ವಿಜಯಪುರ (ಮಾ. 24): ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ ಜೆಡಿಎಸ್ ಸೇರ್ಪಡೆಯಾಗುವ ಮೂಲಕ ಸಿಂದಗಿ ಬೈ ಎಲೆಕ್ಷನ್ ಚುನಾವಣೆಗೆ ರಂಗು ಬಂದಿದೆ. ಮಾಜಿ ಸಚಿವ ಮತ್ತು ಜೆಡಿಎಸ್ ಶಾಸಕರಾಗಿದ್ದ ಎಂ. ಸಿ. ಮನಗೂಳಿ ನಿಧನರಾದ ಹಿನ್ನೆಲೆಯಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯಲಿದೆ. ಆದರೆ, ಚುನಾವಣೆ ಘೋಷಣೆ ಆಗದಿದ್ದರೂ ಕಾಂಗ್ರೆಸ್ ಈಗಾಗಲೇ ಮಾಜಿ ಸಚಿವ ಎಂ. ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಈಗಾಗಲೇ ಟಿಕೆಟ್ ನೀಡಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ.
ಇದೀಗ ಮಾಜಿ ಶಾಸಕ ಮತ್ತು ಮೂರು ಬಾರಿ ಇಂಡಿಯಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ರವಿಕಾಂತ ಪಾಟೀಲ ಮತ್ತು ಚಾಂದಕವಟೆ ಜಿ. ಪಂ. ಪಕ್ಷೇತರ ಸದಸ್ಯ ಗುರುರಾಜ ಪಾಟೀಲ ದಿಢೀರಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಪಕ್ಷ ಸಂಘಟನೆ ಹಿನ್ನಲೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಸಿಂದಗಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಸಭೆಗೆ ಆಗಮಿಸಿದ ಮಾಜಿ ಶಾಸಕ ರವಿಕಾಂತ ಪಾಟೀಲ ಮತ್ತು ಜಿ. ಪಂ. ಪಕ್ಷೇತರ ಸದಸ್ಯ ಗುರುರಾಜ ಪಾಟೀಲ ಜೆಡಿಎಸ್ ಗೆ ಸೇರ್ಪಡೆಯಾದರು. ಇದರಿಂದಾಗಿ ಜೆಡಿಎಸ್ ಹೊರೆ ಇಳಿಸಿ ಕಾಂಗ್ರೆಸ್ ಕೈ ಹಿಡಿದಿರುವ ಅಶೋಕ ಮನಗೂಳಿ ಅವರಿಗೆ ಸೆಡ್ಡು ಹೊಡೆಯಲು ಜೆಡಿಎಸ್ ಗೆ ಶಕ್ತಿ ಬಂದಂತಾಗಿದೆ.
ರವಿಕಾಂತ ಪಾಟೀಲ ಈ ಹಿಂದೆ ಮೂರು ಬಾರಿ ಇಂಡಿ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಶಾಸಕಾರಾಗಿದ್ದಾಗ ಇವರು ಪ್ರತಿನಿಧಿಸುತ್ತಿದ್ದ 40 ಗ್ರಾಮಗಳು ಈಗ ಸಿಂದಗಿ ಮತಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಹೀಗಾಗಿ ಹಳೆಯ ಹುಮ್ಮಸ್ಸಿನಲ್ಲಿ ಗತವೈಭವ ಕಂಡುಕೊಳ್ಳಲು ರವಿಕಾಂತ ಪಾಟೀಲ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ, ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಜೆಡಿಎಸ್ ಗೆ ಈಗ ರವಿಕಾಂತ ಪಾಟೀಲ ಮತ್ತು ಗುರುರಾಜ ಪಾಟೀಲ ಸೇರ್ಪಡೆಯಾಗಿರುವುದು ಪಕ್ಷ ಸಂಘಟನೆಗೆ ಮತ್ತು ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಗಳು ಸಿಕ್ಕಂತಾಗಿದೆ.
ಇದನ್ನು ಓದಿ: ಮಹಾರಾಷ್ಟ್ರದ ಗೃಹ ಸಚಿವರ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
ಅಶೋಕ ಮನಗೂಳಿ ಪ್ರಬಲ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದರೆ, ರವಿಕಾಂತ ಪಾಟೀಲ ಮತ್ತು ಗುರುರಾಜ ಪಾಟೀಲ ಕೂಡ ಇದೇ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಕ್ಕರೂ ಪೂಡ ಲಿಂಗಾಯಿತ ಪಂಚಮಸಾಲಿ ಸಮುದಾಯದ ಮತಗಳು ವಿಭಜನೆಯಾಗುವ ಮತ್ತು ಬಿಜೆಪಿ ಅಭ್ಯರ್ಥಿಗೆ ವರದಾನವಾಗುವ ಲೆಕ್ಕಾಚಾರದ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ