news18-kannada Updated:November 12, 2020, 5:54 PM IST
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
ಕೊಡಗು(ನವೆಂಬರ್. 12): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಂಪೂರ್ಣವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನು ನೋಡಿದರೆ ಪಾಪ ಅಯ್ಯೋ ಎಂದೆನಿಸುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಕುಟುಕಿದ್ದಾರೆ. ಕೊಡಗಿನ ಕುಶಾಲನಗರ ಸಮೀಪದಲ್ಲಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಬದಲಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ನೇತೃತ್ವದಲ್ಲೇ ಉಪಚುನಾವಣೆಯಲ್ಲೂ ಗೆಲುವು ಸಾಧಿಸಿದ್ದೇವೆ. ಅಲ್ಲದೆ ಈಗ ಸಿಎಂ ಸ್ಥಾನ ಖಾಲಿ ಇಲ್ಲ ಮತ್ತು ಸಿಎಂ ಸ್ಥಾನದ ಬದಲಾವಣೆ ಎನ್ನುವುದು ನಮ್ಮ ಪಕ್ಷದೊಳಗಿನ ಆಂತರಿಕ ಚರ್ಚೆಯೂ ಅಲ್ಲ. ಮುಂದೆಯೂ ಯಡಿಯೂರಪ್ಪನವರೇ ಸಿಎಂ ಆಗಿ ಇರುತ್ತಾರೆ ಎಂದರು. ಸಿದ್ದರಾಮಯ್ಯನವರಿಗೆ ಅವರ ಸ್ಥಾನವನ್ನೇ ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷದವರ ಬಗ್ಗೆ ಮಾತನಾಡುವುದೇನು ಎಂದು ತಿರುಗೇಟು ನೀಡಿದರು.
ಇನ್ನು ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮತಾಂತರ ಮಾಡುವುದಕ್ಕಾಗಿಯೇ ಮದುವೆ ಆಗುವುದನ್ನು ತಡೆಗಟ್ಟುವುದಕ್ಕಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ. ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರುವ ವಿಷಯ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಇದೀಗ ಕಾನೂನು ತರುವುದಕ್ಕೆ ಕಾಲ ಕೂಡಿ ಬಂದಿದೆ. ಅಲಹಬಾದ್ ಕೋರ್ಟ್ ಕೂಡ ಲವ್ ಜಿಹಾದ್ ವಿರುದ್ಧ ತೀರ್ಪು ನೀಡಿದೆ. ಉತ್ತರ ಪ್ರದೇಶ ಸಿಎಂ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು. ಈಗಾಗಲೇ ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು ಎಂದರು.
ಮದುವೆಯಾಗಿ ಬಳಿಕ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದು ಸರಿಯಲ್ಲ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಹೀಗಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಗತ್ಯವಿದೆ ಎಂದು ಜನರಿಗೆ ಗೊತ್ತಿದೆ. ಹೀಗಾಗಿಯೇ ಎಲ್ಲಡೆ ಜನರು ಬಿಜೆಪಿಗೆ ಮತಹಾಕಿ ಗೆಲ್ಲಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ :
ಆತಂಕದ ಮಧ್ಯೆ ಬೆಳಕಿನ ಹಬ್ಬಕ್ಕೆ ಸಿದ್ಧತೆ: ಮಗಳೊಂದಿಗೆ ರಸ್ತೆ ಬದಿ ಹಣತೆ ಖರೀದಿಸಿ ಗಮನ ಸೆಳೆದ ಮಾಜಿ ಸಚಿವ
ಬಿಹಾರ ಚುನಾವಣೆ ಮತ್ತು ದೇಶದ ವಿವಿಧೆಡೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮಣಿಪುರ, ತೆಲಂಗಾಣಗಳಲೆಲ್ಲಾ ನಾವು ಗೆಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ ನಾವು ಗೆದ್ದಿದ್ದೇವೆ ಎಂದರೆ ಅದು ಜನರು ಬಿಜೆಪಿಯ ಅಭಿವೃದ್ಧಿ ಕೆಲಸಗಳನ್ನು ನೋಡಿ ಗೆಲ್ಲಿಸುತ್ತಿರುವುದು ಎಂದು ಹೇಳಿದರು.
ರಾಜ್ಯದ ಉಪಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಎಲ್ಲಾ ಸ್ಥಾನಗಳಲ್ಲೂ ಗೆದ್ದಿದ್ದೇವೆ. ಸಮ್ಮಿಶ್ರ ಸರ್ಕಾರಗಳೆಂದರೆ ಅವುಗಳು ಕೇವಲ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಪರದಾಡುತ್ತಿರುತ್ತವೆ. ಅವುಗಳಿಂದ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೀಗಾಗಿ ಜನರು ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ ಎಂದರು.
Published by:
G Hareeshkumar
First published:
November 12, 2020, 5:52 PM IST