ಮಲೈ ಮಹದೇಶ್ವರಬೆಟ್ಟ: 400 ಕೆಜಿ ಅನುಪಯುಕ್ತ ಬೆಳ್ಳಿ ಕರಗಿಸಿ ಶುದ್ದ ಗಟ್ಟಿಗಳನ್ನು ಮಾಡುವ ಪ್ರಕ್ರಿಯೆ ಆರಂಭ

ಚಾಮರಾಜನಗರದಲ್ಲಿರುವ ಪುರಾಣ ಪ್ರಸಿದ್ಧ ಮಲೈ ಮಹದೇಶ್ವರ ದೇಗುಲಕ್ಕೆ ಬೆಳ್ಳಿ ರಥ ನಿರ್ಮಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ದೇವಸ್ಥಾನದ ಖಜಾನೆಯಲ್ಲಿರುವ ಸುಮಾರು 400 ಕಿಲೋನಷ್ಟು ಅನುಪಯುಕ್ತ ಬೆಳ್ಳಿ ವಸ್ತುಗಳನ್ನ ಕರಗಿಸಿ ಶುದ್ಧ ಬೆಳ್ಳಿ ಗಟ್ಟಿ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಮಲೈ ಮಹದೇಶ್ವರ ದೇವಸ್ಥಾನದ ಖಜಾನೆಯಲ್ಲಿದ್ದ ಬೆಳ್ಳಿ ವಸ್ತುಗಳ ಲೆಕ್ಕ

ಮಲೈ ಮಹದೇಶ್ವರ ದೇವಸ್ಥಾನದ ಖಜಾನೆಯಲ್ಲಿದ್ದ ಬೆಳ್ಳಿ ವಸ್ತುಗಳ ಲೆಕ್ಕ

  • Share this:
ಚಾಮರಾಜನಗರ: ಮಲೈಮಹದೇಶ್ವರ ದೇಗುಲದ ಖಜಾನೆಯಲ್ಲಿದ್ದ 400 ಕೆಜಿ ಅನುಪಯುಕ್ತ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ದ ಬೆಳ್ಳಿ ಗಟ್ಟಿಗಳನ್ನು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ವೇಳೆ ಶತಮಾನಗಳಷ್ಟು ಹಳೆಯದಾದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಮಹದೇಶ್ವರನಿಗೆ ಬೆಳ್ಳಿ ರಥ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದ್ದು ಇದಕ್ಕೆ ಬೇಕಾಗುವ ಬೆಳ್ಳಿಯನ್ನು ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆಯಲು ಮಲೈಮಹದೇಶ್ವರಸ್ವಾಮಿ‌ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನಿರ್ಧರಿಸಿ ಆ ಕಾರ್ಯವೂ ನಡೆಯುತ್ತಿತ್ತು. ಈ ನಡುವೆ ದೇಗುಲದ ಖಜಾನೆ‌ಯಲ್ಲಿರುವ  ಬೆಳ್ಳಿ ವಸ್ತುಗಳನ್ನು‌ ಕರಗಿಸಿ ಅದನ್ನೇಕೆ ಬೆಳ್ಳಿರಥ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು ಎಂದು ಚಿಂತಿಸಿದ ಪ್ರಾಧಿಕಾರ ಬೆಳ್ಳಿ ಕರಗಿಸುವ ಪರಿಣಿತರನ್ನು ದೇವಾಲಯಕ್ಕೇ ಕರೆಸಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮಕ್ಷಮ ಬೆಳ್ಳಿ ಕರಗಿಸಿ ಶುದ್ದ ಬೆಳ್ಳಿಗಟ್ಟಿಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ.

ನಾಲ್ಕು ಕ್ವಿಂಟಾಲ್​ನಷ್ಟಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ದ ಬೆಳ್ಳಿ ಗಟ್ಟಿಗಳನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಮಾಡುವ ದೃಷ್ಟಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದರ ಜೊತೆಗೆ ಎರಡು ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.‌ "ಬೆಳ್ಳಿ ಕರಗಿಸುವ ಪ್ರಕ್ರಿಯೆಗೆ 3 ರಿಂದ 4 ದಿನ ಹಿಡಿಯಲಿದೆ. ಇದರಿಂದ ಬರುವ ಗಟ್ಟಿ ಬೆಳ್ಳಿ ಶೇಕಡಾ 100 ಶುದ್ಧ‌ ಇರುವುದಿಲ್ಲ. ಸುಮಾರು ಶೇಕಡಾ 70 ರಿಂದ‌ 80 ಶುದ್ಧ ಬೆಳ್ಳಿ ಬರಬಹುದು" ಎಂದು ನ್ಯೂಸ್ 18 ಗೆ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ‌ ತಿಳಿಸಿದರು.

ಇದನ್ನೂ ಓದಿ: ಚಾಮರಾಜ‌ಗರ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ!

ಬೆಳ್ಳಿಯ ಶುದ್ದತೆಯನ್ನು ಪರೀಕ್ಷಿಸಲು ಮಾಡಲು ಪ್ರತ್ಯೇಕ ಉಪಕರಣವಿದ್ದು, ಶುದ್ದತೆ ಪರೀಕ್ಷಿಸಿದ ನಂತರ, ಈ ಗಟ್ಟಿ ಬೆಳ್ಳಿಯನ್ನು ಸರ್ಕಾರಿ ಸಂಸ್ಥೆಗೆ ನೀಡಿ, ಅದಕ್ಕೆ ಸರಿಸಮನಾದ ಶೇ. 100 ರಷ್ಟು ಶುದ್ಧ ಬೆಳ್ಳಿಯನ್ನು ಪಡೆದು ದೇವಾಲಯದಲ್ಲಿ ಶೇಖರಿಸಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಬೆಳ್ಳಿ ರಥ ನಿರ್ಮಾಣಕ್ಕೆ ಭಕ್ತರು ಈಗಾಗಲೇ‌ ಶುದ್ಧಬೆಳ್ಳಿ ಗಟ್ಟಿಗಳನ್ನೂ ನೀಡಿದ್ದು, ಅದನ್ನು ಈಗಾಗಲೇ ಸಂಗ್ರಹಿಸಿಡಲಾಗಿದೆ. ಈಗ ಬರುವ ಶುದ್ಧ ಬೆಳ್ಳಿ ಗಟ್ಟಿಯನ್ನೂ ಒಟ್ಟು ಮಾಡಿ ಈ ತಿಂಗಳ ಕೊನೆಯ ವಾರದಿಂದ ಬೆಳ್ಳಿ ತೇರು ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜಯವಿಭವಸ್ವಾಮಿ ಹೇಳಿದರು.

ದೇಗುಲದ ಖಜಾನೆಯಲ್ಲಿದ್ದ ಬೆಳ್ಳಿ ವಸ್ತುಗಳ ಪೈಕಿ ಅಪರೂಪದ ಹಳೆಯ ಕಾಲದ ನಾಣ್ಯಗಳು ಮತ್ತು ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಬಹುದಾದ ಕೆಲವು ವಸ್ತುಗಳು‌ ಪತ್ತೆಯಾಗಿವೆ. ನೂರಾರು ವರ್ಷಗಳಷ್ಟು ಹಳೆಯದಾದ ಬೆಳ್ಳಿ ನಾಣ್ಯಗಳು, ನಾಲ್ಕೈದು ಶತಮಾನಗಳ ಹಿಂದಿನ ಅಪರೂಪದ ಬೆಳ್ಳಿ ವಸ್ತುಗಳು ಕಂಡು ಬಂದಿದ್ದುಅವುಗಳನ್ನು  ಬೇರ್ಪಡಿಸಿ, ಪಟ್ಟಿ ಮಾಡಿ ಮತ್ತೆ ಖಜಾನೆಯೊಳಗೆ‌ ಇಡಲಾಗುವುದು. ಇತಿಹಾಸ ಕಾರರಿಂದ ಈ ಬೆಳ್ಳಿ ನಾಣ್ಯಗಳು ಹಾಗು ವಸ್ತುಗಳು ಯಾವ ಕಾಲದ್ದೆಂದು ಪಟ್ಟಿ ಮಾಡಿಸಿ, ನಂತರದ‌ ದಿನದಲ್ಲಿ ವಸ್ತು ಸಂಗ್ರಹಾಲಯ ಮಾಡಿದಾಗ ಸಾರ್ವಜನಿಕರ‌‌ ದರ್ಶನಕ್ಕೆ ಪ್ರದರ್ಶನಕ್ಕೆ ಇಡಲು ಪ್ರಾಧಿಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ: HD Kumaraswamy: ಬಿಜೆಪಿ ಸರ್ಕಾರ ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ; ಕುಮಾರಸ್ವಾಮಿ ಆರೋಪ

2021 ರಜುಲೈ ಅಥವಾ ಆಗಸ್ಟ್ ತಿಂಗಳಿನ ಒಳಗೆ ಪೂರ್ಣಪ್ರಮಾಣದಲ್ಲಿ ಬೆಳ್ಳಿ ತೇರು  ನಿರ್ಮಿಸಿ ಲೋಕಾರ್ಪಣೆ ಮಾಡುವ ಗುರಿಯನ್ನು ಪ್ರಾಧಿಕಾರ ಹೊಂದಿದೆ. ಬೆಳ್ಳಿ ರಥ ನಿರ್ಮಾಣಕ್ಕೆ 500 ರಿಂದ 600 ಕೆ.ಜಿ.ಶುದ್ದ ಬೆಳ್ಳಿ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು ಭಕ್ತರು  ಈಗಲೂ ಸಹಾ ಶುದ್ಧ ಬೆಳ್ಳಿಯನ್ನು ಕೊಡುಗೆಯನ್ನಾಗಿ ನೀಡಬಹುದು. ಇದಕ್ಕೆ ಯಾವುದೇ ಊರಿನಲ್ಲಿ ಪ್ರತಿನಿಧಿ ಅಥವಾ‌ ಏಜೆಂಟ್ ನೇಮಿಸಿರುವುದಿಲ್ಲ. ನೇರವಾಗಿ ದೇವಾಲಯಕ್ಕೆ ಬಂದು ದೇವಾಲಯದ ಪಾರುಪತ್ತೇಗಾರರಿಗೆ ನೀಡಿ ರಸೀದಿ ಪಡೆಯಬೇಕು ಎಂದು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದರು.

ವರದಿ: ಎಸ್.ಎಂ.ನಂದೀಶ್
Published by:Vijayasarthy SN
First published: