ಬೆಂಗಳೂರು: ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಈ ಪಕ್ಷಗಳು ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ, ಕ್ಷೇತ್ರದಲ್ಲಿ ಪಕ್ಷ, ಪಕ್ಷಗಳ ಕಾರ್ಯಕರ್ತರಲ್ಲಿ ಜಿದ್ದಾಜಿದ್ದಿ ಮಾತ್ರ ಜೋರಾಗಿದೆ. ಯಾರು ಏನೇ ಹೇಳಿದರೂ ಜೆಡಿಎಸ್ ಅಭ್ಯರ್ಥಿಯೇ ಗೆಲ್ಲೋದು ಅಂತಾ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ದಿವಂಗತ ಸತ್ಯನಾರಾಯಣ ಅವರ ಸಾವು ಪಕ್ಷವನ್ನ ಗೆಲ್ಲಿಸುತ್ತದೆ. ಆ ಕುಟುಂಬದ ಬಗ್ಗೆ ಕ್ಷೇತ್ರ ವ್ಯಾಪಿ ಇರುವ ಅನುಕಂಪವೇ ಗೆಲುವನ್ನ ತಂದು ಕೊಡಲಿದೆ ಎಂದು ಹೇಳಿಕೊಂಡು ಒಡಾಡುತ್ತಿದ್ದಾರೆ ಜೆಡಿಎಸ್ ಕಾರ್ಯಕರ್ತರು.
ಆದರೆ ಕಾಂಗ್ರೆಸ್ ಕಾರ್ಯಕರ್ತರ ಮಾತೇ ಬೇರೆಯದ್ದಾಗಿದೆ. ಈಗಾಗಲೇ ಮಾಜಿ ಸಚಿವ ಹಾಗೂ ಕಳೆದ ಬಾರಿ ಪರಾಜಿತ ಅಭ್ಯರ್ಥಿಯಾದ ಟಿ ಬಿ ಜಯಚಂದ್ರ ಅವರೇ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ಅಂತಾ ಒಮ್ಮತದ ತೀರ್ಮಾನವನ್ನ ರಾಜ್ಯ ಕೈ ನಾಯಕರು ಮಾಡಿದ್ದಾರೆ. ಕಳೆದ ಬಾರಿ ಜಯಚಂದ್ರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರ ವ್ಯಾಪಿ ಮೂಲಭೂತ ಸೌಕರ್ಯಗಳನ್ನ ಅಗತ್ಯ ಪ್ರಮಾಣದಲ್ಲಿ ಮಾಡಿದ್ದಾರೆ. ಕೆರೆಗಳಿಗೆ ನೀರು ಹರಿಸಿದ್ದಾರೆ. ಇಂತಹ ನಾಯಕನನ್ನ ಕಾರಣಾಂತರಗಳಿಂದ ಸೋಲಿಸಲಾಗಿದೆ. ಈ ಬೈ ಎಲೆಕ್ಸನ್ನಲ್ಲಿ ಜಯಚಂದ್ರ ಅವರ ಮೇಲೆಯೂ ಅನುಕಂಪವಿದೆ. ಈ ಅನುಕಂಪವೇ ಅವರನ್ನ ಗೆಲ್ಲಿಸಲಿದೆ ಅನ್ನೋದು ಕೈ ಕಾರ್ಯಕರ್ತರು ಹೇಳಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಇಷ್ಟೆಲ್ಲಾ ಆದಮೇಲೆ ಬಿಜೆಪಿ ಕಾರ್ಯಕರ್ತರು ಸುಮ್ಮನಿದ್ದಾರೆಯೇ? ಬೈ ಎಲೆಕ್ಸನ್ ದಿನಾಂಕ ಘೋಷಣೆಗೂ ಮುನ್ನವೇ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಸಿದ್ಧತೆ ನಡೆಸಿತ್ತು. ಹಾಗಾಗಿ ಅಭ್ಯರ್ಥಿ ಯಾರೇ ಆದರೂ ಗೆಲುವು ಬಿಜೆಪಿಯದ್ದೇ ಎಂದು ಅಂತಿದ್ದಾರೆ ಬಿಜೆಪಿ ಕಾರ್ಯಕರ್ತರು. ಕೇಂದ್ರ ಮೋದಿ ಸರ್ಕಾರದ ವರ್ಚಸ್ಸು ಹಾಗೂ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ವರ್ಚಸ್ಸು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿದೆ ಅನ್ನುವ ವಿಶ್ವಾಸ ಬಿಜೆಪಿ ಕಾರ್ಯಕರ್ತರದ್ದು, ಹಾಗಾಗಿ ಶಿರಾ ಕ್ಷೇತ್ರದಲ್ಲಿ ಕದನ ನಡೆಯುತ್ತಿರುವುದು ಅನುಕಂಪ ಹಾಗೂ ವರ್ಚಸ್ಸಿನ ನಡುವೆ. ಈ ಮಿನಿ ವಾರ್ನಲ್ಲಿ ಅನುಕಂಪ ಗೆಲ್ಲುತ್ತಾ ಅಥವಾ ವರ್ಚಸ್ಸು ಗೆಲ್ಲುತ್ತಾ ಅನ್ನೋದನ್ನ ಮತದಾರ ನಿರ್ಧರಿಸಲಿದ್ದಾನೆ.
ವರದಿ: ಶ್ರೀನಿವಾಸ ಹಳಕಟ್ಟಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ