HOME » NEWS » District » SIDDI COMMUNITY SHANTHARAM NOMINATED AS MLC AND RESPECTED IN SIDDI COMMUNITY HK

ಕಾನನದ ಹಕ್ಕಿ ಶಾಂತರಾಮ ವಿಧಾನ ಪರಿಷತ್​ಗೆ ನೇಮಕ ; ಸಿದ್ಧಿ ಸಮುದಾಯದ ಮೊದಲ ಎಂಎಲ್​​ಸಿ ಗೌರವ

ಇಡೀ ಸಿದ್ದಿ ಸಮುದಾಯದಲ್ಲೆ ಶಾಸಕ ಸ್ಥಾನದ ಗರಿ ಹೊಂದಿದ ಮೊದಲ ವ್ಯಕ್ತಿ ಕೂಡಾ ಇವರಾಗಿದ್ದಾರೆ. ಹೀಗಾಗಿ ಸಿದ್ಧಿ ಸಮುದಾಯ ಬಿಜೆಪಿಗೆ ಅಭಿನಂದನೆ ಸಲ್ಲಿಸಿದೆ

news18-kannada
Updated:July 23, 2020, 4:19 PM IST
ಕಾನನದ ಹಕ್ಕಿ ಶಾಂತರಾಮ ವಿಧಾನ ಪರಿಷತ್​ಗೆ ನೇಮಕ ; ಸಿದ್ಧಿ ಸಮುದಾಯದ ಮೊದಲ ಎಂಎಲ್​​ಸಿ ಗೌರವ
ವಿಧಾನ ಪರಿಷತ್​ ಸದಸ್ಯ ಶಾಂತಾರಾಮ ಸಿದ್ದಿ
  • Share this:
ಕಾರವಾರ(ಜುಲೈ.23): ತಳಮಟ್ಟದ ವ್ಯಕ್ತಿ, ಪ್ರಾಮಾಣಿಕ, ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಬಿಜೆಪಿ ಪಕ್ಷ ಅಚ್ಚರಿ ಮೂಡಿಸಿದೆ. ಹಿಂದುಳಿದ ಬುಡಕಟ್ಟು ಸಮಾಜದ ಸಿದ್ದಿ ಸಮುದಾಯಕ್ಕೆ ಸೇರಿದ ಶಾಂತಾರಾಮ ಸಿದ್ದಿ ಹೆಸರಿನ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಪುರ್ಲೆಮನೆ ಪುಟ್ಟ ಊರಿನ ವ್ಯಕ್ತಿ, ಈಗ ಇವರನ್ನು ರಾಜ್ಯ ಸರ್ಕಾರ ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಿದೆ.

ಕಾನನದ ಹಕ್ಕಿಗೆ ಈಗ ರಾಜಧಾನಿ ಸುತ್ತುವ ಅವಕಾಶವನ್ನು ಬಿಜೆಪಿ ಪಕ್ಷ ನೀಡಿದೆ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿರುವ ಶಾಂತರಾಮ ಸಿದ್ದಿ ತಳಮಟ್ಟದ ಬಿಜೆಪಿ ಕಾರ್ಯಕರ್ತ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ವ್ಯಕ್ತಿ, ಜತೆಗೆ ತೀರಾ ಹಿಂದುಳಿದ ಬುಡಕಟ್ಟು ಜನಾಂಗ ಸಿದ್ದಿ ಸಮುದಾಯದಿಂದ ಬಂದಾತ, ಸಿದ್ದಿ ಸಮುದಾಯದಲ್ಲೇ ಮೊದಲ ಪದವಿ ಪಡೆದ ವ್ಯಕ್ತಿ ಕೂಡಾ ಹೌದು, ತನ್ನ ಸಿದ್ದಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನಿರಂತರ ಹೋರಾಟ ಮಾಡಿಕೊಂಡು ಬಂದವರು. ಇದೆಲ್ಲದರ ಶ್ರಮವನ್ನು ಬಿಜೆಪಿ ಪಕ್ಷ ಗುರುತಿಸಿ, ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಗೌರವಿಸಿದೆ.

ಇವರು ಈ‌ ಮೊದಲು ವನವಾಸಿ ಕಲ್ಯಾಣ ಸಂಸ್ಥೆಯನ್ನ ರಾಜ್ಯದಲ್ಲಿ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಪಗಿ ಗ್ರಾಮದಿಂದ ಆರಂಭ ಮಾಡಿದರು, ಈಗ ರಾಜ್ಯಾದ್ಯಂತ ವಿಶಾಲವಾಗಿ ಬೆಳೆದಿರುವ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ವನವಾಸಿ ಕಲ್ಯಾಣ ಸಂಸ್ಥೆಯನ್ನ ಕಳೆದ 32 ವರ್ಷದ ಹಿಂದೆ ಕರ್ನಾಟಕದಲ್ಲಿ ಮೊಟ್ಟ ಮೊದಲು ಬೆಳಕಿಗೆ ತಂದ ಕೀರ್ತಿ ಶಾಂತಾರಾಮ ಸಿದ್ದಿಗೆ ಸಲ್ಲುತ್ತದೆ.

ಈ ಸಂಸ್ಥೆ ಮೂಲಕ ಬುಡಕಟ್ಟು ಜನಾಂಗದ ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಸಾವಿರಾರು ಬುಡಕಟ್ಟು ಜನರಿಗೆ  ವಸತಿ ನಿಲಯದಲ್ಲಿ ಇಟ್ಟು ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಿ ಇವತ್ತು ಸಾವಿರಾರು ಜನ ಶಿಕ್ಷಣ ಪಡೆದು ಮುನ್ನೆಲೆಗೆ ಬಂದಿದ್ದಾರೆ. ಬಳಿಕ ಇವರು ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರು ಹಾಗು ಕೊಂಕಣಿ‌ ಅಕಾಡಮಿಯ ಸದಸ್ಯರಾಗಿ, ಕಾರ್ಯ ನಿರ್ವಹಿಸಿದ್ದಾರೆ. ವನವಾಸಿ ಕಾಲ್ಯಾಣ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ತಂದ ಬಳಿಕವೇ ಇವತ್ತು ಬುಡಕಟ್ಟು ಜನಾಂಗದ ಒಂದಿಷ್ಟು ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿದೆ.

ಸಿದ್ದಿ ಸಮುದಾಯ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ದಾಂಡೇಲಿ, ಭಾಗದಲ್ಲಿ ವಾಸವಾಗಿದ್ದಾರೆ. ಕೇವಲ‌ ಕಾಡಿನ ಮದ್ಯೆ ನಾಲ್ಕು ಚೌಕಟ್ಟಿನಲ್ಲೆ ಇದ್ದ ಜಮೀನಿನಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಂಡವರು, ಕೃಷಿ ಬಿಟ್ಟರೆ ಇವರಿಗೆ ಬೇರೆ ಕಾಯಕದ ಬಗ್ಗೆ ಮಾಹಿತಿ ಕಡಿಮೆ. ಶಿಕ್ಷಣದಲ್ಲಿ ಮುನ್ನಲೆಗೆ ಬಂದವರು ಕೇವಲ‌ ಬೆರಳೆಣಿಕೆ ಜನ‌ಮಾತ್ರ. ಹೀಗೆ ಹತ್ತು ಹಲವು ವಿಭಾಗದಲ್ಲಿ ಸಿದ್ದಿ ಸಮುದಾಯ ಇವತ್ತು ಕಾನನದ ಮದ್ಯೆ ಬದುಕು ಕಟ್ಟಿಕೊಂಡವರಾಗಿದ್ದಾರೆ.ಆದರೆ, ಇವತ್ತು ಇವರನ್ನ ರಾಜಕೀಯವಾಗಿ ರಾಜಧಾನಿಯಲ್ಲಿ ಗುರುತಿಸಿದ್ದು ಹೆಮ್ಮೆಯ ಸಂಗತಿ.

ಇದನ್ನೂ ಓದಿ :  ಕಾರ್ಮಿಕರ ವಿರೋಧದ ನಡುವೆಯೂ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ

ಯಾವುದೇ ರಾಜಕೀಯ ಪ್ರಭಾವ ಬಳಸದೆ ಕಾಡಿನಲ್ಲಿ ಬದುಕು ಕಳೆಯುತ್ತಿದ್ದ ಸಿದ್ದಿ ಜನಾಂಗದ ಅಭಿವೃದ್ದಿಗಾಗಿ ಹಾಗು ಹಸಿರು ಉಳಿವಿಗಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟಿದ್ದ ಶಾಂತರಾಮ ಸಿದ್ದಿ ಅವರಿಗೆ ಈ ಹುದ್ದೆ ಸಿಕ್ಕಿರುವುದು ಸಿದ್ದಿ ಸಮುದಾಯಕ್ಕೆ ಸಿಕ್ಕ ಗೌರವವಾಗಿದೆ.

ಇಡೀ ಸಿದ್ದಿ ಸಮುದಾಯದಲ್ಲೆ ಶಾಸಕ ಸ್ಥಾನದ ಗರಿ ಹೊಂದಿದ ಮೊದಲ ವ್ಯಕ್ತಿ ಕೂಡಾ ಇವರಾಗಿದ್ದಾರೆ. ಹೀಗಾಗಿ ಇಡೀ ಸಿದ್ಧಿ ಸಮುದಾಯ ಬಿಜೆಪಿಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸಿದೆ.
Published by: G Hareeshkumar
First published: July 23, 2020, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories