ಸ್ವಕ್ಷೇತ್ರದ ಹೆದ್ದಾರಿ ಕಾಮಗಾರಿಗೆ ಅನುದಾನ ಕೋರಿ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಸಿದ್ದರಾಮಯ್ಯ ಪತ್ರ

ಸಿದ್ದರಾಮಯ್ಯ ಸ್ವಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮತ್ತು ಅಗಲೀಕರಣಕ್ಕೆ ಅನುದಾನ ಕೋರಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ಡಿಸಿಎಂ ಗೋವಿಂದ ಕಾರಜೋಳರಿಗೆ ಪತ್ರ ಬರೆದಿರುವುದು ಗಮನಾರ್ಹ.

news18-kannada
Updated:July 10, 2020, 11:09 PM IST
ಸ್ವಕ್ಷೇತ್ರದ ಹೆದ್ದಾರಿ ಕಾಮಗಾರಿಗೆ ಅನುದಾನ ಕೋರಿ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಸಿದ್ದರಾಮಯ್ಯ ಪತ್ರ
ಸಿದ್ದರಾಮಯ್ಯ
  • Share this:
ಬಾಗಲಕೋಟೆ(ಜುಲೈ 10): ಕೊರೋನಾ ನಿರ್ವಹಣೆಯ ವೈದ್ಯಕೀಯ ಸಾಮಾಗ್ರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿ ಸರ್ಕಾರದ ನಿದ್ದೆಗೆಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ವಕ್ಷೇತ್ರದಲ್ಲಿನ ಕಾಮಗಾರಿಯೊಂದರ ಸಂಬಂಧ ಅನುದಾನಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಬಾದಾಮಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯ 29 ಕಿಮೀ ಉದ್ದದ ರಸ್ತೆಯ ದುರಸ್ತಿ ಮತ್ತು ಅಗಲೀಕರಣಕ್ಕೆಂದು ಕೇಂದ್ರ ಸಾರಿಗೆ ಸಚಿವ, ರಾಜ್ಯ ಲೋಕೋಪಯೋಗಿ ಸಚಿವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದ ವೇಳೆ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಗೂ ಸಚಿವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಸಮರದ ಮೂಲಕ ಸ್ವಕ್ಷೇತ್ರಕ್ಕೆ ಅನುದಾನ ಕೋರಿ ಒತ್ತಡ ಹಾಕಿ ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದರು. ಮೈತ್ರಿ ಸರ್ಕಾರ ಪತನದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೂ ಸಿಎಂ ಯಡಿಯೂರಪ್ಪ, ಹಾಗೂ ಸಚಿವರಿಗೆ ಪತ್ರ ಬರೆಯುವ ಮೂಲಕ ಅನುದಾನ ತಂದಿದ್ದಾರೆ.

ಇನ್ನು ಬಜೆಟ್ ಮಂಡನೆ ಮುನ್ನ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಪತ್ರದ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇಡಿಕೆ ಪಟ್ಟಿ ಸಲ್ಲಿಸಿದ್ದರು. ಸಿದ್ದರಾಮಯ್ಯನವರು ಆಗಾಗ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೋರಿ ಸಚಿವರಿಗೆ ಪತ್ರ ಬರೆಯುವ ಮೂಲಕ ಒತ್ತಡ ಹಾಕಿ ಅನುದಾನ ತರುವುದು ವಾಡಿಕೆಯಾಗಿದೆ. ಇದೀಗ ಸಿದ್ದರಾಮಯ್ಯ ಕೊರೊನಾ ವೈರಸ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಪಕ್ಷದ ಸಚಿವರು, ಸಂಸದರು ಸಿದ್ದರಾಮಯ್ಯಗೆ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ವೃಕ್ಷತಪಸ್ವಿಯ ಸಾಧನೆ; ಮಾದವ್ ಉಳ್ಳಾಲ್ ಪರಿಸರ ಪ್ರೀತಿಗೆ ಅಪಾರ ಜನಮೆಚ್ಚುಗೆ

ಆದರೆ ಸಿದ್ದರಾಮಯ್ಯ ಬಿಜೆಪಿ ಮುಖಂಡರ ಮಾತಿಗೆ ಜಗ್ಗದೆ, ಟ್ವೀಟ್ ಮೂಲಕವೇ ಗುದ್ದಿದ್ದಾರೆ. ಬೀಳಗಿ ಕ್ಷೇತ್ರದ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಪೆನ್ ಡ್ರೈವ್​ನಲ್ಲಿ ಅವ್ಯವಹಾರದ ಮಾಹಿತಿಯಿದ್ದು ಕೇಳಿ ಪಡೆಯಿರಿ ಎಂದು ಟ್ವೀಟ್ ಅಸ್ತ್ರ ಬಿಟ್ಟಿದ್ದಾರೆ.ಇದರ ಮಧ್ಯೆಯೂ ಇದೀಗ ಸಿದ್ದರಾಮಯ್ಯ ಸ್ವಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮತ್ತು ಅಗಲೀಕರಣಕ್ಕೆ ಅನುದಾನ ಕೋರಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ಡಿಸಿಎಂ ಗೋವಿಂದ ಕಾರಜೋಳರಿಗೆ ಪತ್ರ ಬರೆದಿರುವುದು ಗಮನಾರ್ಹ.

ಕೊಪ್ಪಳದ ಭಾನಾಪೂರದಿಂದ ಗದ್ದನಕೇರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-367 ಬಾದಾಮಿ ಕ್ಷೇತ್ರದ  ಪ್ರವಾಸಿ ತಾಣಗಳ ಮೂಲಕ  ಹಾದು ಹೋಗುತ್ತದೆ. ಬನಶಂಕರಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಹೆದ್ದಾರಿ ವ್ಯಾಪ್ತಿಯ ಪಟ್ಟದಕಲ್ಲುದಿಂದ ಶಿರೂರು ಕ್ರಾಸ್ 29ಕಿಮೀ ಜಿಲ್ಲಾ ಕೇಂದ್ರ ಪ್ರವೇಶಿಸುವ ರಸ್ತೆಯ ದುರಸ್ತಿ, ಅಗಲೀಕರಣಕ್ಕೆ ತಗುಲುವ ಅನುದಾನ ಕೂಡಲೇ ಬಿಡುಗಡೆಗೊಳಿಸಿ ಆದೇಶಿಸಲು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ಸಿದ್ದರಾಮಯ್ಯ ಪತ್ರ ತಲುಪಿಲ್ಲ- ಕಾರಜೋಳ ಸಿದ್ದರಾಮಯ್ಯ ಬರೆದ ಪತ್ರದ ಬಗ್ಗೆ ಬಾಗಲಕೋಟೆಯಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ಸದ್ಯ ನನಗಂತೂ ಪತ್ರ ಬಂದಿಲ್ಲ. ಪತ್ರ ತಲುಪಿದ ನಂತರ ನೋಡೋಣ ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಆರೋಪಕ್ಕೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೊರೋನಾ ವೈರಸ್ ಪರಿಣಾಮ; ಬೆಳಗಾವಿ ಪ್ರಸಿದ್ಧ ಮಂಗಾಯಿ ದೇವಿ ಜಾತ್ರೆ ರದ್ದು

ಕಾಂಗ್ರೆಸ್ ಪಕ್ಷಕ್ಕೆ ಉದ್ಯೋಗದ ಕೊರತೆಯಿದೆ. ಹೀಗಾಗಿ ಚುನಾವಣಾ ಸಂದರ್ಭದಲ್ಲಿ ಸುಳ್ಳು ಹೇಳಿ ಮತ ಕೇಳಿದ ಹಾಗೇ ಕೊರೋನಾ ಸಂಕಷ್ಟದ ವಿಷಯದಲ್ಲಿಯೂ ಸಹ ರಾಜಕಾರಣ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಉದ್ಯೋಗ ಅಥವಾ ಕೆಲಸ ಕಾರ್ಯಗಳಿದ್ದರೆ ಆ ಪಕ್ಷದ ನಾಯಕರು ಕೊರೊನಾ ಸಂದರ್ಭದಲ್ಲಿ ಅಗ್ಗದ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಕೊರೊನಾಸಂಕಷ್ಟದ ಈ ಸಂದರ್ಭದಲ್ಲಿ ಕೊರೋನಾ ತಡೆಗಟ್ಟಲು ಹೋರಾಟ ನಡೆಸುತ್ತಿರುವ ವಾರಿಯರ್​ಗಳನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸುವುದನ್ನು ಬಿಟ್ಟು ಅಗ್ಗದ ರಾಜಕಾರಣ ಮಾಡಲು ಹೊರಟಿರುವುದು ಕಾಂಗ್ರೆಸ್ ಪಕ್ಷದಲ್ಲಿರುವ ಅನುಭವಿ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಆರಂಭದ ಸಂದರ್ಭದಲ್ಲಿ ಎದುರಿಸಲು ರಕ್ಷಣಾ ಸಾಮಗ್ರಿಗಳಾದ ಮಾಸ್ಕ್, ಸ್ಯಾನಿಟೈಜರ್, ಪಿಪಿಇ ಕಿಟ್ ಇರಲಿಲ್ಲ. ಆ ಸಂದರ್ಭದಲ್ಲಿ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂದು ಆರೋಗ್ಯ ಸಂಬಂಧಿಸಿದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿದರೆ ಅದು ಅವ್ಯವಹಾರ ಎಂದರೆ ಹೇಗೆ ಎಂದು ಪ್ರಶ್ನಿಸಿದ ಗೋವಿಂದ ಕಾರಜೋಳ, ಸರ್ಕಾರ ಕೊರೋನಾ ಸಂಬಂಧಿಸಿದಂತೆ ಈವರೆಗೆ 600 ಕೋಟಿ ರೂ ಒಳಗೆ ಮಾತ್ರ ಹಣ ಖರ್ಚು ಮಾಡಿದೆ. ಇದಕ್ಕೆ ವಿರೋಧ ಪಕ್ಷಗಳು 3 ಸಾವಿರ ಕೋಟಿ ರೂಗಳ ಅವ್ಯವಹಾರವಾಗಿದೆ ಎಂದರೆ ಹೇಗೆ? ಇದಕ್ಕಾಗಿಯೇ ನಾವು ಹೇಳುವುದು ವಿರೋಧ ಪಕ್ಷಗಳು ಅಗ್ಗದ ಪ್ರಚಾರ ಮಾಡುತ್ತಿವೆ ಎಂದು ಕುಟುಕಿದ್ದಾರೆ.ಕೊರೊನಾ ಸಂಬಂಧಿಸಿದ ಯಾವ ವ್ಯವಹಾರಗಳಲ್ಲಿಯೂ ಅವ್ಯವಹಾರವಾಗಿಲ್ಲ. ವಿನಾಕಾರಣ ಶಾಸಕ ಮುರಗೇಶ ನಿರಾಣಿ ಅವರನ್ನು ಮುಂದಿಟ್ಟುಕೊಂಡು ಸುಳ್ಳು ಹೇಳಲು ವಿರೋಧ ಪಕ್ಷಗಳು ಹೊರಟಿದ್ದವು. ಆದರೆ ಶಾಸಕ ಮುರಗೇಶ ನಿರಾಣಿಯವರು ಸಹ ಈ ಕುರಿತು ಸ್ಪಷ್ಟನೆ ನೀಡಿದ್ದರಿಂದ ವಿರೋಧ ಪಕ್ಷಗಳ ಮಾತಿಗೆ ಬೆಲೆ ನೀಡಬೇಕಾಗಿಲ್ಲ ಎಂದು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ.
Published by: Vijayasarthy SN
First published: July 10, 2020, 11:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading