ತವರಿನಿಂದ ಬೆಂಗಳೂರಿಗೆ ಬರುವಾಗ ಮಕ್ಕಳೊಂದಿಗೆ ಬಸ್​ನಲ್ಲಿಯೇ ಸಜೀವ ದಹನವಾದ ಸಹೋದರಿಯರು!

ಸುಮಾರು 15 ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಶೀಲಾ ರವಿ ಪಡುಕೋಟೆ ಅವರ ಮನೆಯ ಪಕ್ಕದಲ್ಲಿಯೇ ಕವಿತಾ ಅವರೂ ತಮ್ಮ ಗಂಡ ಹಾಗೂ ಮಗಳೊಂದಿಗೆ ವಾಸವಾಗಿದ್ದರು.  ಎರಡು ತಿಂಗಳ ಬಳಿಕ ತವರು ಮನೆಯಿಂದ ಗಂಡನ ಮನೆಗೆ ಹೊರಟವರು ನಡುದಾರಿಯಲ್ಲಿಯೇ ಸಜೀವ ದಹನವಾಗಿದ್ದು ಮಾತ್ರ ದುರಂತಮಯವಾಗಿದೆ.

ಬಸ್ ಅವಘಡದಲ್ಲಿ ಸಜೀವ ದಹನಗೊಂಡನ ನಿಶ್ಚಿತಾ, ಶೀಲಾ, ಸಮೃದ್ದ, ಸ್ಪರ್ಷ ಮತ್ತು ಕವಿತಾ

ಬಸ್ ಅವಘಡದಲ್ಲಿ ಸಜೀವ ದಹನಗೊಂಡನ ನಿಶ್ಚಿತಾ, ಶೀಲಾ, ಸಮೃದ್ದ, ಸ್ಪರ್ಷ ಮತ್ತು ಕವಿತಾ

  • Share this:
ವಿಜಯಪುರ; ಲಾಕ್​ಡೌನ್​ ಹಿನ್ನೆಲೆಯಲ್ಲಿ ತವರಿಗೆ ಬಂದಿದ್ದ ಸಹೋದರಿಯರು ಮಕ್ಕಳೊಂದಿಗೆ ಶುಕ್ರವಾರದ ಪೂಜೆಗಾಗಿ ಬೆಂಗಳೂರಿಗೆ ಹೊರಟಿದ್ದರು. ಆದರೆ ಬೆಂಗಳೂರಿಗೆ ತಲುಪುವ ಮೊದಲೇ ಎಲ್ಲರೂ ದುರಂತ ಸಾವಿಗೀಡಾದರು.

ಇದು ಚಿತ್ರದುರ್ಗ ಜಿಲ್ಲೆಯಲ್ಲಿ ನಸುಕಿನ ಜಾವ ಸಂಭವಿಸಿದ ಖಾಸಗಿ ಬಸ್ ಬೆಂಕಿಗಾಹುತಿ ಪ್ರಕರಣದಲ್ಲಿ ಸಜೀವ ದಹನವಾದ ಐದು ಜನರ ಕಥೆ. ವಿಜಯಪುರದ 33 ವರ್ಷದ ಶೀಲಾ ರವಿ ಪಡುಕೋಟೆ ಮತ್ತು 29 ವರ್ಷದ ಕವಿತಾ ಸಹೋದರಿಯರು ಬೆಂಗಳೂರಿನಲ್ಲಿ ಸಂಸಾರಸಮೇತ ನೆಲೆಸಿದ್ದರು. ಕೊರೋನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಆಗಮಿಸಿದ್ದರು. ಶೀಲಾ ಅವರ ಗಂಡ ರವಿ ಪಡುಕೋಟೆ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯವರಾದರೆ, ಕವಿತಾ ಅವರ ಗಂಡನ ಮನೆ ಬೆಂಗಳೂರು. ಹೀಗಾಗಿ ಇಬ್ಬರೂ ಲಾಕ್​ಡೌನ್ ಹಿನ್ನೆಲೆಯಲ್ಲಿ ವಿಜಯಪುರದ ಗಣೇಶ ನಗರದಲ್ಲಿರುವ ತವರು ಮನೆಗೆ ಆಗಮಿಸಿದ್ದರು.

ನಿನ್ನೆ ಹಿಟ್ಟಿನಹಳ್ಳಿಗೆ ತೆರಳಿ ಮನೆ ದೇವರಿಗೂ ಪೂಜೆ ಸಲ್ಲಿಸಿದ್ದರು. ರಾತ್ರಿ ವಿಜಯಪುರ ನಗರದ ಗಣೇಶ ನಗರದಲ್ಲಿರುವ ಟ್ರಾವೆಲ್ಸ್ ಏಜೆನ್ಸಿ ಕಚೇರಿಯಿಂದ 9.30ರ ಸುಮಾರಿಗೆ ಕುಕ್ಕೆಶ್ರೀ ಖಾಸಗಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಇದಕ್ಕೂ ಮುಂಚೆ ಇದೇ ಕಚೇರಿ ಬಳಿ ಇದ್ದ ಕಿರಾಣಿ ಅಂಗಡಿಯಲ್ಲಿ ಮಕ್ಕಳಿಗೆ ಖಾದ್ಯಗಳನ್ನು ಖರೀದಿಸಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಆದರೆ, ಇವರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸು ರಾತ್ರಿ ಚಿತ್ರದುರ್ಗದ ಬಳಿ ಬೆಂಕಿಗೆ ಆಹುತಿಯಾಗಿತು. ಬೆಂಕಿ ಅನಾಹುತ ಗೊತ್ತಾಗುತ್ತಿದ್ದಂತೆ ಖಾಸಗಿ ಬಸ್ಸಿನ ಚಾಲಕ ಬಸ್ಸಿನಿಂದ ಇಳಿದು ಓಡಿ ಹೋದರೆ, ಉಳಿದವರು ಹರಸಾಹಸ ಪಟ್ಟು ಜೀವ ಉಳಿಸಿಕೊಂಡಿದ್ದಾರೆ. ಆದರೆ, ಶೀಲಾ ರವಿ ಪಡುಕೋಟೆ ಮತ್ತು ಮತ್ತು ಅವರ ಮಕ್ಕಳಾದ 8 ವರ್ಷದ ಸ್ಪರ್ಶ, 5 ವರ್ಷದ ಸಮೃದ್ಧ ಮತ್ತು ಕವಿತಾ ವಿನಾಯಕ ಹಾಗೂ ಅವರ ಮಗಳು ನಿಶ್ಚಿತಾ ಸಜೀವ ದಹನವಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಇವರ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಿಟ್ಟಿನಹಳ್ಳಿಯಲ್ಲಿ ಶೀಲಾ ಅವರ ಗಂಡನ ಮನೆಯಲ್ಲಿ ಸಂಬಂಧಿಕರ ರೋಧನ ಕರಳು ಹಿಂಡುವಂತಿತ್ತು.

ಇದನ್ನು ಓದಿ: Chitradurga Fire: ಚಿತ್ರದುರ್ಗದ ಬಳಿ ಬೆಂಗಳೂರು ಬಸ್​ಗೆ ಬೆಂಕಿ; ಐವರು ಸಜೀವ ದಹನ, 30 ಪ್ರಯಾಣಿಕರು ಪಾರು

ಸುಮಾರು 15 ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಶೀಲಾ ರವಿ ಪಡುಕೋಟೆ ಅವರ ಮನೆಯ ಪಕ್ಕದಲ್ಲಿಯೇ ಕವಿತಾ ಅವರೂ ತಮ್ಮ ಗಂಡ ಹಾಗೂ ಮಗಳೊಂದಿಗೆ ವಾಸವಾಗಿದ್ದರು.  ಎರಡು ತಿಂಗಳ ಬಳಿಕ ತವರು ಮನೆಯಿಂದ ಗಂಡನ ಮನೆಗೆ ಹೊರಟವರು ನಡುದಾರಿಯಲ್ಲಿಯೇ ಸಜೀವ ದಹನವಾಗಿದ್ದು ಮಾತ್ರ ದುರಂತಮಯವಾಗಿದೆ.
Published by:HR Ramesh
First published: