ಚಿತ್ರದುರ್ಗ: ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಆಗಿರಲು ಅಯೋಗ್ಯ, ಯಾರ ಬಗ್ಗೆ ಯಾವ ನಾಯಕರ ಬಗ್ಗೆ ಯೋಗ್ಯತೆ ಇಟ್ಟುಕೊಂಡು ಮಾತಾಡಬೇಕು ಎಂಬ ಯೋಗ್ಯತೆ ಇಲ್ಲದಿರುವ ಮನುಷ್ಯ ಎಂದು ಚಿತ್ರದುರ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಬಂದಿದ್ದ ಸಚಿವ ಈಶ್ವರಪ್ಪ ಮಾಧ್ಯಮಗಳ ಜೊತೆ ಮಾತನಾಡಿದರು. ವಿನಯ್ ಕುಲಕರ್ಣಿ ವಶಕ್ಕೆ ಪಡೆದದ್ದು ರಾಜಕೀಯ ಪ್ರೇರಿತ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಅನೇಕರ ಮನೆ ಮೇಲೆ ರೇಡ್ ಆಯ್ತು. ಅನೇಕರ ಮೇಲೆ ಆಪಾದನೆಗಳೂ ಬಂತು. ಈಗಲೂ ಅವರವ ಕೆಲಸ ಅವರು ಮಾಡುತ್ತಿದ್ದಾರೆ. ಇಲ್ಲಂದ್ರೆ, ಇಡಿ , IT, ಸಿಬಿಐ ಎಲ್ಲವನ್ನೂ ಮುಚ್ಚಬೇಕಾಗುತ್ತದೆ. ಕಾಂಗ್ರೆಸ್ ನವರು ಆಕಾಶದಿಂದ ಉದುರಿ ಬಂದಿಲ್ಲ. ಅವರು ಕೊಲೆ ಮಾಡಿದ್ರೆ, ಇಡಿ ,ಹವಾಲಾ ಕೇಸಲ್ಲಿ ಸಿಕ್ಕರೇ ಅವರನ್ನು ಮುಟ್ಟಲೇಬಾರದು ಎಂದು ಸುಪ್ರೀಂ ಕೋರ್ಟ್ನಿಂದ ಆದೇಶ ತರೋಣ. ಇಲ್ಲಾ ಸಂವಿಧಾನದಲ್ಲಿ ತಿದ್ದುಪಡಿ ತರೋಣ. ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರಾಗಿ ಈ ರೀತಿ ಹೇಳಿಕೆ ಕೊಡುವುದು ಅನ್ಯಾಯ ಎಂದಿದ್ದಾರೆ.
ಇನ್ನೂ ನಳೀನ್ ಕುಮಾರ್ ಕಟೀಲ್ ಗೆ ಮೆಚುರಿಟಿ ಇಲ್ಲ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಆಗಿರಲು ಅಯೋಗ್ಯ. ಯಾರ ಬಗ್ಗೆ ಯಾವ ನಾಯಕರ ಬಗ್ಗೆ ಮಾತಾಡಬೇಕು ಎಂಬ ಯೋಗ್ಯತೆ ಇಲ್ಲದಿರುವ ಮನುಷ್ಯ, ಮೋದಿ, ಯಡಯೂರಪ್ಪ, ನಳೀನ್ ಕುಮಾರ್ ಬಗ್ಗೆ ಮಾತಾಡುತ್ತಾರೆ. ಅವರು ಬಹಳ ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯ ಆಗುತ್ತೇನೆ ಎಂಬ ಭ್ರಮಯಲ್ಲಿದ್ದಾರೆ, ರಾಜ್ಯದ ಜನ ಸಿಎಂ ಸ್ಥಾನಕ್ಕೆ ಕೂರಿಸಿದಾಗಲೂ ನೀವು ಬದಲಾಗಲಿಲ್ಲ. ಹಾಗಾಗಿ ಜನ ನಿಮ್ಮನ್ನ ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷವನ್ನೂ ಕಿತ್ತು ಹಾಕಿದರು. ಅಷ್ಟೇ ಅಲ್ಲದೇ ಚಾಮುಂಡೇಶ್ವರಿಯಲ್ಲಿ ನೀವು ಸೋತ್ರಿ. ಆದರೂ ಬುದ್ದಿ ಬಂದಿಲ್ಲ. ನಿಮಗೆ ಯಾವತ್ತು ಬುದ್ದಿ ಬರುತ್ತದೋ ನೋಡೋಣ ಎಂದು ತಿರುಗೇಟು ನೀಡಿದ್ದಾರೆ. ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯಗೆ ಮೋದಿಯವರು ನೇರವಾಗಿ ಹೇಳಿದ್ದಾರೆ. ಚುನಾವಣೆ ಮುಗಿತಾ ಇದ್ದಂತೆ ಯಡಯೂರಪ್ಪನ್ನ ಬದಲಾವಣೆ ಮಾಡ್ತಿನಿ ಅಂತ ಹೇಳ್ಬಿಟ್ಟಿದ್ದಾರಲ್ಲಾ? ಹಾಗಾಗಿ ಪಾಪ ಈ ರೀತಿ ಮಾತನಾಡುತ್ತಾರೆ, ಸಿದ್ದರಾಮಯ್ಯನವರ ಯಾವ ಹೇಳಿಕೆಗೂ ಅರ್ಥವೇ ಇರೋಲ್ಲ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ರಿಂದ, ಇಬ್ಬರ ಹಿಂಬಾಲಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಜಮೀರ್, ಡಿಕೆಶಿ ಸಿಎಂ ಸೌಮ್ಯರೆಡ್ಡಿ ಹೇಳುತ್ತಾರೆ. ಸಿಎಂ ಸ್ಥಾನ ಖಾಲಿ ಇಲ್ಲದಿದ್ದಕ್ಕೆ ಇವರಿಬ್ಬರೂ ತಿರುಕನ ಕನಸು ಕಾಣುತ್ತಿದ್ದಾರೆ. ಇಬ್ಬರಿಗೂ ಅರೋಪದ ಮೇಲೆ ಆರೋಪ ಪೈಪೋಟಿ ನಡೆಯುತ್ತಿದೆ. ಇವರಿಬ್ಬರ ಕನಸು ಹಗಲು ಕನಸು, ಅದು ಯಾವುದೇ ರೀತಿ ಯಶಸ್ಸು ಆಗಲ್ಲ ಎಂದು ಟಾಂಗ್ ನೀಡಿದರು.
ಇದನ್ನು ಓದಿ: ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ನಾಳೆ ಶಿವಮೊಗ್ಗಕ್ಕೆ ಪ್ರವಾಸ
ಈಶ್ವರಪ್ಪ ಎಡವಟ್ಟು
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಆಗಿರುವುದಂತೂ ಹೌದು. ಆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದು, ಅವರು ಯಾರನ್ನ ಅರೆಸ್ಟ್, ಮಾಡಬೇಕು ಬಿಡಬೇಕು ಎಂದು ತೀರ್ಮಾನಿಸುತ್ತಾರೆ ಎಂದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಎಂದು ಹೆಸರು ಬಳಸಬೇಕಿದ್ದ ಸಚಿವ ಈಶ್ವರಪ್ಪ, ಯೋಗೀಶ್ ಗೌಡ ಅವರನ್ನ ಅರೆಸ್ಟ್ ಮಾಡಿರುವುದನ್ನ ಸ್ವಾಗತಿಸುತ್ತೇನೆ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ. ವಿನಯ್ ಕುಲಕರ್ಣಿ ಹೆಸರಿನ ಬದಲು ಯೋಗೀಶ್ ಗೌಡ ಬಂಧನ ಎಂದು ಪದೇ ಪದೇ ಹೇಳಿ ಯಡವಟ್ಟು ಮಾಡಿ, ಕೊಲೆಯಲ್ಲಿ ಅವರು ಮುಕ್ತವಾಗಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ