ಕೋಲಾರ (ಏಪ್ರಿಲ್ 03) :2023 ರ ವಿಧಾನಸಭೆ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುತ್ತಾರೆಂದು ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದ್ದಾರೆ. ಕೋಲಾರದ ಪ್ರವಾಸಿ ಮಂದಿರದಲ್ಲಿ ಈ ಬಗ್ಗೆ ಸ್ವಯಂ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರು, ಕೋಲಾರದ ಹಿತದೃಷ್ಟಿಯಿಂದ ಅವರನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದೇವೆ. ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಕೊಟ್ಟವರು ಸಿದ್ದರಾಮಯ್ಯ. ಹೀಗಾಗಿ ಅವರನ್ನು ಕೋಲಾರಕ್ಕೆ ಬರುವಂತೆ ಒತ್ತಾಯ ಮಾಡಿದ್ದೇವೆ. ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಬರುವುದರಿಂದ ಪಕ್ಷದ ಸಂಘಟನೆ ಆಗಲಿದ್ದು, ಜಿಲ್ಲೆಯು ಅಭಿವೃದ್ಧಿ ಆಗಲಿದೆ. ನಾನು ಸೇರಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಎಲ್ಸಿ ನಜೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ ಎಲ್ಲರೂ ಒತ್ತಾಯ ಮಾಡಿದ್ದೇವೆ ಎಂದರು.
ಇನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗು ಡಾ ಜಿ ಪರಮೇಶ್ವರ ಅವರ ಬಳಿ ನಾನು ಆತ್ಮೀಯವಾಗಿರುವುದರಿಂದ ನನಗೆ ಇರುವ ಮಾಹಿತಿ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಈ ವಿಚಾರವಾಗಿ ನೀವು ಸಿದ್ದರಾಮಯ್ಯ ಅವರ ಜೊತೆಗೆ ಮಾತನಾಡಿದ್ದೀರಾ ಎಂದಿದ್ದಕ್ಕೆ, ಅವರೇ ಹೇಳಿಲ್ಲ, ಇದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಶಾಸಕ ನಾರಾಯಣಸ್ವಾಮಿ ಉತ್ತರಿಸಿದರು.
ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರದ ಕಾಂಗ್ರೆಸ್ ನಲ್ಲೇ ವಿರೋಧ ?: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರ ಜಿಲ್ಲೆಯಾದ್ಯಂತ ಚರ್ಚೆಯಲ್ಲಿದ್ದು, ಸಿದ್ದರಾಮಯ್ಯ ರನ್ನ ಆತ್ಮೀಯವಾಗಿ ಸ್ವಾಗತಿಸುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ, ಆದರೆ ಕೋಲಾರದ ಕೆಲ ಅಲ್ಪಸಂಖ್ಯಾತ ಕೈ ನಾಯಕರು ಮಾತ್ರ ಇದನ್ನು ವಿರೋದಿಸಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು ಮುಂದಿನ ಚುನಾವಣೆಯಲ್ಲೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಅಲ್ಪಸಂಖ್ಯಾತ ವರ್ಗದ ನಾಯಕರು ಆಗ್ರಹಿಸಿದ್ದಾರೆ.
ಕೈ ಟಿಕೆಟ್ ಗಾಗಿ ಅಭ್ಯರ್ಥಿಗಳ ಪೈಪೋಟಿ, ವರ್ತೂರು ಕಟ್ಟಿಹಾಕಲು ಹೇಳಿಕೆ ನೀಡಿದರೆ ಶಾಸಕರು ?: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದರು. ಬಾದಾಮಿ ಕ್ಷೇತ್ರದಲ್ಲಿ ಗೆದ್ದಿರುವ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ, ಆದರೂ ನನಗೆ ರಾಜಕೀಯ ಭವಿಷ್ಯ ಮುಂದುವರೆಸಲು ಬಾದಾಮಿ ಜನತೆ ಸಹಕಾರ ನೀಡಿದ್ದೀರಿ ಎಂದು ಆಗಾಗ ಹೇಳುತ್ತಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರ ಕ್ಷೇತ್ರ ಬದಲಾವಣೆ ಹೇಳಿಕೆ ವಿಚಾರ, ಕೇವಲ ಹೇಳಿಕೆಗೆ ಸೀಮಿತವಾಗಿಯೆ ಎನ್ನುವ ಅನುಮಾನ ಕಾಡುತ್ತಿದೆ. ಕೋಲಾರ ಕೈ ಟಿಕೆಟ್ ಗಾಗಿ ಮಾಜಿ ಶಾಸಕ ವರ್ತೂರು ಪ್ರಕಾಶ್ ಹರಸಾಹಸ ಪಡುತ್ತಿದ್ದು, ಇತ್ತ ಅಲ್ಪ ಸಂಖ್ಯಾತ ನಾಯಕರು ಸಾಲುಗಟ್ಟಿ ನಿಂತಿದ್ದಾರೆ, ಜೊತೆಗೆ ಸಾಮಾನ್ಯ ವರ್ಗದ ನಾಯಕರು ಟಿಕೆಟ್ ಗಾಗಿ ಪೈಪೋಟಿಗೆ ಇಳಿದಿದ್ದು, ಸಮರ್ಥ ನಾಯಕತ್ವದ ಕೊರತೆಯಿಂದ ಇನ್ನೂ ಮುಂಚೂಣಿ ಅಭ್ಯರ್ಥಿಗಳು ಯಾರೆಂದು ತಿಳಿದುಬಂದಿಲ್ಲ,
ಆದರೂ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಿ ಕೋಲಾರ ಟಿಕೆಟ್ ತರುವೆ ಎಂದು, ಸಾರಿ ಸಾರಿ ಹೇಳುತ್ತಿದ್ದು ಇದಕ್ಕೆ ಕಾಂಗ್ರೆಸ್ ಈಗಾಗಲೇ ಸೇರ್ಪಡೆಯನ್ನು ತಳ್ಳಿಹಾಕಿದೆ. ಹೀಗಾಗಿ ರಾಜ್ಯದಲ್ಲಿ ಬಲಾಡ್ಯ ನಾಯಕರೆಂದು ಗುರ್ತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿದರೆ, ಮುಂದೆ ಯಾವುದೇ ಗೊಂದಲಗಳು ಸೃಷ್ಡಿಯಾಗಲ್ಲ ಎನ್ನುವ ದೃಷ್ಟಿಯಿಂದ, ಶಾಸಕ ನಾರಾಯಣಸ್ವಾಮಿ ಅವರೇ ಖುದ್ದು ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿದ್ದಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, "ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ, ಅಷ್ಟೊತ್ತಿಗೆ ಯಾರ್ಯಾರು ಸಾಯದೆ ಬದುಕಿರುವರೊ ನೋಡೋಣ... ಅದೆಲ್ಲಾ ಈಗ ಚರ್ಚೆ ಮಾಡುವ ವಿಚಾರ ಅಲ್ಲ" ಎಂದು ಸ್ಪರ್ಧೆಯ ಕುರಿತ ಹೇಳಿಕೆಯನ್ನು ತಳ್ಳಿಹಾಕಿದರು.
ಒಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಮಾಸ್ ಲೀಡರ್, ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿದೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್ ಬಲಿಷ್ಠವಾಗುವ ದೃಷ್ಟಿಯಿಂದ, ಮತ್ತೊಮ್ಮೆ ಅಲ್ಪಸಂಖ್ಯಾತ ಮುಖಂಡರಿಗೆ ಟಿಕೆಟ್ ಕೊಡುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ