ಗದಗ: ಇಷ್ಟು ದಿನ ಕಳ್ಳರು, ಮನೆ ಬೀಗ ಮುರಿದು, ಮನೆಯಲ್ಲಿನ ಒಡವೆ, ಹಣ ಕದ್ದುಕೊಂಡು ಹೋಗ್ತಿದ್ದರು. ಈಗ ಅದನ್ನೆಲ್ಲ ಬಿಟ್ಟು. ಹೊಸ ವರಸೆ ಶುರು ಮಾಡಿಕೊಂಡಿದ್ದಾರೆ. ಅದೇನಪ್ಪ ಅಂದ್ರೆ ಪೆಟ್ರೋಲ್ ಕದಿಯೋಕೆ ಶುರು ಮಾಡಿಕೊಂಡಿದ್ದಾರೆ.
ಪೆಟ್ರೋಲ್ ಬೆಲೆ ಈಗಾಗಲೇ ಗಗನಕ್ಕೇರಿದೆ. 1 ಲೀಟರ್ ಪೆಟ್ರೋಲ್ ಬೆಲೆ ಈಗ ನೂರರ ಸಮೀಪದಲ್ಲಿ ಇದೆ. ಹೀಗಾಗಿ ದುಬಾರಿ ಪೆಟ್ರೋಲ್ ಬೆಲೆ ಸದ್ಯ ಕಳ್ಳರಿಗೆ ದಾರಿ ತೋರಿಸಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಲ್ಲಿ ಪೆಟ್ರೋಲ್ ರಾತ್ರೋರಾತ್ರಿ ಮಂಗಮಾಯ ಆಗ್ತಿದೆ. ಗದಗ ಬೆಟಗೇರಿ ನಗರದಲ್ಲಿ ಈಗ ಪೆಟ್ರೋಲ್ ಖದೀಮರ ಹಾವಳಿ ಹೆಚ್ಚಾಗಿದೆ. ನಿತ್ಯ ಹತ್ತಾರು ಬೈಕ್ ಗಳಲ್ಲಿನ ಪೆಟ್ರೋಲ್ ರಾತ್ರೋರಾತ್ರಿ ಮಂಗಮಾಯ ಆಗ್ತಿದೆ.
ಬೆಳಿಗ್ಗೆ ಹಾಕಿಸಿದ್ದ ಪೆಟ್ರೋಲ್ ರಾತ್ರಿ ಹೊತ್ನಲ್ಲಿ ಇರೋದೆ ಇಲ್ಲ. ನೋಡಿದ್ರೆ ಟ್ಯಾಂಕ್ ಖಾಲಿಯಾಗಿರುತ್ತೆ. ಅವಳಿ ನಗರದ ಗಂಗಾಪುರಪೇಟೆ, ಜವಳ ಗಲ್ಲಿ ಅಜಾದ್ ರೋಡ್ ಗಳಲ್ಲಿ ಸುಮಾರು 8 ಬೈಕ್ ಗಳಲ್ಲಿನ ಪೆಟ್ರೋಲ್ ಅನ್ನ ಕಳ್ಳರು ಖದ್ದು ಪರಾರಿಯಾಗಿದ್ದಾರೆ. ಮೂರರಿಂದ ನಾಲ್ಕು ಜನರ ಒಂದು ತಂಡವಿದ್ದು ಅವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಲ್ಲಿನ ಪೆಟ್ರೋಲ್ ನ್ನ ಖದ್ದು ಬೈಕ್ ಸವಾರರ ನಿದ್ದೆಗೆಡಿಸುತ್ತಿದ್ದಾರಂತೆ. ನಿನ್ನೆ ರಾತ್ರಿ ವೇಳೆ ಗಂಗಾಪುರ ಪೇಟೆಯಲ್ಲಿನ ಮಲ್ಲಪ್ಪ ಬಿಂಗಿ ಅನ್ನುವವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲ್ ಕಳ್ಳತನ ಮಾಡುವ ವೇಳೆ ಮನೆಯವರು ಎಚ್ಚರಗೊಂಡು ಲೈಟ್ ಹೊತ್ತಿಸಿದಾಗ ಮನೆಯವರು ಎಚ್ಚರಗೊಂಡಿದ್ದನ್ನ ಅರಿತ ಕಳ್ಳರು ಬೈಕ್ ನೊಳಗೆ ಬಾಟಲ್ ಬಿಟ್ಟು ಪರಾರಿಯಾಗಿದ್ದಾರೆ.
ಬಳಿಕ ಮನೆಯವರು ಎದ್ದು ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಇನ್ನು ಪೆಟ್ರೋಲ್ ಕದಿಯುವಾಗ ಪೆಟ್ರೋಲ್ ಸರಬರಾಜು ಮಾಡೋ ಪೈಪನ್ನು ಕಟ್ಟು ಮಾಡಿ ಪೆಟ್ರೋಲ್ ಕದಿಯುತ್ತಿದ್ದಾರೆ. ಪೆಟ್ರೋಲ್ ಕದಿಯುವ ಜಾಗದಲ್ಲಿ ಯಾವುದೇ ಸಿಸಿಟಿವಿ ಇರದಿರುವ ಜಾಗವನ್ನ ಆಯ್ಕೆ ಮಾಡಿಕೊಂಡಿರ್ತಾರೆ. ಸಣ್ಣ ಪುಟ್ಟ ಗಲ್ಲಿಗಳಲ್ಲಿ ಹೊರಗಡೆ ಯಾರೂ ಮಲಗದೇ ಇರೋದನ್ನ ಗಮನಿಸುತ್ತಾರೆ. ಹೀಗೆ ಎಲ್ಲವನ್ನೂ ನೋಡಿಕೊಂಡೇ ಪ್ಲಾನ್ ಮಾಡ್ತಿದ್ದಾರೆ.
ಸದ್ಯ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದಂತೆ ಹೊರಗಡೆ ಬೈಕ್ ಬಿಟ್ಟು ಮಲಗೋದಕ್ಕೆ ಬೈಕ್ ಸವಾರರು ಹೆದುರುತ್ತಿದ್ದಾರೆ. ಯಾಕೆಂದರೆ ಮೊದಲೆ ಪೆಟ್ರೋಲ್ ದರ ಏರಿಕೆ ಯಾಗಿದೆ. ಹಣ ಇರುವಾಗ ಪೆಟ್ರೋಲ್ ಹಾಕಿಸಿಕೊಂಡಿರ್ತಾರೆ. ಆದ್ರೆ ಈಗ ಕಳ್ಳರವ ಹಾವಳಿಗೆ ಸವಾರರು ನಿದ್ದೆ ಮಾಡದಂತಾಗಿದೆ. ಇನ್ನು ಈ ಪೆಟ್ರೋಲ್ ಖದೀಮರ ಹಾವಳಿ ಹೆಚ್ಚಾಗೋದಕ್ಕೆ ನಗರದಲ್ಲಿ ಪೊಲೀಸರ ಗಸ್ತು ಇಲ್ಲದಿರುವುದಕ್ಕೆ ಹೀಗಾಗ್ತಿದೆ ಅಂತ ಜನ ಆರೋಪಿಸ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ