮಕ್ಕಳು ಸೇರಿದಂತೆ ಅಂದಾಜು 120 ಕ್ಕೂ ಅಧಿಕ ಜನರಿಗೆ ಡೆಂಘೀ ವಕ್ಕರಿಸಿದೆ. ಸಿಂಧನೂರು, ಮಾನ್ವಿ, ದೇವದುರ್ಗ, ರಾಯಚೂರು ತಾಲೂಕುಗಳ ಮಕ್ಕಳು ಸಾಂಕ್ರಾಮಿಕ ರೋಗದಿಂದ ನರಳುವಂತಾಗಿದೆ. ಇಷ್ಟೆಲ್ಲಾ ಸಾವು ನೋವುಗಳು ಸಂಭವಿಸುತ್ತಿದ್ದರೂ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಿ‌, ಸೂಕ್ತ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳಬೇಕಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೇ ಮಾಯವಾಗಿದ್ದಾರೆ‌. ರಾಯಚೂರು ಉಸ್ತುವಾರಿ ಹೊಣೆ ಹೊತ್ತಾಗಿನಿಂದ ಈವರೆಗೂ ಸಚಿವ ಹಾಲಪ್ಪ ಆಚಾರ್ ಜಿಲ್ಲೆಗೆ ಕಾಲಿಟ್ಟಿಲ್ಲ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ‌ ಚಿಕಿತ್ಸೆ ನೀಡದ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲೇ‌‌ ಫುಲ್ ಬಿಜಿಯಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಬಿ.ಸಿ ಸತೀಶ್ ಅವರನ್ನು ಕೇಳಿದರೆ, ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಪ್ಪು ಮಣ್ಣು ಹೆಚ್ಚು ಇರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿವೆ. ಇದರಿಂದ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಫಾಗಿಂಗ್​ ಮಾಡೋದು ಮುಖ್ಯವಾಗಿದೆ. ಕುಡಿಯುವ ನೀರನ್ನು ಹೆಚ್ಚು ದಿನ ಸ್ಟೋರ್ ಮಾಡದೆ ಎರಡು ದಿನಕ್ಕೊಮ್ಮೆ ನೀರು ಹೋದಗಿಸಲು ಸೂಚನೆ ನೀಡಿದ್ದೇವೆ. ಈಗಾಗಲೇ ಸೋಂಕು ದೃಢವಾಗಿರುವವರಿಗೆ ಚಿಕಿತ್ಸೆ ನೀಡುವ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: Weird Fever: ಕುಶಾಲನಗರ ಸುತ್ತಮುತ್ತ ಮಕ್ಕಳಿಗೆ ವಿಚಿತ್ರ ಜ್ವರ; ಆತಂಕದಲ್ಲಿ ಪೋಷಕರು

ಜಿಲ್ಲೆಯ ಸುಮಾರು 2000 ಕ್ಕೂ ಅಧಿಕ ಜನರು ನೆಗಡಿ, ಜ್ವರ, ಕೆಮ್ಮು ಅಂತಾ ಬಳಲುತ್ತಿದ್ದಾರೆ. ಈ‌ ಪೈಕಿ ಡೆಂಘೀ ಪರೀಕ್ಷೆ ಮಾಡಿಸಿದ ನೂರಾರು ಜನರಲ್ಲಿ ಡೆಂಘೀ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂದರೂ ಹೊರ ಜಿಲ್ಲೆ ಹಾಗೂ ಬೇರೆ ರಾಜ್ಯಗಳತ್ತ ಪೋಷಕರು ತೆರಳಿದರೂ ಮಕ್ಕಳನ್ನು‌ ಬದುಕಿಸಿಕೊಳ್ಳಲಾಗದಂತಹ ದುಸ್ಥಿತಿ ಎದುರಾಗಿದೆ‌.

ವರದಿ : ವಿಶ್ವನಾಥ್ ಹೂಗಾರ್
Published by:HR Ramesh
First published: