ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ;‌ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಸಿದ್ದರಾಮಯ್ಯ ಮತಯಾಚನೆ

ನಾನು ಸಿಎಂ ಆಗಿದ್ದಾಗ‌ ಆರನೆಯ ವೇತನ ಆಯೋಗದ ವರದಿ ಯಥಾವತ್ ಜಾರಿಗೆ ತಂದಿದ್ದೇವೆ. ಇದರಿಂದ ಶಿಕ್ಷಕರಿಗೆ ಶೇ.30ರಷ್ಟು ಸಂಬಳ ಹೆಚ್ಚಾಗಿದೆ.‌ ಸವಾಲು ಹಾಕುವ ಬಸವರಾಜ್ ಹೊರಟ್ಟಿ ಬೇಕಿದ್ದರೆ ನನ್ನ ಜೊತೆ ಚರ್ಚೆಗೆ ಬರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

  • Share this:
ಹುಬ್ಬಳ್ಳಿ: ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಪರ ಮತಯಾಚನೆ ಮಾಡಿದರು. ಕಲಘಟಗಿ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಯಿತು‌. ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಜಮೀರ್‌ಅಹ್ಮದ್ ಖಾನ್, ಪ್ರಸಾದ್ ಅಬ್ಬಯ್ಯ, ಕಿಸುಮಾ ಶಿವಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ, ಸಿದ್ದರಾಮಯ್ಯನವರು "ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನಾನು ಸಿಎಂ ಆಗಿದ್ದಾಗ‌ ಆರನೆಯ ವೇತನ ಆಯೋಗದ ವರದಿ ಯಥಾವತ್ ಜಾರಿಗೆ ತಂದಿದ್ದೇವೆ. ಇದರಿಂದ ಶಿಕ್ಷಕರಿಗೆ ಶೇ.30ರಷ್ಟು ಸಂಬಳ ಹೆಚ್ಚಾಗಿದೆ.‌ ಸವಾಲು ಹಾಕುವ ಬಸವರಾಜ್ ಹೊರಟ್ಟಿ ಬೇಕಿದ್ದರೆ ನನ್ನ ಜೊತೆ ಚರ್ಚೆಗೆ ಬರಲಿ" ಎಂದು ಸವಾಲು ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, "ಆಡಳಿತ ನಡೆಸಲಾಗದ ಯಡಿಯೂರಪ್ಪ ಕುರ್ಚಿ ಬಿಟ್ಟು ಹೋಗಲಿ‌. ಯಡಿಯೂರಪ್ಪ ಯಾವುದೇ ಕೆಲಸಕ್ಕೂ ದುಡ್ಡು ಇಲ್ಲಾ ಅಂತಾರೆ. ನಾವು ಅಧಿಕಾರಕ್ಕೆ ಬಂದು ದುಡ್ಡು ಹುಟ್ಟುಹಾಕ್ತೀವಿ, ಹಣ ಜನರೇಟ್ ಮಾಡೋದು ನಮಗೆ ಗೊತ್ತಿದೆ. ಯಡಿಯೂರಪ್ಪನವರದ್ದು ವಸೂಲಿ ಭಾಗ್ಯ. ಉಳ್ಳವನೇ ಭೂಮಿಗೆ ಒಡೆಯ ಅನ್ನೋ ಕಾನೂನು ಮಾಡಿದ್ದಾರೆ.

ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್‌ಗೇ ಓಟ್ ಹಾಕೋದು. ಅಲ್ಪಸಂಖ್ಯಾತರು ಕೋಮುವಾದಿ ಬಿಜೆಪಿಗೆ ಓಟ್ ಹಾಕಲ್ಲಾ. ಬಿಜೆಪಿಯವರು ಲಜ್ಜೆಗೆಟ್ಟವರು, ಅವರಿಗೆ ಮಾನಮರ್ಯಾದೆ ಇಲ್ಲಾ. ಯಡಿಯೂರಪ್ಪನವರ ಮಗ ವಿಜಯೇಂದ್ರ‌ ಆರ್‌ಟಿಜಿಎಸ್ ಮೂಲಕ ಲಂಚ ತಗೊಳ್ತಾನೆ" ಎಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

"ನಾನು ದೇವೇಗೌಡರ ಕುಟುಂಬಕ್ಕೆ ಕಿರುಕುಳ ನೀಡಿದ್ರೆ ಅದನ್ನ ದೇವೇಗೌಡ್ರು ಹೇಳಲಿ. ಅದನ್ನಾ ಕೇಳೋಕೆ ನಳಿನ್ ‌ಕುಮಾರ್ ಕಟೀಲ್ ಯಾರ್ರಿ ಎಂದು", ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದೇವೇಗೌಡರ ಕುಟುಂಬಕ್ಕೆ ಸಿದ್ದರಾಮಯ್ಯ ಕಿರುಕುಳ ನೀಡಿದ್ದರು ಅನ್ನೋ ನಳಿನ್ ಕುಮಾರ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ನಳಿನ್ ‌ಕುಮಾರ್ ಕಟೀಲ್ ಹುಟ್ಟುವ ಮುನ್ನವೇ ದೇವೇಗೌಡರು ರಾಜಕೀಯ ಮಾಡುತ್ತಿದ್ದರು. ಕಿರುಕುಳ ನೀಡಿದ್ರೆ ಅವರೇ ಹೇಳಲಿ. ಕುಮಾರಸ್ವಾಮಿ ಸರ್ಕಾರ ಬೀಳಲು ಕಾಂಗ್ರಸ್ ಕಾರಣ ಅನ್ನುತ್ತಿರುವ ಅಶ್ವತ್ಥ್​ ನಾರಾಯಣ ಇಷ್ಟು ದಿನ ಯಾಕೆ ಬಾಯಿ ಮುಚ್ಕೊಂಡಿದ್ರು? ಚುನಾವಣೆಗಾಗಿ ಎಲ್ಲರೂ ಸುಳ್ಳು ಆರೋಪ ಮಾಡ್ತಿದ್ದಾರೆ.

ಇದನ್ನೂ ಓದಿ : ಲವ್​ ಜಿಹಾದ್​ ಪದ ಬಳಸಿ ವಿವಾದಕ್ಕೀಡಾದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ; ನೆಟ್ಟಿಗರಿಂದ ರಾಜೀನಾಮೆಗೆ ಒತ್ತಾಯ

ನಾನು ಕುಮಾರಸ್ವಾಮಿಗೆ ಕಿರುಕುಳ ಕೊಟ್ಟಿದ್ರೆ ಆಗಲೇ ಹೇಳಬೇಕಿತ್ತು. ಅಧಿಕಾರದಿಂದ ಕೆಳಗಿಳಿದು ಇಷ್ಟು ತಿಂಗಳ ನಂತರ ಹೇಳ್ತಿದ್ದಾರೆ. ‌ಅದಕ್ಕೇ ಕುಮಾರಸ್ವಾಮಿಯವರಿಗೆ ಹೇಳಿದ್ದು‌ ಕುಣಿಯಲು ಬಾರದವ್ರು ನೆಲ‌ ಡೊಂಕು ಅಂದ್ರಂತೆ. ನಾನು ಮುಂದಿನ ಮುಖ್ಯಮಂತ್ರಿ ಅನ್ನೋದನ್ನ ಜಮೀರ ಅಹ್ಮದ್ ಒಬ್ಬರೇ ನಿರ್ಧರಿಸಲ್ಲ. ಪಕ್ಷದ ಶಾಸಕರು, ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ" ಎಂದು ಸ್ಪಷ್ಟನೆ ನೀಡಿದ್ದಾರೆ.

"ಕೇಂದ್ರ ಸರ್ಕಾರ ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಕೊಟ್ಟಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ಕೊರೊನಾ ರೋಗ ಉಲ್ಭಣವಾಗಿದೆ, ಉದ್ಯೋಗ ನಷ್ಟವಾಗಿದೆ. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ನಿರುದ್ಯೋಗಿ ಯುವಕರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ಪದವೀಧರರ ಕ್ಷೇತ್ರದ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಬಾರಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಗೆಲ್ಲುವುದು ಖಚಿತ. ವಿಧಾನ ಪರಿಷತ್‌‌ಗೆ  ಚುನಾವಣೆ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ" ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by:MAshok Kumar
First published: