• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Western Ghats: ಪಶ್ಚಿಮಘಟ್ಟ ಸಾಲಿನ ಶೋಲಾ ಅರಣ್ಯಕ್ಕೂ ಸಂಚಕಾರ; ವರ್ಷಪೂರ್ತಿನೀರು ಹರಿಸುವ ಕಾನನಕ್ಕೂ ಕೊಡಲಿ ಏಟು!

Western Ghats: ಪಶ್ಚಿಮಘಟ್ಟ ಸಾಲಿನ ಶೋಲಾ ಅರಣ್ಯಕ್ಕೂ ಸಂಚಕಾರ; ವರ್ಷಪೂರ್ತಿನೀರು ಹರಿಸುವ ಕಾನನಕ್ಕೂ ಕೊಡಲಿ ಏಟು!

ಶೋಲಾ ಅರಣ್ಯ

ಶೋಲಾ ಅರಣ್ಯ

ಕಾಫಿನಾಡಲ್ಲಿ ಲಕ್ಷಾಂತರ ಎಕರೆ ಪ್ರದೇಶವನ್ನು ಒತ್ತುವರಿ ಮಾಡಿರುವ ಮನುಷ್ಯನ ಕಣ್ಣು ಇದೀಗ ಶೋಲಾ ಅರಣ್ಯದ ಮೇಲೂ ಬಿದ್ದಿದೆ. ಕಾಡನ್ನು ನಿರ್ಮಿಸೋದು ಕಷ್ಟಸಾಧ್ಯ. ಇರುವುದನ್ನು ಉಳಿಸಿಕೊಳ್ಳುವ ಬದಲು ಅದನ್ನೇ ನಾಶ ಮಾಡಲು ಹೊರಟಿರುವುದು ನಿಜಕ್ಕೂ ದುರಂತ. ಹಾಗಾಗಿ, ಸರ್ಕಾರದ ಜೊತೆಗೆ ಜನರು ಕೂಡ ಈ ಅಪರೂಪದ ನಿಸರ್ಗ ಮಾತೆಯನ್ನು ಉಳಿಸಿಕೊಳ್ಳಲು ಶ್ರಮಿಸಬೇಕಿದೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು: ಕಾಫಿನಾಡಲ್ಲಿ ಲಕ್ಷಾಂತರ ಎಕರೆ ಪ್ರದೇಶವನ್ನು ಒತ್ತುವರಿ ಮಾಡಿರೋ ಮನುಷ್ಯನ ಕಣ್ಣು ಇದೀಗ ಚಿಕ್ಕಮಗಳೂರಿನ ಶೋಲಾ ಅರಣ್ಯದ (Shola Forest In Chikkamagaluru) ಮೇಲೂ ಬಿದ್ದಿದೆ. ಅಪರೂಪದ ನಿಸರ್ಗ ಮಾತೆಯ ಕೊಡುಗೆಯಾಗಿರುವ ಈ ಕಾಡನ್ನು ಉಳಿಸಿ- ಬೆಳೆಸಿಬೇಕೆಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಾರೆ. ದೇಶದಲ್ಲಿ ನೋಡ ಸಿಗುವ 16 ಪ್ರಬೇಧದ ಕಾಡುಗಳಲ್ಲೇ ನಂಬರ್ 1 ಡೆನ್ಸಿಟಿ ಫಾರೆಸ್ಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವುದೇ ಈ ಶೋಲಾ ಅರಣ್ಯ. ಇಲ್ಲಿ ಸೂರ್ಯನ ಬೆಳಕು ನೆಲ ಮುಟ್ಟೋದು ಅನುಮಾನ. ಅಷ್ಟು ದಟ್ಟಾರಣ್ಯದ ಮಳೆ ಕಾಡು. ಬೆಟ್ಟಗುಡ್ಡಗಳ ಸೌಂದರ್ಯವನ್ನು ಇಮ್ಮಡಿಗೊಳಿಸೋದೇ ಈ ಶೋಲಾ ಅರಣ್ಯ. ವರ್ಷಪೂರ್ತಿ ನೀರು ಹರಿಸುವ ಆ ಶೋಲಾ ಕಾಡುಗಳು ಮನುಷ್ಯನ ದುರಾಸೆಗೆ ಬಲಿಯಾಗುತ್ತಿರುವಂತಿದೆ. ವೇದಾ ನದಿಯ ಉಗಮ ಸ್ಥಾನವೂ ಆಗಿರುವ ಈ ಶೋಲಾ ಅರಣ್ಯದ ನಾಶ ಮಡಿಕೇರಿಯ ದುರಂತಕ್ಕೆ ಮುನ್ನುಡಿ ಬರೆಯುತ್ತಾ ಕಾಫಿ ನಾಡು ಎಂಬ ಪ್ರಶ್ನೆ ಮೂಡಿದೆ.


ಕಾಫಿನಾಡು ಚಿಕ್ಕಮಗಳೂರು, ರಾಜ್ಯ, ದೇಶದ ಮೂಲೆ-ಮೂಲೆಗಳಿಂದ ಬರೋ ಪ್ರವಾಸಿಗರ ಹಾಟ್ ಸ್ಪಾಟ್. ಆದರೆ, ಇಲ್ಲಿರುವವರಿಗೆ ಗೊತ್ತು ಇಲ್ಲಿನ ಕಷ್ಟ-ಸುಖ. ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಪ್ರವಾಸಿ ಸ್ಥಳವಾಗಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ಪ್ರಮುಖವಾಗಿ ಕಾಣ ಸಿಗುವುದೇ ಈ ಶೋಲಾ ಅರಣ್ಯ. ಮುಳ್ಳಯ್ಯನಗಿರಿ ಸೌಂದರ್ಯವೂ ಇದೇ ಕಾಡು. ದಟ್ಟ ಕಾನನದಿಂದ ಕೂಡಿದ್ದು ಅನೇಕ ನದಿ- ತೊರೆಗಳು, ವೇದಾ ನದಿಯ ಉಗಮ ಸ್ಥಾನ ಕೂಡ. ಎರಡು ಗುಡ್ಡಗಳ ನಡುವೆ ಹುಟ್ಟಿ ಬೆಳೆಯೋ ಈ ಶೋಲಾ ಕಾಡು ವರ್ಷಪೂರ್ತಿ ಹಚ್ಚ ಹಸಿರಿನಿಂದ ಕೂಡಿರುತ್ತೆ. ಗುಡ್ಡಗಳಿಂದ ಹರಿದು ಬರೋ ನೀರನ್ನ ತನ್ನ ಉದರದಲ್ಲಿ ಹಿಡಿದಿಟ್ಟು ವರ್ಷಪೂರ್ತಿ ಹರಿಸುತ್ತಾ ಅಂತರ್ಜಲವನ್ನೂ ಹೆಚ್ಚಿಸುತ್ತೆ.


ಚಿಕ್ಕಮಗಳೂರು ನಗರ ಸೇರಿದಂತೆ ಅಗಳಖಾನ್, ರುದ್ರೇಶ್ವರ, ಅಲ್ಲಂಪುರ, ಕವಿಕಲ್ಗಂಡಿ, ಅರಳಗುಪ್ಪೆ ಸೇರಿದಂತೆ ಅನೇಕ ಹಳ್ಳಿಗಳ ನೀರಿನ ಮೂಲವೂ ಇದೇ ಕಾಡು. ಆದ್ರೆ, ಉಳ್ಳವರು ತಮ್ಮ ಪ್ರಭಾವ ಬಳಸಿಕೊಂಡು ಈ ಅಪರೂಪದ ಬೆಟ್ಟವನ್ನೂ ಅಗೆದು ಕಾಫಿತೋಟ ಮಾಡಲು ಮುಂದಾಗಿದ್ದಾರೆ. ಇದರಿಂದ ಕಾಫಿನಾಡಲ್ಲೂ ಮತ್ತೊಂದು ಮಡಿಕೇರಿ ಅನಾಹುತ ಸಂಭವಿಸಬಹುದು ಅನ್ನೋ ಆತಂಕ ಸ್ಥಳಿಯರನ್ನು ಕಾಡ್ತಿದೆ. ಶೋಲಾ ಅರಣ್ಯ ಕಾಣ ಸಿಗುವುದೇ ತುಂಬಾ ವಿರಳ. ಶೋಲಾ ಕಾಡು ವರ್ಷವಿಡಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿಭಿನ್ನವಾಗಿದೆ. ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಮಾತ್ರ ಇರುವ ಈ ದಟ್ಟಾರಣ್ಯ ಕಾಫಿನಾಡಲ್ಲಿ ಯಥೇಚ್ಛವಾಗಿದೆ. ಅದು ಜಿಲ್ಲೆಯ ಸಂಪತ್ತು ಕೂಡ. ಇದನ್ನ ಉಳಿಸಿ ಬೆಳೆಸಬೇಕಾಗಿರುವುದು ಜಿಲ್ಲಾಡಳಿತದ ಜೊತೆ ಪ್ರತಿಯೊಬ್ಬ ಕಾಫಿನಾಡಿಗನ ಜವಾಬ್ದಾರಿ. ಈ ಕಾಡು ಸಸ್ಯಹಾರಿ ಹಾಗೂ ಮಾಂಸಹಾರಿ ಪ್ರಾಣಿಗಳೆರಡಕ್ಕೂ ಕೂಡ ಪ್ರಿಯವಾದ ಕಾಡು. ಇಲ್ಲಿನ ಗಿಡ ಮರಗಳನ್ನ ನಂಬಿ ಸಸ್ಯಹಾರಿಗಳು ಬದುಕ್ತಿದ್ರೆ, ಸಸ್ಯಹಾರಿಗಳನ್ನ ಅವಲಂಬಿಸಿ ಮಾಂಸಹಾರಿ ಪ್ರಾಣಿಗಳು ಬದುಕ್ತಿವೆ. ಆದರೆ, ಇಂತಹ ಕಾಡುಗಳನ್ನ ಯಾರೋ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕಾಫಿ ಗಿಡ ನೆಡುವ ಸಲುವಾಗಿ ಕಡಿಯುತ್ತಿರುವುದು ನಮ್ಮ ಅಂತ್ಯಕ್ಕೆ ನಾವೇ ಬುನಾದಿ ಹಾಕಿ ಕೊಟ್ಟಂತಾಕ್ತಿದೆ. ಹಾಗಾಗಿ, ಸ್ಥಳೀಯರು ಶೋಲಾ ಅರಣ್ಯದ ರಕ್ಷಣೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಇದನ್ನು ಓದಿ: ಕೆಟ್ಟ ಹವಾಮಾನದಲ್ಲೂ ನಿಖರವಾಗಿ ವೈಮಾನಿಕ ದಾಳಿ ನಡೆಸುವ Akash Prime ಕ್ಷಿಪಣಿ ಪ್ರಯೋಗ ಯಶಸ್ವಿ!


ಒಟ್ಟಾರೆ, ಕಾಫಿನಾಡಲ್ಲಿ ಲಕ್ಷಾಂತರ ಎಕರೆ ಪ್ರದೇಶವನ್ನು ಒತ್ತುವರಿ ಮಾಡಿರುವ ಮನುಷ್ಯನ ಕಣ್ಣು ಇದೀಗ ಶೋಲಾ ಅರಣ್ಯದ ಮೇಲೂ ಬಿದ್ದಿದೆ. ಕಾಡನ್ನು ನಿರ್ಮಿಸೋದು ಕಷ್ಟಸಾಧ್ಯ. ಇರುವುದನ್ನು ಉಳಿಸಿಕೊಳ್ಳುವ ಬದಲು ಅದನ್ನೇ ನಾಶ ಮಾಡಲು ಹೊರಟಿರುವುದು ನಿಜಕ್ಕೂ ದುರಂತ. ಹಾಗಾಗಿ, ಸರ್ಕಾರದ ಜೊತೆಗೆ ಜನರು ಕೂಡ ಈ ಅಪರೂಪದ ನಿಸರ್ಗ ಮಾತೆಯನ್ನು ಉಳಿಸಿಕೊಳ್ಳಲು ಶ್ರಮಿಸಬೇಕಿದೆ.


ವರದಿ: ವೀರೇಶ್ ಹೆಚ್ ಜಿ

top videos
    First published: