ಈ ನೀರಾವರಿ ಯೋಜನೆಗೆ ಸಾವಿರಾರು ಕೋಟಿ ಖರ್ಚಾದರೂ ಹನಿ ನೀರೂ ಸಿಕ್ಕಿಲ್ಲ

ಸಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಯ 3 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶವಿತ್ತು. ಇದಕ್ಕೆ 3 ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯವಾದರೂ ನೀರು ಸಿಕ್ಕಿಲ್ಲ.

ನೀರಿನ ಕಾಲುವೆ

ನೀರಿನ ಕಾಲುವೆ

  • Share this:
ಕೊಪ್ಪಳ: ಇದೊಂದು ನೀರಾವರಿ ಯೋಜನೆಯಾಗಿದ್ದು, ಕೊಪ್ಪಳ ಹಾಗು ಗದಗ ಜಿಲ್ಲೆಯಲ್ಲಿ 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಾಗುತ್ತಿದೆ ಎಂದು ಹೇಳಲಾಗಿತ್ತು. ಯೋಜನೆ ಉದ್ಘಾಟನೆಯಾಗಿ 5 ವರ್ಷವಾದರೂ ಒಂದು ಎಕರೆ ನೀರಾವರಿಯಾಗಿಲ್ಲ. ಈ ಯೋಜನೆಗಾಗಿ ಇಲ್ಲಿಯವರೆಗೂ 3100 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ, ಆದರೂ ಪ್ರಯೋಜನವಾಗಿಲ್ಲ. ಈ ಮಧ್ಯೆ ಕಾಲುವೆಗಾಗಿ ಭೂಮಿ ಕಳೆದು ಕೊಂಡ ರೈತರಿಗೆ ಪರಿಹಾರವನ್ನೂ ಸಹ ನೀಡಿಲ್ಲ. ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು ನ್ಯಾಯಾಂಗ ತನಿಖೆಯಾಗಬೇಕೆಂದು ರೈತರು ಆಗ್ರಹಿಸಿದ್ದಾರೆ. ಇಲ್ಲಿ ಹನಿ ನೀರಾವರಿ ಬದಲು ಕಾಲುವೆ ಮುಖಾಂತರ ನೀರಾವರಿ ಸೌಲಭ್ಯ ಒದಗಿಸಿ ಎಂಬುದು ರೈತರ ಒತ್ತಾಯ.

ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ 18 ಟಿಎಂಸಿ ಸಾಮರ್ಥ್ಯ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಕೊಪ್ಪಳ, ಗದಗ ಹಾಗು ಬಳ್ಳಾರಿ ಜಿಲ್ಲೆಯ ಸುಮಾರು 3 ಲಕ್ಷ ಎಕರೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಇದರಲ್ಲಿ ಸಿಂಗಟಾಲೂರು ಆಣೆಕಟ್ಟೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ 35 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಆದರೆ ಕೊಪ್ಪಳ ಹಾಗು ಗದಗ ಜಿಲ್ಲೆಯಲ್ಲಿ 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕನಸಿನ ಮಾತಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು; ಬರಮಾಡಿಕೊಂಡ ಸಿಎಂ ಬೊಮ್ಮಾಯಿ, ರಾಜ್ಯಪಾಲರು

ತುಂಗಭದ್ರಾ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡ ಹಿನ್ನೀರಿನ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ 1992 ರಲ್ಲಿ ಅಂದಿನ ಸರಕಾರ ಸಿಂಗಟಾಲೂರು ಯೋಜನೆಗೆ ಚಾಲನೆ ನೀಡಲಾಗಿದೆ. ಅಂದು ಕೇವಲ 63 ಕೋಟಿ ರೂಪಾಯಿ ಯೋಜನೆ ಇದಾಗಿತ್ತು. ಆಣೆಕಟ್ಟೆ ನಿರ್ಮಾಣವಾದ ನಂತರ 2014 ರಲ್ಲಿ ಒಟ್ಟು 5768 ಕೋಟಿ ರೂಪಾಯಿಯಲ್ಲಿ ಗದಗ, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2.65 ಲಕ್ಷ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರು ನೀಡುವ ಯೋಜನೆ ಸಿದ್ದವಾಯಿತು. ಈ ಮಧ್ಯೆ 2016 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕದಾಂಪುರದಲ್ಲಿ ರೈತರ ಭೂಮಿಗೆ ನೀರು ನೀಡುವ ಯೋಜನೆಗೆ ಚಾಲನೆ ನೀಡಿದರು. ಚಾಲನೆ ನೀಡಿದ ನಂತರ ಎಲ್ಲಿಯೂ ನೀರಾವರಿ ಸೌಲಭ್ಯ ಒದಗಿಸಲಾಗಿಲ್ಲ. ಐದು ವರ್ಷವಾದರೂ ಒಂದು ಎಕರೆಯೂ ನೀರಾವರಿಯಾಗಿಲ್ಲ.

ಈ ಹನಿ ನೀರಾವರಿಗಾಗಿ ಗುತ್ತಿಗೆದಾರರು ಇಲ್ಲಿಯವರೆಗೂ 3100 ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಅವರ ಲೆಕ್ಕದಲ್ಲಿಯೇ 10800 ಹೆಕ್ಟರ್ ಪ್ರದೇಶದಲ್ಲಿ ಹನಿನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಎಡದಂಡೆ ನಾಲೆಗೆ ಒಂದು ಎಕರೆಯೂ ನೀರಾವರಿಯಾಗುತ್ತಿಲ್ಲ ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Coronavirus: ಬೇರೆ ರಾಜ್ಯದಿಂದ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ ಹಿಂದಿರುಗಲು ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ..!

ಈ ಮಧ್ಯೆ ಎಡದಂಡೆ ನಾಲೆಗಾಗಿ ಕೊಪ್ಪಳ ತಾಲೂಕಿನಲ್ಲಿ ಸುಮಾರು ಸಾವಿರಕ್ಕೂ ಅಧಿಕ ಎಕರೆ ಪ್ರದೇಶವನ್ನು ನಾಲೆಗೆ ಭೂಮಿ ಸ್ವಾದೀನ ಪಡಿಸಿಕೊಂಡಿದ್ದಾರೆ. ಭೂಮಿ ಸ್ವಾದೀನ ಪಡಿಸಿಕೊಂಡು 7 ವರ್ಷವಾದರೂ ಭೂ ಪರಿಹಾರ ನೀಡಿಲ್ಲ. ಒಂದು ಕಡೆ ಭೂಮಿಗೆ ನೀರು ಬರುತ್ತಿಲ್ಲ. ಇನ್ನೊಂದು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಗದೆ ಅಲೆದಾಡುವಂಥ ಸ್ಥಿತಿ ಇದೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಕೇಳಿದರೆ ಈ ಬಗ್ಗೆ ಪರಿಶೀಲಿಸಿ ಹನಿ ನೀರಾವರಿಯ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುವುದು. ಈಗ ಟೆಂಡರ್ ಆಗಿದೆ, ಇಲ್ಲಿಯವರೆಗೂ ನೆನೆಗುದಿಗೆ ಬಿದ್ದ ಯೋಜನೆಯಲ್ಲಿ ತ್ವರಿತವಾಗಿ ಮುಗಿಸಲು, ಯೋಜನೆ ಪರಿಷ್ಕರಿಸಲು ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: