ವಿಜಯಪುರ: ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಹಾವೇರಿಯ ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ (Sindagi) ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (M C Managooli) ನಿಧನದಿಂದಾಗಿ ವಿಜಯನಗರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇದೀಗ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು, ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇಂದು ಸಹ ಮೂರು ಪಕ್ಷಗಳ ಪ್ರಮುಖ ನಾಯಕರು ಸಿಂದಗಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಸಿಂದಿಗಿಯಲ್ಲಿ ಬೀಡುಬಿಟ್ಟಿದ್ದು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದಿನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಉಪಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಯಾವ ಪಕ್ಷದಿಂದ ಯಾರೆಲ್ಲಾ ಇಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಎರಡು ದಿನ ಬಿಎಸ್ವೈ ಪ್ರಚಾರ
ಇಂದು ಸಿಂದಗಿ ಚುನಾವಣಾ ಕಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಧುಮುಕಲಿದ್ದಾರೆ. ಎರಡು ದಿನ ಸಿಂದಗಿಯಲ್ಲಿ ವಾಸ್ತವ್ಯ ಹೂಡಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಮೋರಟಗಿ ಗ್ರಾಮದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಗೋಲಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿ ಗ್ರಾಮಗಳ ಕಾರ್ಯಕರ್ತರ ಸಾರ್ವಜನಿಕರ ಸಭೆ ನಡೆಸಲಿದ್ದಾರೆ. ಬಿಎಸ್ವೈ ಅವರಿಗೆ ಸಚಿವರು, ಜಿಲ್ಲಾ ಶಾಸಕರು ಸಾಥ್ ನೀಡಲಿದ್ದಾರೆ.
ಜೆಡಿಎಸ್ ಪ್ರಚಾರ
ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಪ್ರಚಾರ ಮಾಡಲಿದ್ದಾರೆ. ಬೆಳಿಗ್ಗೆ 11.30 ಕ್ಕೆ ಬಳಗಾನೂರು ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಸಂಜೆ
4 ಗಂಟೆಗೆ ಚಾಂದಕವಟೆ ಗ್ರಾಮದಲ್ಲಿ ಸಾರ್ವಜನಿಕ ಸಭೆ ಮಾಡಲಿದ್ದಾರೆ. ಸಂಜೆ 6 ಕ್ಕೆ ಆಲಮೇಲ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಸಹ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.
ಕಾಂಗ್ರೆಸ್ ಪ್ರಚಾರ
ಇಂದು ಸ್ಥಳೀಯ ಕಾಂಗ್ರೆಸ್ ಶಾಸಕರು ಅಭ್ಯರ್ಥಿ ಅಶೋಕ್ ಮನಗೂಳಿ ಪರ ಪ್ರಚಾರ ಮಾಡಲಿದ್ದಾರೆ. ಶಾಸಕರಾದ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ರಿಂದ ಮತಯಾಚನೆ ಮಾಡಲಿದ್ದಾರೆ.
ಇದನ್ನು ಓದಿ: ಅಭ್ಯರ್ಥಿ ಗತಿ ಇಲ್ಲದೆ ಮನಗೂಳಿ ಪುತ್ರನನ್ನು Congress ಹೈಜಾಕ್ ಮಾಡಿತು, ಕಾಕಾನ ಸಾಧನೆ ಕಸಿದುಕೊಳ್ಳಲಾಗದು: HD Kumaraswamy
ಸೋಮವಾರ ಪ್ರಚಾರ ಮಾಡಿದ್ದ ಹಾಲಿ ಹಾಗೂ ಮಾಜಿ ಸಿಎಂಗಳು
ಸೋಮವಾರ ಹಾಲಿ ಸಿಎಂ ಹಾಗೂ ಮೂವರು ಮಾಜಿ ಸಿಎಂಗಳು ತಮ್ಮ ಅಭ್ಯರ್ಥಿ ಪರವಾಗಿ ಮತ ಬೇಟೆ ನಡೆಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ, ಕುಮಾರಸ್ವಾಮಿ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಸಿದ್ದರಾಮಯ್ಯ ಸಾಲು ಸಾಲು ಬಹಿರಂಗ ಪ್ರಚಾರ ಸಭೆ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ಪರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿಂದಗಿ ಕ್ಷೇತ್ರದ ಹಳ್ಳಿಗಳಲ್ಲಿ ಎಚ್ಡಿಕೆ ಪ್ರಚಾರ ಮಾಡಿದರು. ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಆಲಮೇಲ ಪಟ್ಟಣದ ಎ ಕೆ ನಂದಿ ಪ್ರೌಢಶಾಲೆಯಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ