Siddaramaiah: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ; ಸಿದ್ದರಾಮಯ್ಯ ಘೋಷಣೆ

ಸಚಿವ ಉಮೇಶ್ ಕತ್ತಿ 5 ಕೆಜಿ ಅಕ್ಕಿ ಸಾಕು ಅಂತಾನೆ. ಅವನಿಗೆ ಶುಗರ್ ಇರಬೇಕು, ದುಡಿಯೋ ಜನರು ಹೊಟ್ಟೆ ತುಂಬಾ ಊಟ ಮಾಡಲಿ ಎಂದು 7 ಕೆಜಿ ಘೊಷಿಸಿದ್ದು ಎನ್ನುತ್ತಾ, ಸಚಿವ ಉಮೇಶ್ ಕತ್ತಿ ವಿರುದ್ದ‌ ಸಿದ್ದರಾಮಯ್ಯ ಅವರು ಏಕವಚನದಲ್ಲೆ ವಾಗ್ದಾಳಿ ನಡೆಸಿದರು.

ಕೋಲಾರದ ಮಾಲೂರಿನ ದೊಡ್ಡಶಿವಾರ ಕೆರೆಗೆ ಬಾಗಿನ  ಅರ್ಪಿಸಲು ಬಂದ ಮಾಜಿ ಸಿಎಂ ಸಿದ್ದರಾಮಯ್ಯ

ಕೋಲಾರದ ಮಾಲೂರಿನ ದೊಡ್ಡಶಿವಾರ ಕೆರೆಗೆ ಬಾಗಿನ ಅರ್ಪಿಸಲು ಬಂದ ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಕೋಲಾರ: ಕೋಲಾರದ ಮಾಲೂರಿನ ದೊಡ್ಡಶಿವಾರ ಕೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಬಾಗಿನ  ಅರ್ಪಿಸಿದ್ದಾರೆ, ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಘೋಷಿಸಿದ್ದ ಕೆಸಿ ವ್ಯಾಲಿ ಯೋಜನೆಯ (KC Vally Project) ಮೂಲಕ  ಸಂಸ್ಕರಿಸಿದ ನೀರನ್ನ ಮಾಲೂರಿನ ಕೆರೆಗಳಿಗೆ (Maluru Lake) ಹರಿಸಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಉತ್ತಮ ಮಳೆಯಾಗುತ್ತಿರುವ ಕಾರಣ, 40 ವರ್ಷಗಳಿಂದ ತುಂಬದ, ದೊಡ್ಡಶಿವಾರ ಕೆರೆ ತುಂಬಿ‌ ಕೋಡಿ ಹರಿದಿದೆ. ಬಾಗಿನ  ಅರ್ಪಿಸುವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ, ಶಾಸಕರಾದ ನಂಜೇಗೌಡ, ಎಸ್ ಎನ್ ನಾರಾಯಣಸ್ವಾಮಿ, ವಿಆರ್ ಸುದರ್ಶನ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ದೊಡ್ಡಶಿವಾರ ಗ್ರಾಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ  ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಭಾಗಿಯಾಗಿದ್ದರು. ತುಂಬಿದ ಕೆರೆಯನ್ನ ವೀಕ್ಷಿಸಲು, ಕೆರೆಕೋಡಿಯ ಮೇಲೆ ಕಾಲ್ನಡಿಗೆಯಲ್ಲಿ ಸಂಚರಿಸಿದ ಸಿದ್ದರಾಮಯ್ಯ ಅವರು, ಬಳಿಕ ಶಾಸ್ತ್ರೋಕ್ತವಾಗಿ ಕೆರೆಗೆ ಬಾಗಿನ ಅರ್ಪಿಸಿದರು. ಬಾಗಿನ ನಂತರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ,  ಸಿದ್ದರಾಮಯ್ಯರಿಗೆ  ಅಭಿಮಾನಿಗಳು ಬೆಳ್ಳಿ ಗದೆ ನೀಡಿ ಸ್ವಾಗತ ಕೋರಿದರು. ಇದೇ ವೇಳೆ ಮಾತನಾಡಿದ ಶಾಸಕ ಸಂಜೇಗೌಡ, ಕೋಲಾರ ಜಿಲ್ಲೆಯ ಪಾಲಿಗೆ ಕೆಸಿ ವ್ಯಾಲಿ ನೀರು ವರದಾನವಾಗಿದೆ ಎಂದು ಸಿದ್ದರಾಮಯ್ಯ ರನ್ನ ಹಾಡಿ ಹೊಗಳಿದರು.

ಜೆಡಿಎಸ್ ನವರು ಮಣ್ಣಿನ ಮಕ್ಕಳಾ ?  ಸಿದ್ದರಾಮಯ್ಯ ಲೇವಡಿ

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಜೆಡಿಎಸ್ ನವರು ರೈತರ ಬಗ್ಗೆ ಕಾಳಜಿ ಇದ್ದಂತೆ ಮಾತಾಡುತ್ತಾರೆ. ಆದರೆ ಎತ್ತಿನ ಹೊಳೆ ಯೋಜನೆಯನ್ನ ಇದೇ ಮಣ್ಣಿನ ಮಕ್ಕಳು ವಿರೋಧಿಸಿದ್ದಾರೆ ಎಂದು ಆರೋಪಿಸಿದರು. ಕೆಸಿ ವ್ಯಾಲಿ ಯೋಜನೆಯ ವಿರುದ್ದ ಇದೇ ಮಣ್ಣಿನ ಮಕ್ಕಳು ಟೀಕೆ ಮಾಡಿದ್ದರು. ಜೊತೆಗೆ ಕೆಲವರನ್ನ ಎತ್ತಿ ಕಟ್ಟಿ ಯೋಜನೆಯ ವಿರುದ್ದ ಸುಳ್ಳು ಆರೋಪಗಳನ್ನು ಮಾಡಿಸಿದ್ದರು. ಆದರೂ ಅವರು ಮಣ್ಣಿನ ಮಕ್ಕಳು ಎಂದು ಜೆಡಿಎಸ್ ನವರು ಹೇಳುತ್ತಾರೆ. ಆದರೆ ನಾವು ರೈತರ ಮಕ್ಕಳಿದ್ದೀವಿ ಎಂದು ಸಿದ್ದರಾಮಯ್ಯ ಜೆಡಿಎಸ್ ವರಿಷ್ಠರನ್ನು ಲೇವಡಿ ಮಾಡಿದರು.

ಇನ್ನು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ ಸಿದ್ದರಾಮಯ್ಯ ಅವರು, ಇದೊಂದು ದರಿದ್ರ ಸರ್ಕಾರ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಮುಂದೆ  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದ ಸಿದ್ದರಾಮಯ್ಯ ಅವರು, ನಾವು ಅಧಿಕಾರದಲ್ಲಿ ಇದ್ದಾಗ ಹಣಕಾಸಿನ ಸಮಸ್ಯೆ ಇರಲಿಲ್ಲ. ಆದರೆ  ಈಗಿನ  ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ರಾಜ್ಯದಲ್ಲಿ ದರಿದ್ರ ಸರ್ಕಾರವಿದೆ. ಬುದ್ದಿ ಇಲ್ಲ ಇವರಿಗೆ. ನಾವು ಅಧಿಕಾರದಲ್ಲಿ ಇದ್ದಾಗ  15 ಲಕ್ಷ ಮನೆಗಳನ್ನ ಬಡವರಿಗೆ ನೀಡಿದ್ದೇವೆ. ಈಗಿನ ಸರ್ಕಾರ ನಮ್ಮೆಲ್ಲ ಜನಪ್ರಿಯ ಯೋಜನೆಗಳ ಅನುದಾನ ಕಡಿತ ಮಾಡಿದೆ ಎಂದು ಆರೋಪಿಸಿದರು.

ಇದನ್ನು ಓದಿ: Lakshmi Hebbalkar: IT ರೆಡ್ ಮಾಡಿಸಿದ್ರು MLA ಆದೆ, ವೈಯಕ್ತಿಕ ಟೀಕೆ ಮಾಡ್ತಿದ್ದಾರೆ ಮುಂದೆ ಮಂತ್ರಿ ಆಗ್ತಿನಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

ಇನ್ನು ಪಡಿತರ ಅಕ್ಕಿಯ ಪ್ರಮಾಣ 5 ಕೆಜಿಗೆ ಇಳಿಕೆ ಮಾಡಿದ್ದು 7 ಕೆಜಿ ಅಕ್ಕಿ ಕೊಟ್ಟರೆ ಇವರ  ಅಪ್ಪನ ಮನೆ ಗಂಟು ಹೋಗುತ್ತಾ ಎಂದು ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದರು. ಇದೇ ವಿಚಾರವಾಗಿ ಸಚಿವ ಉಮೇಶ್ ಕತ್ತಿ 5 ಕೆಜಿ ಅಕ್ಕಿ ಸಾಕು ಅಂತಾನೆ. ಅವನಿಗೆ ಶುಗರ್ ಇರಬೇಕು, ದುಡಿಯೋ ಜನರು ಹೊಟ್ಟೆ ತುಂಬಾ ಊಟ ಮಾಡಲಿ ಎಂದು 7 ಕೆಜಿ ಘೊಷಿಸಿದ್ದು ಎನ್ನುತ್ತಾ, ಸಚಿವ ಉಮೇಶ್ ಕತ್ತಿ ವಿರುದ್ದ‌ ಸಿದ್ದರಾಮಯ್ಯ ಅವರು ಏಕವಚನದಲ್ಲೆ ವಾಗ್ದಾಳಿ ನಡೆಸಿದರು.
Published by:HR Ramesh
First published: