news18-kannada Updated:December 8, 2020, 7:54 PM IST
ಸಾಂದರ್ಭಿಕ ಚಿತ್ರ
ಕಲಬುರ್ಗಿ (ಡಿಸೆಂಬರ್. 08): ಅಕ್ಕ ತಂಗಿಯರಿಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ. ಒಂದೇ ಸಮಯಕ್ಕೆ ಸಾವಿಗೆ ಶರಣಾದ ದುರ್ದೈವಿಗಳನ್ನು 20 ವರ್ಷದ ಐಶ್ವರ್ಯ ಸುತಾರ ಮತ್ತು ಆಕೆಯ ತಂಗಿ 17 ವರ್ಷದ ಸಾರಿಕಾ ಸುತಾರ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಮಯದಲ್ಲಿ ಇಬ್ಬರೂ ನೇಣು ಬಿಗಿದುಕೊಂಡಿದ್ದಾರೆ. ಪೋಷಕರು ಬರುವುದರೊಳಗಾಗಿ ಹೆಣವಾಗಿದ್ದಾರೆ. ಮೃತ ಸಹೋದರಿಯರ ತಂದೆ ವಿಶ್ವನಾಥ ಸುತಾರ ಐನಾಪುರ ಗ್ರಾಮದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದಾನೆ. ಇವರಿಗೆ ಒಟ್ಟು ಐವರು ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಈಗಾಗಲೇ ಮೂವರು ಸಹೋದರಿಯರ ಮದುವೆಯಾಗಿದೆ. ಐದನೆಯವಳಾದ ಸಾರಿಕಾಗೆ ಒಂದೂವರೆ ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಆದರೆ, ನಾಲ್ಕನೆಯವಳಾದ ಐಶ್ವರ್ಯಳಿಗೆ ಇನ್ನೂ ಯಾವುದೇ ಮದುವೆ ನಿಶ್ಚಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ ತಂದೆ ಚಹಾ ಅಂಗಡಿಯಿಂದ ಮನೆಗೆ ಬಂದಾಗ ಸಹೋದರಿಯರೇ ಊಟ ಬಡಿಸಿದ್ದಾರೆ. ಊಟದ ನಂತರ ತಂದೆ ಮರಳಿ ಅಂಗಡಿಗೆ ಹೋಗಿದ್ದಾರೆ. ಸಂಜೆ ತಾಯಿ ಹೊಲದಿಂದ ಮನೆಗೆ ಬಂದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೃತ ಸಹೋದರಿಯರ ತಂದೆ ವಿಶ್ವನಾಥ ಸುತಾರ ಹೇಳುವ ಪ್ರಕಾರ, ಅದೇ ಗ್ರಾಮದ ನಾಗು ಚೌಶೆಟ್ಟಿ ಎಂಬಾತ ತಮ್ಮ ಹುಡುಗಿಯರನ್ನು ಪೀಡಿಸುತ್ತಿದ್ದ. ಮದುವೆ ನಿಶ್ಚಯ ಮಾಡಲಾಗಿದ್ದ ಹುಡುಗಿಗೆ ಮತ್ತು ಆಕೆಯ ಅಕ್ಕನಿಗೂ ಆಗಾಗ ಕಾಟ ಕೊಡುತ್ತಿದ್ದ. ಈ ಬಗ್ಗೆ ತಿಳಿ ಹೇಳಿದರೂ ಆತ ಸುಮ್ಮನಾಗಿರಲಿಲ್ಲ. ಬುದ್ಧಿವಾದ ಹೇಳಿದ್ದರೂ ಜಪ್ಪಯ್ಯ ಎಂದಿರಲಿಲ್ಲ. ತನ್ನ ಬಳಿ ಫೋಟೋಗಳಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಬಿಡುವುದಾಗಿ ಬೆದರಿಕೆ ಹಾಕಿದ್ದ. ಎಂಗೇಜ್ಮೆಂಟ್ ಆದ ಮೇಲೂ ಆತ ಕಾಟ ಕೊಟ್ಟಿದ್ದ. ನಾಗುನ ಕಾಟದಿಂದಲೇ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಂದೆ ವಿಶ್ವನಾಥ ಸುತಾರ ಆರೋಪಿಸಿದ್ದಾರೆ.
ಇದನ್ನೂ ಓದಿ :
ಕಾಂಗ್ರೆಸ್, ಜೆಡಿಎಸ್ ಬೆಂಬಲದ ಮಧ್ಯೆಯೂ ವಿಜಯಪುರದಲ್ಲಿ ಕೇವಲ ಪ್ರತಿಭಟನೆಗೆ ಸೀಮಿತವಾದ ಬಂದ್
ಮತ್ತೊಂದೆಡೆ ಮೃತರ ಪೈಕಿ ಓರ್ವಳು ನಾಗುನನ್ನು ಪ್ರೀತಿಸುತ್ತಿದ್ದಳೆಂಬ ಎನ್ನಲಾಗಿದೆ. ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆಯವರ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆಂದು ಹೀಗೆ ಮಾಡಿಕೊಂಡಿರಬಹುದೆಂದೂ ಹೇಳಲಾಗುತ್ತಿದೆ. ಆದರೆ ಮತ್ತೊಬ್ಬ ಸಹೋದರಿ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ನಿಗೂಢವಾಗಿಯೇ ಉಳಿದಿದೆ.
ವಿಷಯ ತಿಳಿದ ಸಬ್ಇನ್ಸ್ಪೆಕ್ಟರ್ ರಾಜಶೇಖರ ರಾಠೋಡ ಸ್ಥಳಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಚಿಂಚೋಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by:
G Hareeshkumar
First published:
December 8, 2020, 7:53 PM IST